ರಾಯ್ಪುರ, ಡಿ.2: ಆತಿಥೇಯ ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ(IND vs SA) ನಡುವಣ ಎರಡನೇ ಏಕದಿನ ಪಂದ್ಯ ಬುಧವಾರ ರಾಯ್ಪುರದ ಶಹೀದ್ ವೀರನಾರಾಯಣ ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಭಾರತಕ್ಕೆ ಸರಣಿ ಕೈವಶ ಮಾಡಿಕೊಳ್ಳವ ತವಕವಾದರೆ, ಅತ್ತ ದಕ್ಷಿಣ ಆಫ್ರಿಕಾಗೆ ಸರಣಿ ಜೀವಂತವಿರಿಸಿಕೊಳ್ಳಬೇಕಾದ ಒತ್ತಡ. ಹೀಗಾಗಿ ಈ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರುವ ನಿರೀಕ್ಷೆ ಅಭಿಮಾನಿಗಳದ್ದು. ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ಕುರಿತ ವರದಿ ಇಲ್ಲಿದೆ.
ಪಿಚ್ ರಿಪೋರ್ಟ್
ಶಹೀದ್ ವೀರನಾರಾಯಣ ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಕೇವಲ ಎರಡನೇ ಏಕದಿನ ಪಂದ್ಯ ಇದಾಗಿದೆ. ಮೊದಲ ಪಂದ್ಯವನ್ನು 2023ರಲ್ಲಿ ಆಡಲಾಗಿತ್ತು. ಎದುರಾಳಿ ನ್ಯೂಜಿಲ್ಯಾಂಡ್. ಪಂದ್ಯವನ್ನು ಭಾರತ 8 ವಿಕೆಟ್ ಅಂತರದಿಂದ ಗೆದ್ದಿತ್ತು. ಎರಡು ವರ್ಷಗಳ ಬಳಿಕ ಇಲ್ಲಿ ಪಂದ್ಯ ನಡೆಯುತ್ತಿರುವ ಕಾರಣ ಪಿಚ್ ವರ್ತನೆ ಹೇಗಿರಲಿದೆ ಎಂದು ಸ್ಪಷ್ಟವಾಗಿ ಹೇಳುವುದು ಕಷ್ಟಕರ. ಹಾಗಿದ್ದರೂ ಇಲ್ಲಿನ ನಡೆದ ಐಪಿಎಲ್ ಮತ್ತು ಟಿ20 ಪಂದ್ಯಗಳ ಫಲಿತಾಂಶ ನೋಡುವಾಗ ಬೌಲಿಂಗ್ ಸ್ನೇಹಿ ಪಿಚ್ ಮತ್ತು ಮಧ್ಯಮ ಸ್ಕೋರಿಂಗ್ ಮೈದಾನವಾಗಿದೆ. ವಿಶೇಷವಾಗಿ ವೇಗದ ಬೌಲರ್‌ಗಳು ಹೆಚ್ಚಿನ ಸ್ವಿಂಗ್ ಪಡೆಯಬಹುದು.
ಮಳೆ ಭೀತಿ ಇಲ್ಲ
ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲವಾದ ಕಾರಣ ಸಂಪೂರ್ಣವಾಗಿ ಪಂದ್ಯ ಸಾಗಲಿದೆ. ಪಂದ್ಯ ಮಧ್ಯಾಹ್ನ ಆರಂಭವಾಗುವ ಕಾರಣ ಸುಡು ಬಿಸಿಲಿನಿಂದ ಆಟಗಾರರು ದಣಿಯಲಿದ್ದಾರೆ. ಸಂಜೆ ನಾಲ್ಕು ಗಂಟೆ ತನಕ ತಾಪಮಾನ 27 ಡಿಗ್ರಿಯಷ್ಟು ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ IND vs SA: ಸಚಿನ್-ದ್ರಾವಿಡ್ ದಾಖಲೆ ಮುರಿದ ಕೊಹ್ಲಿ-ರೋಹಿತ್
ಭಾರತ ತಂಡದಲ್ಲಿ ಯಾವುದೇ ಆಟಗಾರ ಗಾಯದ ಸಮಸ್ಯೆ ಎದುರಿಸಿಲ್ಲ. ಇದರಿಂದ ಗೆಲುವಿನ ಹನ್ನೊಂದರ ಬಳಗದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಆದರೆ ದಕ್ಷಿಣ ಆಫ್ರಿಕಾ ಪರ ಒಂದು ಬದಲಾವಣೆ ಖಚಿತ. ಖಾಯಂ ನಾಯಕ ಟೆಂಬ ಬವುಮಾ ತಂಡಕ್ಕೆ ಮರಳುವ ಸಾಧ್ಯತೆ ಇದೆ.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಋತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್, ಕೆಎಲ್ ರಾಹುಲ್(ನಾಯಕ ಮತ್ತು ವಿ.ಕೀ.), ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ.
ದಕ್ಷಿಣ ಆಫ್ರಿಕಾ: ರಿಯಾನ್ ರಿಕೆಲ್ಟನ್, ಕ್ವಿಂಟನ್ ಡಿ ಕಾಕ್(ವಿ.ಕೀ.), ಐಡೆನ್ ಮಾರ್ಕ್ರಾಮ್(ನಾಯಕ), ಟೆಂಬ ಬವುಮಾ, ಟೋನಿ ಡಿ ಝೋರ್ಜಿ, ಡೆವಾಲ್ಡ್ ಬ್ರೆವಿಸ್, ಮಾರ್ಕೊ ಜಾನ್ಸೆನ್, ಕಾರ್ಬಿನ್ ಬಾಷ್, ಪ್ರೆನೆಲನ್ ಸುಬ್ರಾಯೆನ್, ನಾಂಡ್ರೆ ಬರ್ಗರ್, ಒಟ್ನೀಲ್ ಬಾರ್ಟ್‌ಮ್ಯಾನ್.
ನೇರ ಪ್ರಸಾರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್/ಜಿಯೋ-ಹಾಟ್‌ಸ್ಟಾರ್
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ.