ಗುವಾಹಟಿ, ನ.25: ಭಾರತ ವಿರುದ್ಧದ ದ್ವಿತೀಯ ಟೆಸ್ಟ್(IND vs SA 2nd Test) ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ( India vs South Africa) ತಂಡ 548ರನ್‌ಗಳ ಬೃಹತ್ ಮುನ್ನಡೆ ಸಾಧಿಸಿ ಡಿಕ್ಲೇರ್ ಘೋಷಿಸಿದೆ. ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ದಿನದಾಟದ ಅಂತ್ಯಕ್ಕೆ 27ರನ್‌ಗೆ 2 ವಿಕೆಟ್ ಕಳೆದುಕೊಂಡು ಇನ್ನೂ 522 ರನ್ ಹಿನ್ನಡೆಯಲ್ಲಿದೆ. ಬುಧವಾರ ಅಂತಿಮ ದಿನವಾಗಿದ್ದು ಸದ್ಯ ಭಾರತದ ಮುಂದೆ ಡ್ರಾ ಮಾಡಿಕೊಳ್ಳುವ ಯೋಜನೆಯೊಂದೆ ಬಾಕಿ ಉಳಿದಿದೆ. ಪವಾಡವೊಂದು ಸಂಭವಿಸಿದರಷ್ಟೇ ಗೆಲುವು ಸಾಧ್ಯ.
ದ್ವಿತೀಯ ಇನಿಂಗ್ಸ್‌ನಲ್ಲಿ 3ನೇ ದಿನಕ್ಕೆ ವಿಕೆಟ್ ನಷ್ಟವಿಲ್ಲದೆ 26 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾ, 4ನೇ ದಿನ ಉತ್ತಮ ಬ್ಯಾಟಿಂಗ್ ನಡೆಸಿತು. 5 ವಿಕೆಟ್‌ಗೆ 260 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಆರಂಭಿಕರಾದ ರಿಕಲ್ಟನ್(35) ಮತ್ತು ಮಾರ್ಕ್ರಮ್(29) ರನ್ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ ಮೊದಲ ವಿಕೆಟ್‌ಗೆ 59 ರನ್‌ಗಳ ಜತೆಯಾಟ ನಡೆಸಿತು. ಆ ಬಳಿಕ ಬಂದ ಸ್ಟಬ್ಸ್ ಆಕರ್ಷಕ ಅರ್ಧಶತಕ ಬಾರಿಸಿದರು.
180 ಎಸೆತ ಎದುರಿಸಿದ ಸ್ಟಬ್ಸ್ 9 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 90 ರನ್ ಬಾರಿಸಿದರು. ಶತಕದತ್ತ ದಾಪುಗಾಲಿಡುತ್ತಿದ್ದ ಅವರನ್ನು ಆಲ್‌ರೌಂಡರ್ ರವೀಂದ್ರ ಜಡೇಜಾ ಕ್ಲೀನ್ ಬೌಲ್ಡ್ ಮಾಡಿ ಶತಕಕ್ಕೆ ಅಡ್ಡಿಪಡಿಸಿದರು. ನಾಯಕ ಟೆಂಬ ಬವುಮಾ ಅವರ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಕೇವಲ 3ರನ್‌ಗೆ ವಿಕೆಟ್ ಕಳೆದುಕೊಂಡು ನಿರಾಸೆ ಮೂಡಿಸಿದರು. ಟೋನಿ ಡಿ ಜೋರ್ಜಿ 49 ರನ್‌ಗೆ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ದಕ್ಷಿಣ ಆಫ್ರಿಕಾ ಇನಿಂಗ್ಸ್ ಡಿಕ್ಲೇರ್ ಘೋಷಿಸಿತು. ಮಲ್ಡರ್ ಅಜೇಯ 35ರನ್ ಗಳಿಸಿದರು.
ಇದನ್ನೂ ಓದಿ 2 ವಿಕೆಟ್ ಕಿತ್ತು ಕುಂಬ್ಳೆ, ಅಶ್ವಿನ್ ಜತೆ ಎಲೈಟ್ ಪಟ್ಟಿ ಸೇರಿದ ಜಡೇಜಾ
ಭಾರತ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ ಹೊರತುಪಡಿಸಿ ಉಳಿದ ಬೌಲರ್‌ಗಳು ಯಶಸ್ಸು ಕಾಣಲಿಲ್ಲ. ಜಡೇಜಾ 62 ರನ್‌ಗೆ 4 ವಿಕೆಟ್ ಕಿತ್ತರು. ಇದೇ ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ 50 ಪ್ಲಸ್ ವಿಕೆಟ್ ಕಲೆಹಾಕಿದ 5ನೇ ಭಾರತೀಯ ಬೌಲರ್ ಎನಿಸಿಕೊಂಡರು. ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಕುಂಬ್ಳೆ ಹೆಸರಿನಲ್ಲಿದೆ. 21 ಟೆಸ್ಟ್ ಪಂದ್ಯಗಳನ್ನು ಆಡಿ 84 ವಿಕೆಟ್‌ಗಳನ್ನು ಕೆಡವಿದ್ದಾರೆ. 64 ವಿಕೆಟ್ ಪಡೆದಿರುವ ಜಾವಗಲ್ ಶ್ರೀನಾಥ್ ಎರಡನೇ, ಹರ್ಭಜನ್ ಸಿಂಗ್(60) ಮೂರನೇ ಸ್ಥಾನದಲ್ಲಿದ್ದಾರೆ.
ದ್ವಿತೀಯ ಇನಿಂಗ್ಸ್‌ನಲ್ಲಿ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ನಿತೀಶ್ ಕುಮಾರ್ ರೆಡ್ಡಿ ವಿಕೆಟ್ ಲೆಸ್ ಎನಿಸಿಕೊಂಡರು. ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಕಿತ್ತರು. ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆದಿದ್ದ ಕುಲ್‌ದೀಪ್ ಯಾದವ್ ದ್ವಿತೀಯ ಇನಿಂಗ್ಸ್‌ನಲ್ಲಿ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. 12 ಓವರ್ ಬೌಲಿಂಗ್ ನಡೆಸಿ 48 ರನ್ ಬಿಟ್ಟುಕೊಟ್ಟರು.
ಭಾರತ ಮೊದಲ ಇನಿಂಗ್ಸ್‌ನಲ್ಲಿ 83.5 ಓವರಲ್ಲಿ 201 ರನ್‌ಗೆ ಆಲೌಟ್ ಆಯಿತು. ಜಾನ್ಸೆನ್ 48 ರನ್‌ಗೆ 6 ವಿಕೆಟ್ ಕಬಳಿಸಿ ಭಾರತಕ್ಕೆ ಇನ್ನಿಲ್ಲದಂತೆ ಕಾಡಿದರು. 288 ರನ್ ಮುನ್ನಡೆ ಪಡೆದರೂ ದಕ್ಷಿಣ ಆಫ್ರಿಕಾ ಫಾಲೋ ಆನ್ ಹೇರಲಿಲ್ಲ. ಸದ್ಯದ ಮಟ್ಟಿಗೆ ಟೆಂಬ ಬವುಮಾ ಪಡೆ ಐತಿಹಾಸಿಕ ಸರಣಿ ಕ್ಲೀನ್ ಸ್ವೀಪ್ ಬಗ್ಗೆ ಕನಸು ಕಾಣುತ್ತಿದೆ.