ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಏಕದಿನ ಸರಣಿ ಗೆದ್ದರೂ ಭಾರತಕ್ಕೆ ಬಿತ್ತು ದಂಡದ ಬರೆ

ನಾಯಕ ಕೆ.ಎಲ್‌ ರಾಹುಲ್ ಅಪರಾಧವನ್ನು ಒಪ್ಪಿಕೊಂಡ ಕಾರಣ ಔಪಚಾರಿಕ ವಿಚಾರಣೆಯ ಅಗತ್ಯವಿರಲಿಲ್ಲ. ಆನ್-ಫೀಲ್ಡ್ ಅಂಪೈರ್‌ಗಳಾದ ರಾಡ್ ಟಕರ್ ಮತ್ತು ರೋಹನ್ ಪಂಡಿತ್, ಮೂರನೇ ಅಂಪೈರ್ ಸ್ಯಾಮ್ ನೊಗಾಜ್‌ಸ್ಕಿ ಮತ್ತು ನಾಲ್ಕನೇ ಅಂಪೈರ್ ಜಯರಾಮನ್ ಮದನಗೋಪಾಲ್ ಈ ಆರೋಪವನ್ನು ಹೊರಿಸಿದರು.

Team india

ದುಬೈ, ಡಿ.8: ದಕ್ಷಿಣ ಆಫ್ರಿಕಾ(IND vs SA) ವಿರುದ್ಧ ಭಾರತ ಏಕದಿನ ಸರಣಿ ಗೆದ್ದರೂ, ರಾಯ್ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ ಭಾರತಕ್ಕೆ ಪಂದ್ಯ ಶುಲ್ಕದ ಶೇಕಡಾ 10 ರಷ್ಟು ದಂಡ(India fined for slow over-rate) ವಿಧಿಸಲಾಗಿದೆ. ಆ ಪಂದ್ಯದಲ್ಲಿ ಭಾರತ ಸೋಲು ಕೂಡ ಕಂಡಿತ್ತು.

ಸಮಯ ಭತ್ಯೆಯನ್ನು ಪರಿಗಣಿಸಿದ ನಂತರ ಕೆ.ಎಲ್. ರಾಹುಲ್ ತಂಡವು ಗುರಿಗಿಂತ ಎರಡು ಓವರ್‌ಗಳು ಕಡಿಮೆ ಇದ್ದ ಕಾರಣ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಯ ರಿಚಿ ರಿಚರ್ಡ್‌ಸನ್ ಈ ಶಿಕ್ಷೆಯನ್ನು ವಿಧಿಸಿದರು. ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದ ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಆಟಗಾರರು ನಿಗದಿಪಡಿಸಿದ ಸಮಯದಲ್ಲಿ ಬೌಲ್ ಮಾಡಲು ವಿಫಲವಾದ ಪ್ರತಿ ಓವರ್‌ಗೆ ಅವರ ಪಂದ್ಯ ಶುಲ್ಕದ ಐದು ಪ್ರತಿಶತದಷ್ಟು ದಂಡ ವಿಧಿಸಲಾಗುತ್ತದೆ.

ನಾಯಕ ಕೆ.ಎಲ್‌ ರಾಹುಲ್ ಅಪರಾಧವನ್ನು ಒಪ್ಪಿಕೊಂಡ ಕಾರಣ ಔಪಚಾರಿಕ ವಿಚಾರಣೆಯ ಅಗತ್ಯವಿರಲಿಲ್ಲ. ಆನ್-ಫೀಲ್ಡ್ ಅಂಪೈರ್‌ಗಳಾದ ರಾಡ್ ಟಕರ್ ಮತ್ತು ರೋಹನ್ ಪಂಡಿತ್, ಮೂರನೇ ಅಂಪೈರ್ ಸ್ಯಾಮ್ ನೊಗಾಜ್‌ಸ್ಕಿ ಮತ್ತು ನಾಲ್ಕನೇ ಅಂಪೈರ್ ಜಯರಾಮನ್ ಮದನಗೋಪಾಲ್ ಈ ಆರೋಪವನ್ನು ಹೊರಿಸಿದರು.

ಪಂದ್ಯದಲ್ಲಿ ಸೋಲು ಕಂಡಿದ್ದ ಭಾರತ

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ್ದ ಭಾರತ, ವಿರಾಟ್‌ ಕೊಹ್ಲಿ 53ನೇ, ಋತುರಾಜ್‌ ಗಾಯಕ್ವಾಡ್‌ ಸಿಡಿಸಿದ ಚೊಚ್ಚಲ ಶತಕದ ನೆರವಿನಿಂದ ತಂಡ 5 ವಿಕೆಟ್‌ಗೆ 358 ರನ್‌ ಕಲೆಹಾಕಿತ್ತು. ಬೃಹತ್‌ ಮೊತ್ತ ಬೆನ್ನತ್ತಿದ ದ.ಆಫ್ರಿಕಾ ತಂಡ 49.2 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟದಲ್ಲಿ ಜಯಗಳಿಸಿತು. ಆರಂಭಿಕ ಆಟಗಾರ ಏಡನ್‌ ಮಾರ್ಕ್‌ರಮ್‌(98 ಎಸೆತಕ್ಕೆ 110) ಏಕದಿನದಲ್ಲಿ 4ನೇ ಶತಕ ಸಿಡಿಸಿದರೆ, ನಾಯಕ ತೆಂಬಾ ಬವುಮಾ 46, ಮ್ಯಾಥ್ಯೂ ಬ್ರೀಟ್ಸ್‌ಕೆ 68, ಡೆವಾಲ್ಡ್‌ ಬ್ರೆವಿಸ್‌ 34 ಎಸೆತಕ್ಕೆ 54 ರನ್‌ ಸಿಡಿಸಿ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಕೊನೆಯಲ್ಲಿ ಅಬ್ಬರಿಸಿದ ಕಾರ್ಬಿನ್‌ ಬಾಶ್‌ 15 ಎಸೆತಕ್ಕೆ ಔಟಾಗದೆ 29 ರನ್‌ ಗಳಿಸಿ ಗೆಲುವಿನ ದಡ ಸೇರಿಸಿದರು.

ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ ಪರ ಯಶಸ್ವಿ ಜೈಸ್ವಾಲ್‌(22) ಮತ್ತೆ ವಿಫಲರಾದರೆ, ರೋಹಿತ್‌ ಶರ್ಮಾ(14) ಕಳೆದ ಪಂದ್ಯದ ಲಯ ಕಂಡುಕೊಳ್ಳಲು ವಿಫಲರಾದರು. ಈ ವೇಳೆ ತಂಡಕ್ಕೆ ಆಸರೆಯಾಗಿದ್ದ ಕೊಹ್ಲಿ ಹಾಗೂ ಋತುರಾಜ್‌. ಇವರಿಬ್ಬರು 3ನೇ ವಿಕೆಟ್‌ಗೆ 156 ಎಸೆತಗಳಲ್ಲಿ 196 ರನ್‌ ಜೊತೆಯಾಟವಾಡಿದರು. ದ.ಆಫ್ರಿಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಇವರಿಬ್ಬರೂ ವೈಯಕ್ತಿಕ ಶತಕ ಸಿಡಿಸಿ ಮಿಂಚಿದರು. ಆದರೆ ಪಂದ್ಯ ಸೋತ ಕಾರಣ ಶತಕ ವ್ಯರ್ಥವಾಯಿತು.