ವಿಶಾಖಪಟ್ಟಣಂ, ಡಿ.21: ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಉಪನಾಯಕಿ ಸ್ಮೃತಿ ಮಂಧಾನ ಅವರು ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಮಹಿಳಾ ಟಿ20ಗಳಲ್ಲಿ 4,000 ರನ್‌ಗಳ ಗಡಿ ದಾಟಿದ ವಿಶ್ವದ ಎರಡನೇ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನ್ಯೂಜಿಲ್ಯಾಂಡ್‌ನ ಸೂಜಿ ಬೇಟ್ಸ್ ಮೊದಲ ಆಟಗಾರ್ತಿ.
ಏಕದಿನ ವಿಶ್ವಕಪ್ ಗೆಲುವಿನ ಬಳಿಕ ಮಂಧಾನ, ಆಡಿದ ಮೊದಲ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಚೇಸಿಂಗ್ ವೇಳೆ 18 ರನ್ ಗಳಿಸುತ್ತಿದ್ದಂತೆ ಮಂಧಾನ ಈ ಮೈಲುಗಲ್ಲು ತಲುಪಿದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡರು. ಸದ್ಯ ಸ್ಮೃತಿ 4007* ರನ್ ಬಾರಿಸಿದ್ದಾರೆ. ಮೊದಲ ಸ್ಥಾನದಲ್ಲಿರುವ ಸೂಜಿ ಬೇಟ್ಸ್ ಹಿಂದಿಕ್ಕಲು ಸ್ಮೃತಿಗೆ ಇನ್ನು 709 ರನ್ ಅಗತ್ಯವಿದೆ. ಹರ್ಮನ್‌ಪ್ರೀತ್ ಕೌರ್ 3,669* ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಈಗಾಗಲೇ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸುವ ಹಂತಕ್ಕೆ ತಲುಪಿದ್ದಾರೆ.
ಮಹಿಳಾ ಟಿ20ಐಗಳಲ್ಲಿ ಅತಿ ಹೆಚ್ಚು ರನ್‌ಗಳು
ಸುಜೀ ಬೇಟ್ಸ್ - 177 ಪಂದ್ಯಗಳು, 4716 ರನ್
ಸ್ಮೃತಿ ಮಂಧಾನ - 155 ಪಂದ್ಯಗಳು, 4007 ರನ್
ಹರ್ಮನ್‌ಪ್ರೀತ್ ಕೌರ್ - 183 ಪಂದ್ಯಗಳು, 3,669 ರನ್
ಚಮರಿ ಅಥಪತ್ತು - 147 ಪಂದ್ಯಗಳು, 3473 ರನ್
ಸೋಫಿ ಡಿವೈನ್ - 146 ಪಂದ್ಯಗಳು, 3431 ರನ್
ಪಂದ್ಯ ಗೆದ್ದ ಭಾರತ
ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ ತನ್ನ ಆಯ್ಕೆಗೆ ತಕ್ಕ ಪ್ರದರ್ಶನ ತೋರಿತು. ಶ್ರೀಲಂಕಾವನ್ನು 121ರನ್‌ಗೆ ಕಟ್ಟಿ ಹಾಕಿತು. ಬಳಿಕ ಸಣ್ಣ ಮೊತ್ತವನ್ನು ಬೆನ್ನಟ್ಟಿದ ಭಾರತ 14.4 ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 122 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಇದನ್ನೂ ಓದಿ U19 Asia Cup Final: ಸೇಡು ತೀರಿಸಿಕೊಂಡ ಪಾಕ್; ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತಕ್ಕೆ ಸೋಲು
ಚೇಸಿಂಗ್ ವೇಳೆ ಜೆಮಿಮಾ ರಾಡ್ರಿಗಸ್ ಆಕರ್ಷಕ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 44 ಎಸೆತಗಳಿಂದ ಅಜೇಯ 69 ರನ್ ಪೇರಿಸಿದರು. ಅವರ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 10 ಬೌಂಡರಿ ಒಳಗೊಂಡಿತ್ತು. ನಾಯಕಿ ಕೌರ್ 19 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತ ಪರ ಪದಾರ್ಪಣೆ ಮಾಡಿದ ವೈಷ್ಣವಿ ಶರ್ಮಾ ವಿಕೆಟ್ ಪಡೆಯಲು ವಿಫಲರಾದರೂ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದರು. 4 ಓವರ್‌ಗೆ ಕೇವಲ 16 ರನ್ ಮಾತ್ರ ಬಿಟ್ಟುಕೊಟ್ಟರು. ಶ್ರೀಲಂಕಾ ಪರ ಆರಂಭಿಕ ಆಟಗಾರ್ತಿ ವಿಷ್ಮಿ ಗುಣರತ್ನೆ ಹೊರತುಪಡಿಸಿ ಉಳಿದವರೆಲ್ಲರೂ ವಿಫಲರಾದರು. 39 ರನ್ ಬಾರಿಸಿದ ಅವರು ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.