ತಿರುವನಂತಪುರಂ, ಸೆ.27: ಆರಂಭದಲ್ಲಿ ಕುಲ್‌ದೀಪ್ ಯಾದವ್ (40ಕ್ಕೆ 4) ಸ್ಪಿನ್ ಕೈಚಳಕ, ಆ ಬಳಿಕ ನಾಯಕ ಶುಭಮನ್ ಗಿಲ್(110) ಮತ್ತು ವಿರಾಟ್ ಕೊಹ್ಲಿಯ(139*) ಸೊಗಸಾದ ಶತಕದ ಬಲದಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.
ಭಾನುವಾರ ಇಲ್ಲಿನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ವೆಸ್ಟ್ ಇಂಡೀಸ್ ತಂಡ ಜಸ್ಟಿನ್ ಗ್ರೀವ್ಸ್(101) ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 295 ರನ್ ಬಾರಿಸಿತು. ಜವಾಬಿತ್ತ ಭಾರತ 41.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 300 ರನ್ ಬಾರಿಸಿ ಗೆಲುವು ದಾಖಲಿಸಿತು.
ಚೇಸಿಂಗ್ ವೇಳೆ ಭಾರತ ತಂಡದ ನಾಯಕ ಶುಭಮನ್ ಗಿಲ್ ಮತ್ತೊಮ್ಮೆ ಅದ್ಭುತ ಆಟ ಪ್ರದರ್ಶಿಸಿದರು. ರೋಹಿತ್ ಶರ್ಮಾ ಅವರೊಂದಿಗೆ ಮೊದಲ ವಿಕೆಟ್‌ಗೆ 74 ರನ್‌ಗಳ ಜೊತೆಯಾಟವನ್ನು ನಡೆಸಿ, ಆ ಬಳಿಕ ವಿರಾಟ್ ಕೊಹ್ಲಿ ಜತೆ ಎರಡನೇ ವಿಕೆಟ್‌ಗೆ 151ರನ್ ರಾಶಿ ಹಾಕಿದರು. 108 ಎಸೆತಗಳಿಂದ 110(13 ಬೌಂಡರಿ, 1 ಸಿಕ್ಸರ್) ರನ್ ಬಾರಿಸಿ ತಮ್ಮ 10ನೇ ಏಕದಿನ ಶತಕವನ್ನು ಪೂರೈಸಿದರು. ಜೇಡನ್ ಸೀಲ್ಸ್ ಅವರ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ಅವರು ಈ ಮೈಲಿಗಲ್ಲನ್ನು ತಲುಪಿದರು. ರೋಹಿತ್ ಶರ್ಮ 32 ರನ್ ಬಾರಿಸಿದರು.
ಏಕದಿನ ಕ್ರಿಕೆಟ್‌ನಲ್ಲಿ 15 ಸಾವಿರ ರನ್ ಪೂರೈಸಿದ ವಿರಾಟ್ ಕೊಹ್ಲಿ
40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕೊಹ್ಲಿ ಆ ಬಳಿಕ ಬಿರುಸಿನ ಬ್ಯಾಟಿಂಗ್ ನಡೆಸಿ 74 ಎಸೆತಗಳಲ್ಲಿ ಶತಕ ಪೂರೈಸಿದರು. ಸಿಕ್ಸರ್ ಮೂಲಕವೇ ಶತಕ ಸಂಭ್ರಮಿಸಿದರು. ಇದು ಏಕದಿನದಲ್ಲಿ ಅವರ 55ನೇ ಶತಕ. ವೆಸ್ಟ್ ಇಂಡೀಸ್ ವಿರುದ್ಧ 10ನೇ ಶತಕ. ಪಂದ್ಯದಲ್ಲಿ ಒಟ್ಟು 88 ಎಸೆತ ಎದುರಿಸಿದ ಕೊಹ್ಲಿ ಬರೋಬ್ಬರಿ 9 ಸಿಕ್ಸರ್ ಮತ್ತು 10 ಬೌಂಡರಿ ಸಿಡಿಸಿ ಅಜೇಯ 139 ರನ್ ಬಾರಿಸಿದರು.
15 ಸಾವಿರ ರನ್
ವಿರಾಟ್ ಕೊಹ್ಲಿ 59 ರನ್ ಪೂರೈಸುತ್ತಿದ್ದಂತೆ ಏಕದಿನದಲ್ಲಿ 15 ಸಾವಿರ ರನ್ ಪೂರೈಸಿದ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡರು. ಸಚಿನ್ ತೆಂಡೂಲ್ಕರ್ ಮೊದಲಿಗ. ಅಗ್ರಸ್ಥಾನದಲ್ಲಿರುವ ಸಚಿನ್ 18,426 ರನ್ ಗಳಿಸಿದ್ದಾರೆ.
ಜಸ್ಟಿನ್ ಗ್ರೀವ್ಸ್ ಶತಕ ವ್ಯರ್ಥ
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ಪರ ಆರಂಭಿಕ ಬ್ಯಾಟರ್ ಜಸ್ಟಿನ್ ಗ್ರೀವ್ಸ್(101) ಶತಕ ಬಾರಿಸಿದ್ದರು. ಆದರೆ ಸೋಲಿನಿಂದ ಅವರ ಶತಕ ವ್ಯರ್ಥವಾಯಿತು. ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್‌ಗೆ ಆರಂಭಿಕರಾದ ಜಾನ್ ಕ್ಯಾಂಪ್‌ಬೆಲ್ ಮತ್ತು ಜಸ್ಟಿನ್ ಗ್ರೀವ್ಸ್ ಸೊಗಸಾದ ಬ್ಯಾಟಿಂಗ್ ಮೂಲಕ ಉತ್ತಮ ಅಡಿಪಾಯ ಹಾಕಿದರು. ಮೊದಲ ವಿಕೆಟ್‌ಗೆ 135 ರನ್ ಒಟ್ಟುಗೂಡಿಸಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ಕೊನೆಗೂ ಕುಲ್‌ದೀಪ್ ಯಾದವ್ ಬೇರ್ಪಡಿಸಿದರು. ಕ್ಯಾಂಪ್‌ಬೆಲ್ ಅವರ ವಿಕೆಟ್ ಕಿತ್ತು ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಕ್ಯಾಂಪ್‌ಬೆಲ್(62) ಅರ್ಧಶತಕ ಬಾರಿಸಿದರು.
ಏಷ್ಯನ್ ಗೇಮ್ಸ್; 8ನೇ ದಿನ 4 ಬೆಳ್ಳಿ, 3 ಕಂಚು ಗೆದ್ದ ಭಾರತ
ಕೆಲ ಕ್ರಮಾಂಕದಲ್ಲಿ ಅಮೀರ್ ಜಂಗೂ(58) ಅಜೇಯ ಅರ್ಧಶತಕ ಮತ್ತು ರೋಸ್ಟನ್ ಚೇಸ್(24) ರನ್ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ನೆರವಾದರು. ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಬೆಂಚ್ ಕಾದಿದ್ದ ಕುಲ್‌ದೀಪ್ ಯಾದವ್ ಈ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ನಾಲ್ಕು ಪ್ರಮುಖ ವಿಕೆಟ್ ಕಿತ್ತರು. ಕನ್ನಡಿಗ ಪ್ರಸಿದ್ಧ್ ಕೃಷ್ಣ(60 ಕ್ಕೆ 2) ಮತ್ತು ನಿತೀಶ್ ಕುಮಾರ್ ರೆಡ್ಡಿ(45ಕ್ಕೆ 1) ವಿಕೆಟ್ ಪಡೆದರು. ದೀರ್ಘಕಾಲದ ಬಳಿಕ ಏಕದಿನ ತಂಡಕ್ಕೆ ಮರಳಿದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ 10 ಓವರ್ ಬೌಲಿಂಗ್ ನಡೆಸಿದರೂ ಕನಿಷ್ಠ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ಸು ಕಾಣಲಿಲ್ಲ.