ಬೆಂಗಳೂರು, ಅ.16: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಟಿ20 ಸರಣಿಯ ಕ್ಲೈಮ್ಯಾಕ್ಸ್ ಶನಿವಾರ(ಅ.17) ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯು 2-2 ಸಮಬಲದಲ್ಲಿರುವ ಹಿನ್ನೆಲೆಯಲ್ಲಿ ನಾಳೆ ನಡೆಯುವ ಐದನೇ ಹಾಗೂ ಅಂತಿಮ ಪಂದ್ಯ ಸರಣಿಯ ವಿಜೇತರನ್ನು ನಿರ್ಧರಿಸಲಿದೆ.
2025ರ ಜೂ.4ರಂದು ಆರ್ಸಿಬಿ ಸಂಭ್ರಮಾಚರಣೆ ವೇಳೆ ಉಂಟಾದ ಭೀಕರ ಕಾಲ್ತುಳಿದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಇದಾಗಿರುವ ಕಾರಣ ಕ್ರಿಕೆಟ್ ಪ್ರೇಮಿಗಳ ಸಂಖ್ಯೆಯೂ ದೊಡ್ಡ ಮಟ್ಟದಲ್ಲಿ ನಿರೀಕ್ಷಿಸಬಹುದು.
ಈ ಸರಣಿಯಲ್ಲಿ ಉಭಯ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಲಕ್ನೋದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಎಂಟು ವಿಕೆಟ್ಗಳ ಜಯದೊಂದಿಗೆ ಭಾರತ ತನ್ನ ಅಭಿಯಾನವನ್ನು ಆರಂಭಿಸಿತು. ನಂತರದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆಲುವು ಸಾಧಿಸಿತು. ಇಂದೋರ್ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತವು ಆಲ್ರೌಂಡ್ ಪ್ರದರ್ಶನದ ಮೂಲಕ ಮತ್ತೆ ಜಯ ಸಾಧಿಸಿತು. ನಾಲ್ಕನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ತಿರುಗೇಟು ನೀಡಿತು. ಇದೀಗ ಸರಣಿಯ ಅಂತಿಮ ಪಂದ್ಯದಲ್ಲಿ ಗೆದ್ದು, ಯಾರು ಸರಣಿ ಗೆಲುವಿನ ನಗೆ ಬೀರಲಿದ್ದಾರೆ ಎಂದು ಕಾದು ನೋಡಬೇಕಿದೆ.
ಭಾರತಕ್ಕೆ ಭುವನೇಶ್ವರ್ ಬಲ
ನಾಲ್ಕನೇ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಚೆಂಡು ತಾಗಿ ಭುಜದ ಗಾಯಕ್ಕೆ ತುತ್ತಾದ ಅರ್ಶ್ದೀಪ್ ಸಿಂಗ್ ಈ ಪಂದ್ಯಕ್ಕೆ ಅಲಭ್ಯರಾದ ಕಾರಣ ಅನುಭವಿ ವೇಗದ ಬೌಲರ್ ಭುವನೇಶ್ವರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅವರು ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತ. ಆರ್ಸಿಬಿಯಲ್ಲಿ ಕಳೆದ ಎರಡು ವರ್ಷಗಳಿಂದ ಭುವಿ ಆಡುತ್ತಿರುವ ಕಾರಣ ಚಿನ್ನಸ್ವಾಮಿ ಮೈದಾನದಲ್ಲಿ ಉತ್ತಮ ಹಿಡಿತವೂ ಇದೆ. ಇದು ತಂಡಕ್ಕೆ ನೆರವಾಗಬಹುದು.
ಸ್ವಿಟ್ಜರ್ಲೆಂಡ್ ಪ್ರವಾಸೋದ್ಯಮದ ಭಾರತ ರಾಯಭಾರಿಯಾದ ಜೆಮಿಮಾ ರೋಡ್ರಿಗಸ್
ಅಪಾಯಕಾರಿ ಹೋಪ್
ವಿಂಡೀಸ್ ನಾಯಕ ಶಾಯ್ ಹೋಪ್ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಸರಣಿಯಲ್ಲಿ ಎರಡು ಶತಕ ಸಿಡಿಸಿ ಮಿಂಚಿದ್ದಾರೆ. ಬ್ಯಾಟಿಂಗ್ ಟ್ರ್ಯಾಕ್ ಚಿನ್ನಸ್ವಾಮಿಯಲ್ಲಿಯೂ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ. ಅವರನ್ನು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯದಂತೆ ನೋಡಿಕೊಂಡರೆ ಭಾರತಕ್ಕೆ ಯಶಸ್ಸು ಖಚಿತ.
ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ವಾಹನ ನಿಲುಗಡೆ ನಿರ್ಬಂಧ
ಪಿಚ್ ರಿಪೋರ್ಟ್
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನ ಪಿಚ್ ಸಂಪೂರ್ಣ ಬ್ಯಾಟಿಂಗ್ ಸ್ನೇಹಿಯಾಗಿದೆ. ಹೀಗಾಗಿ ಪಂದ್ಯದಲ್ಲಿ ರನ್ ಮಳೆ ನಿರೀಕ್ಷೆ ಮಾಡಲಾಗಿದೆ. ಈ ಮೈದಾನದಲ್ಲಿ ಚೇಸಿಂಗ್ ನಡೆಸಿದ ತಂಡಗಳೇ ಹೆಚ್ಚು ಗೆಲುವು ಸಾಧಿಸಿದೆ. ಚೇಸಿಂಗ್ ನಡೆಸಿದ ತಂಡಗಳೆ ಗೆಲುವು ಸಾಧಿಸಿದೆ. ಹೀಗಾಗಿ ಟಾಸ್ ಕೂಡ ನಿರ್ಣಾಯಕ.
ಮಳೆ ಭೀತಿ
ಉದ್ಯಾನನಗರಿಯಲ್ಲಿ ಎರಡು ದಿನಗಳಿಂದ ಸಂಜೆ ಮಳೆಯಾಗಿದ್ದು, ಶನಿವಾರವೂ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಂದ್ಯದ ಸಮಯದಲ್ಲಿ ಶೇ. 65 ರಷ್ಟು ಮಳೆಯಾಗುವ ಸಾಧ್ಯತೆ ಇರಲಿದೆ ಎಂದು ತಿಳಿಸಿದೆ. ಪಂದ್ಯ ರದ್ದಾದರೆ ಸರಣಿ 2-2 ಸಮಬಲದಲ್ಲಿ ಅಂತ್ಯ ಕಾಣಲಿದೆ.
ಮುಖಾಮುಖಿ ದಾಖಲೆ
ಒಟ್ಟು ಪಂದ್ಯಗಳು-35
ಭಾರತ ಗೆಲುವು-22
ವೆಸ್ಟ್ ಇಂಡೀಸ್ ಗೆಲುವು- 12
ರದ್ದು-1
ಸಂಭಾವ್ಯ ತಂಡಗಳು
ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (WK)/ವೈಭವ್ ಸೂರ್ಯವಂಶಿ, ಇಶನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಮನ್ ಧೀರ್/ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ಕುಲದೀಪ್ ಯಾದವ್/ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಮಯಾಂಕ್ ಯಾದವ್, ಪ್ರಿನ್ಸ್ ಯಾದವ್.
ವೆಸ್ಟ್ ಇಂಡೀಸ್: ಶಾಯ್ ಹೋಪ್ (ನಾಯಕ), ಜ್ಯುವೆಲ್ ಆಂಡ್ರ್ಯೂ, ಶಿಮ್ರಾನ್ ಹೆಟ್ಮೆಯರ್, ಶೆರ್ಫೇನ್ ರುದರ್ಫೋರ್ಡ್, ರೋವ್ಮನ್ ಪೊವೆಲ್, ರೊಮಾರಿಯೋ ಶೆಫರ್ಡ್, ರೋಸ್ಟನ್ ಚೇಸ್, ಕೀಮೋ ಪಾಲ್, ಶಮರ್ ಸ್ಪ್ರಿಂಗರ್, ಶಮರ್ ಜೋಸೆಫ್, ಗುಡಾಕೇಶ್ ಮೋಟಿ.