ನವದೆಹಲಿ: ಬಹುನಿರೀಕ್ಷಿತ ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಟೆಸ್ಟ್ ಸರಣಿಗೆ ಭಾರತ 15 ಸದಸ್ಯರ ತಂಡ(IND vs WI Squad Announcement) ಪ್ರಕಟಗೊಂಡಿದು, ನಿರೀಕ್ಷೆಯಂತೆ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಕರುಣ್ ನಾಯರ್(Karun Nair) ಅವರನ್ನು ಕೈಬಿಡಲಾಗಿದೆ. ಇವರ ಬದಲು ಕರ್ನಾಟಕದ ದೇವದತ್ತ ಪಡಿಕ್ಕಲ್‌ಗೆ ಅವಕಾಶ ನೀಡಲಾಗಿದೆ. ಉಪನಾಯಕ ಹೊಣೆಯನ್ನು ರವೀಂದ್ರ ಜಡೇಜಾಗೆ ನೀಡಲಾಗಿದೆ. ತಂಡವನ್ನು ಗುರುವಾರ ಆಯ್ಕೆ ಸಮಿತಿ ಅಧ್ಯಕ್ಷ ಅಜೀತ್ ಅಗರ್ಕರ್ ಸುದ್ದಿಗೋಷ್ಠಿ ನಡೆಸಿ ಪ್ರಕಟಿಸಿದರು.
ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ 'ಎ' ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ 'ಎ' ಪರ ಪಡಿಕ್ಕಲ್ ಮಿಂಚಿದ್ದರು. 150 ರನ್ ಗಳಿಸಿ ಪಡಿಕ್ಕಲ್ ಭಾರತದ ಟಾಪ್ ಸ್ಕೋರರ್ ಆಗಿದ್ದರು. ಹೀಗಾಗಿ ಆಯ್ಕೆ ಸಮಿತಿ ಅವರಿಗೆ ಮಣೆ ಹಾಕಿದೆ. ಜಸ್‌ಪ್ರೀತ್ ಬುಮ್ರಾ ಅವರು ವಿಂಡೀಸ್ ವಿರುದ್ಧದ ಸರಣಿಗೆ ಸಂಪೂರ್ಣವಾಗಿ ಲಭ್ಯವಿರುವುದಾಗಿ ಬಿಸಿಸಿಐಗೆ ತಿಳಿಸಿದ ಕಾರಣ ಅವರನ್ನೂ ಕೂಡ ಆಯ್ಕೆ ಮಾಡಲಾಗಿದೆ. ಅಕ್ಷರ್ ಪಟೇಲ್‌ಗೂ ಸ್ಥಾನ ನೀಡಲಾಗಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಎಡಗಾಲಿನ ಮೂಳೆ ಮುರಿತಕ್ಕೆ ಒಳಗಾಗಿದ್ದ ರಿಷಭ್ ಪಂತ್ ಬದಲು ಮೊದಲ ಆಯ್ಕೆಯ ಕೀಪರ್-ಬ್ಯಾಟರ್ ಆಗಿ ಧೃವ್ ಜುರೆಲ್ ಆಯ್ಕೆಯಾಗಿದ್ದಾರೆ. ಮೀಸಲು ಕೀಪರ್ ಆಗಿ ತಮಿಳುನಾಡಿನ ಎನ್.ಜಗದೀಶನ್ ಸ್ಥಾನ ಪಡೆದರು. ತಂಡದಲ್ಲಿ ಒಟ್ಟು ಮೂರು ಕನ್ನಡಿಗರು ಕಾಣಿಸಿಕೊಂಡಿದ್ದಾರೆ. ಅವರೆಂದರೆ ಕೆ.ಎಲ್ ರಾಹುಲ್, ದೇವದತ್ತ ಪಡಿಕ್ಕಲ್ ಮತ್ತು ಪ್ರಸಿದ್ಧ್ ಕೃಷ್ಣ.
ಭಾರತ ತಂಡ
ಶುಭಮನ್ ಗಿಲ್ (ನಾಯಕ), ರವೀಂದ್ರ ಜಡೇಜಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಕುಲದೀಪ್ ಯಾದವ್, ಎನ್. ಜಗದೀಸನ್.