ದೋಹಾ, ನ.21: ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಏಕದಿನ ಟೂರ್ನಿಯ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ 306 ರನ್ಗಳ ಭಾರಿ ಜಯ ದಾಖಲಿಸಿ ಶುಭಾರಂಭ ಮಾಡಿರುವ ಭಾರತ 'ಎ' ತಂಡ ಇದೀಗ ಮತ್ತೊಂದು ಪಂದ್ಯಕ್ಕೆ ಸಜ್ಜಾಗಿದೆ. ಭಾನುವಾರ(ನ.22) ನಡೆಯುವ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ 'ಎ' ವಿರುದ್ಧ ಸೆಣಸಾಡಲಿದೆ.
ಕಳೆದ ವಾರ ಕಿರಿಯರ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಒಂದು ವಿಕೆಟ್ ಅಂತರದಿಂದ ಮಣಿಸಿ ಭಾರತ ಚಾಂಪಿಯನ್ ಆಗಿತ್ತು. ಹೀಗಾಗಿ ಇದೀಗ ಹಿರಿಯರ ತಂಡಗಳ ನಡುವಣ ಈ ಪಂದ್ಯವೂ ಭಾರೀ ಕುತೂಹಲ ಕೆರಳಿಸಿದೆ. ನೇಪಾಳ ವಿರುದ್ಧದ ಪಂದ್ಯದಲ್ಲಿ ವಿಫಲರಾದರೂ 15 ವರ್ಷದ ವೈಭವ್ ಸೂರ್ಯವಂಶಿ ಈ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಗೆದ್ದು ಶುಭಾರಂಭ ಮಾಡಿತ್ತು. ಭಾರತವೂ ಕೂಡ ತನ್ನ ಮೊದಲ ಪಂದ್ಯ ಗೆದ್ದಿರುವ ಕಾರಣ ನಾಳಿನ ಮುಖಾಮುಖಿಯಲ್ಲಿ ಒಂದು ತಂಡಕ್ಕೆ ಮೊದಲ ಸೋಲು ಎದುರಾಗಳಿದೆ. ಈ ತಂಡ ಯಾವುದು ಎನ್ನುವುದು ಪಂದ್ಯದ ಕೌತುಕ.
ನ್ಯೂಜಿಲೆಂಡ್ನಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಹಲವು ದಾಖಲೆ ನಿರ್ಮಿಸಿದ ಕೆ.ಎಲ್. ರಾಹುಲ್
ಭಾರತ ಬಲಿಷ್ಠ
ತಿಲಕ್ ವರ್ಮಾ ನೇತೃತ್ವದ ಈ ತಂಡದಲ್ಲಿ ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ ಮತ್ತು ಉಪನಾಯಕ ರಿಂಕು ಸಿಂಗ್ ಅವರಂತಹ ಪ್ರತಿಭಾವಂತ ಹಾಗೂ ಅನುಭವಿ ಆಟಗಾರರಿದ್ದಾರೆ. ತಿಲಕ್ ಮತ್ತು ಕುಮಾರ್ ಕುಶಾಗ್ರ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಬೌಲಿಂಗ್ನಲ್ಲಿಯೂ ಭಾರತ ಬಲಿಷ್ಠವಾಗಿದೆ. ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್ ಎದುರಾಳಿಯನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.
ಹಾಗಂತ ಪಾಕಿಸ್ತಾನವನ್ನು ಅಷ್ಟು ಸುಲಭವಾಗಿ ಕಡೆಗಣಿಸುವಂತಿಲ್ಲ. ಏಕೆಂದರೆ ಪಾಕ್ ತಂಡದಲ್ಲಿಯೂ ಪ್ರತಿಭಾನ್ವಿತ ಯುವ ಆಟಗಾರರು ತಮ್ಮ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆರಂಭಿಕರಾದ ಶಮೈಲ್ ಹುಸೇನ್ ಮತ್ತು ಮಾಜ್ ಸದಾಕತ್ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದಾರೆ. ನಾಯಕ ಅಬ್ದುಲ್ ಸಮದ್ ಕೂಡ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಬಲ್ಲರು.
ಸಂಭಾವ್ಯ ಆಡುವ ಬಳಗ
ಭಾರತ: ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ತಿಲಕ್ ವರ್ಮ (ನಾಯಕ), ಆಯುಷ್ ಬದೋನಿ, ರಿಂಕು ಸಿಂಗ್, ಕುಮಾರ್ ಕುಶಾಗ್ರಾ (ವಿ.ಕೀ.), ಶಹಬಾಜ್ ಅಹಮದ್, ಸೂರ್ಯಾಂಶ್ ಶೆಡ್ಗೆ, ವಿಪ್ರಜ್ ನಿಗಮ್, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್.
ಪಾಕಿಸ್ತಾನ: ಫರ್ಹಾನ್ ಯೂಸುಫ್, ಅಬ್ದುಲ್ ಸಮದ್ (ನಾಯಕ), ಅಲಿ ರಾಜಾ, ಹಸನ್ ನವಾಜ್, ಮಾಜ್ ಸದಾಕತ್, ರೋಹೈಲ್ ನಜೀರ್ (ವಿ.ಕೀ.), ಮೊಹಮ್ಮದ್ ಇಮ್ರಾನ್ ರಾಂಧವಾ, ಅಹ್ಮದ್ ದಾನಿಯಾಲ್, ಸುಫ್ಯಾನ್ ಮೊಕಿಮ್, ಸಾದ್ ಮಸೂದ್, ಶಾಮಿಲ್ ಹುಸೇನ್.
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ.
ತಾಣ: ವೆಸ್ಟ್ ಎಂಡ್ ಪಾರ್ಕ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದೋಹಾ
ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್, ಸೋನಿಲೈವ್