ಟೋಕಿಯೊ, ಸೆ.22: ಟಿ20 ಹಾಲಿ ವಿಶ್ವ ಚಾಂಪಿಯನ್ ಭಾರತ ತಂಡ 'ಕ್ರಿಕೆಟ್ ಶಿಶು' ಜಪಾನ್ ವಿರುದ್ಧ ಅವಮಾನಕ ಸೋಲಿನಿಂದ ಕೂದಲೆಳೆ ಅಂತರದಿಂದ ಪಾರಾಗಿದೆ. ಮಂಗಳವಾರ ನಡೆದ ಏಕೈಕ ಟಿ20 ಸರಣಿಯ ಪಂದ್ಯದಲ್ಲಿ 2 ರನ್ ಅಂತರದಿಂದ ರೋಚಕ ಗೆಲುವಿನ ನಿಟ್ಟುಸಿರು ಬಿಟ್ಟಿದೆ.
ಉಭಯ ದೇಶಗಳ ರಾಜತಾಂತ್ರಿಕ ಬಾಂಧವ್ಯಕ್ಕೆ 75 ವರ್ಷ ತುಂಬಿದ ಸಂಭ್ರಮದ ಅಂಗವಾಗಿ ಎರಡೂ ದೇಶಗಳ ತಂಡಗಳ ನಡುವೆ ಮೊದಲ ಬಾರಿಗೆ ಈ ಅಂತಾರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲಾಗಿತ್ತು. ಐಸಿಸಿ ರ‍್ಯಾಂಕ್‌ನಲ್ಲಿ 41ನೇ ಸ್ಥಾನದಲ್ಲಿರುವ ಜಪಾನ್ ತಂಡ ಸೋತರೂ ಟಿ20 ವಿಶ್ವಕಪ್ ಚಾಂಪಿಯನ್ ಆಗಿರುವ ಭಾರತಕ್ಕೆ ಒಂದು ಹಂತದಲ್ಲಿ ಸೋಲಿನ ಭೀತಿ ಹುಟ್ಟಿಸಿತು.
ಭಾರೀ ಮಳೆಯ ಕಾರಣ 5 ಓವರ್‌ಗೆ ಸೀಮಿತವಾದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ಭಾರತ 4 ವಿಕೆಟ್‌ಗೆ 32 ರನ್ ಬಾರಿಸಿತು. ಸಣ್ಣ ಮೊತ್ತದ ಗುರಿ ಬೆನ್ನಟ್ಟಿದ ಜಪಾನ್ ಗೆಲುವಿನ ಅಂಚಿನ ತನಕ ಸಾಗಿ ಅಂತಿಮವಾಗಿ 3 ವಿಕೆಟ್‌ಗೆ 30 ರನ್ ಗಳಿಸಲಷ್ಟೇ ಶಕ್ತವಾಯಿತು.
ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ; ಮಹಿಳಾ ಕ್ರಿಕೆಟ್ ತಂಡದ ಸಾಧನೆ
ಅಂತಿಮ ಓವರ್‌ನಲ್ಲಿ ಜಪಾನ್ ಗೆಲುವಿಗೆ 8 ರನ್ ಅಗತ್ಯವಿತ್ತು. ಅಕ್ಷರ್ ಪಟೇಲ್ ಎಸೆದ ಈ ಓವರ್‌ನ ಮೊದಲ ಎಸೆತದಲ್ಲಿ ರನ್ ಬರಲಿಲ್ಲ. ಎರಡನೇ ಎಸೆತದಲ್ಲಿ ಸಿಂಗಲ್ ದಾಖಲಾಯಿತು. ಮುಂದಿನ ಎಸೆತವನ್ನು ವೈಡ್ ಎಸೆದರು. ಆ ಬಳಿಕ ನಾಲ್ಕನೇ, ಐದನೆ ಮತ್ತು ಅಂತಿಮ ಎಸೆತದಲ್ಲಿ ತಲಾ ಒಂದು ರನ್ ಬಿಟ್ಟುಕೊಟ್ಟು ತಂಡಕ್ಕೆ ರೋಚಕ ಎರಡು ರನ್ ಗೆಲುವು ತಂದುಕೊಟ್ಟರು.
ಕಳೆದ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 30 ಎಸೆತಗಳಲ್ಲಿ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದ ಅಭಿಷೇಕ್ ಶರ್ಮಾ(0) ಗೋಲ್ಡನ್ ಡಕ್ ಸಂಕಟ ಎದುರಿಸಿದರು. ಮತೋರ್ವ ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ (9), ಇಶಾನ್ ಕಿಶನ್ (3) ರನ್ ಗಳಿಸಿ ಔಟ್ ಆದರು. ಅಜೇಯ 16 ರನ್ ಗಳಿಸಿದ ನಾಯಕ ಶ್ರೇಯಸ್ ಅಯ್ಯರ್ ಭಾರತದ ಪರ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡರು. ಜಪಾನ್ ಪರ ಚಾರ್ಲಿ ಹರಾ-ಹಿಂಜೆ 17 ರನ್‌ಗೆ 2 ವಿಕೆಟ್ ಕಿತ್ತರು.