ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಾಳೆ ಮಹಿಳಾ ಏಷ್ಯಾಕಪ್‌ ಫೈನಲ್‌; ಅಜೇಯ ಭಾರತ-ಶ್ರೀಲಂಕಾ ಮಧ್ಯೆ ಪ್ರಶಸ್ತಿ ಕಾದಾಟ

Women's Asia Cup 2026 Final: ಭಾರತದ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ದೀಪ್ತಿ ಶರ್ಮಾ, ರಾಧಾ ಯಾದವ್ ಮತ್ತು ಶ್ರೀ ಚರಣಿ ಅವರು ಭರವಸೆಯ ಆಟಗಾರ್ತಿಯರಾಗಿದ್ದಾರೆ. ಮಧ್ಯಮವೇಗಿ ರೇಣುಕಾ ಸಿಂಗ್ ಅವರು ಉತ್ತಮ ಆರಂಭ ನೀಡುವ ಸಮರ್ಥ ಬೌಲರ್. ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಪವರ್‌ಪ್ಲೇಯಲ್ಲಿ ಬೌಲರ್‌ಗಳನ್ನು ಎದುರಿಸುತ್ತಿರುವ ರೀತಿ ಅಮೋಘವಾಗಿದೆ.

Women's Asia Cup 2026 Final

ದುಬೈ, ಸೆ. 12: ಮಹಿಳಾ ಏಷ್ಯಾಕಪ್‌ ಫೈನಲ್​ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಭಾನುವಾರ ದುಬೈ ಅಂಗಳದಲ್ಲಿ ನಡೆಯುವ ಫೈನಲ್​ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಚಾಂಪಿಯನ್‌ ಪಟ್ಟಕ್ಕೆ ಸೆಣಸಾಟ ನಡೆಸಲಿದೆ. 2024 ರ ಆವೃತ್ತಿಯ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಸೋತ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ, ಏಷ್ಯನ್ ಚಾಂಪಿಯನ್ ಪಟ್ಟವನ್ನು ಮರಳಿ ಪಡೆಯಲು ಎದುರು ನೋಡುತ್ತಿದೆ.

ಶ್ರೀಲಂಕಾ ತಂಡವು ಶುಕ್ರವಾರ ನಾಲ್ಕು ವಿಕೆಟ್‌ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ ಏಷ್ಯಾ ಕಪ್ ಮಹಿಳೆಯರ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸತತ ಮೂರನೇ ಬಾರಿ ಫೈನಲ್‌ ಪ್ರವೇಶಿಸಿತು. ಗುರುವಾರವ ನಡೆದಿದ್ದ ಮೊದಲ ಸೆಮಿ ಫೈನಲ್‌ನಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಸೋಲಿಸಿ ಫೈನಲ್‌ಗೆ ಲಗ್ಗೆಯಿಟ್ಟಿತ್ತು.

ಏಳು ಬಾರಿಯ ಚಾಂಪಿಯನ್‌ ಭಾರತ, ಈ ಬಾರಿ ಅಜೇಯವಾಗಿ ಫೈನಲ್‌ ಪ್ರವೇಶಿಸಿದೆ. ಹಾಲಿ ಚಾಂಪಿಯನ್‌ ಆಗಿರುವ ಶ್ರೀಲಂಕಾ ಕೂಡ ಅಜೇಯವಾಗಿದೆ. ಮಾತ್ರವಲ್ಲದೆ ಕಳೆದ ಆವೃತ್ತಿಯಲ್ಲೂ ಇದೇ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗಿದ್ದವು. ಹೀಗಾಗಿ ಈ ಪಂದ್ಯ ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ.

ಭಾರತ ತಂಡ ಟಿ20 ಮಾದರಿಯಲ್ಲಿ ಮೂರು ಬಾರಿ (2012, 2016 ಮತ್ತು 2022 ರಲ್ಲಿ) ಮತ್ತು ಏಕದಿನ ಮಾದರಿಯಲ್ಲಿ(2004, 2005, 2006, 2008) ನಾಲ್ಕು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಶ್ರೀಲಂಕಾ ಕೇವಲ ಒಂದು ಬಾರಿ ಟ್ರೋಫಿ ಗೆದ್ದಿದೆ. 5 ಬಾರಿ ರನ್ನರ್‌ ಅಪ್‌ ಸ್ಥಾನ ಪಡೆದಿದೆ.

ಭಾರತ ಬಲಿಷ್ಠ

ಭಾರತದ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ದೀಪ್ತಿ ಶರ್ಮಾ, ರಾಧಾ ಯಾದವ್ ಮತ್ತು ಶ್ರೀ ಚರಣಿ ಅವರು ಭರವಸೆಯ ಆಟಗಾರ್ತಿಯರಾಗಿದ್ದಾರೆ. ಮಧ್ಯಮವೇಗಿ ರೇಣುಕಾ ಸಿಂಗ್ ಅವರು ಉತ್ತಮ ಆರಂಭ ನೀಡುವ ಸಮರ್ಥ ಬೌಲರ್. ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಪವರ್‌ಪ್ಲೇಯಲ್ಲಿ ಬೌಲರ್‌ಗಳನ್ನು ಎದುರಿಸುತ್ತಿರುವ ರೀತಿ ಅಮೋಘವಾಗಿದೆ. ಶಫಾಲಿ ಟೂರ್ನಿಯಲ್ಲಿ ಒಟ್ಟು 168 ರನ್‌ ಗಳಿಸಿ ಅಗ್ರಸ್ಥಾನದಲ್ಲಿದರೆ, ಮಂಧಾನ(154) ಎರಡನೇ ಸ್ಥಾನದಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಹರ್ಮನ್‌ ಮತ್ತು ವಿಕೆಟ್‌ಕೀಪರ್–ಬ್ಯಾಟರ್ ರಿಚಾ ಘೋಷ್ ಅವರು ಇನಿಂಗ್ಸ್‌ಗೆ ಸ್ಥಿರತೆ ತುಂಬುವಲ್ಲಿ ಪರಿಣತರಾಗಿದ್ದಾರೆ.

ಏಷ್ಯನ್ ಗೇಮ್ಸ್‌; 74 ಕ್ರೀಡಾಪಟುಗಳಿಗೆ ಇಳಿಕೆ ಕಂಡ ಭಾರತ ತಂಡ

ಶ್ರೀಲಂಕಾ ಕೂಡ ವೈವಿಧ್ಯಮಯವಾಗಿದೆ. ಹರ್ಷಿತಾ ಸಮರವಿಕ್ರಮ, ಕವಿಶಾ ದಿಲ್ಹಾರಿ, ನೀಲಾಕ್ಷಿಕಾ ಸಿಲ್ವಾ , ಚಾಮುಡಿ ಪ್ರಭೋದ ಮತ್ತು ನಾಯಕಿ ಚಾಮರಿ ಅಟಪಟ್ಟು ಅಮೋಘ ಲಯದಲ್ಲಿದ್ದಾರೆ. ಅದರಲ್ಲೂ ಚಾಮರಿ ಅಟಪಟ್ಟು ಬ್ಯಾಟಿಂಗ್‌ ಜತೆಗೆ ಬೌಲಿಂಗ್‌ನಲ್ಲಿಯೂ ಎದುರಾಳಿ ತಂಡದ ಮೇಲೆ ಒತ್ತಡ ಹೇರಬಲ್ಲರು. ಬೌಲಿಂಗ್‌ನಲ್ಲಿ 11 ವಿಕೆಟ್‌ ಕಿತ್ತು ದೀಪ್ತಿ ಶರ್ಮಾ ಜತೆ ಜಂಟಿ ಅಗ್ರಸ್ಥಾನ ಗಳಿಸಿದ್ದಾರೆ.

ಭಾರತ ಗೆದ್ದರೆ ನಖ್ವಿಯಿಂದ ಟ್ರೋಫಿ ಸ್ವೀಕರಿಸುವುದೇ?

ಎಸಿಸಿ ಹಾಗೂ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ದುಬೈನಲ್ಲಿ ನಡೆಯುವ ಫೈನಲ್‌ಗೆ ಹಾಜರಾಗುವ ನಿರೀಕ್ಷೆಯಿದೆ. ಭಾರತ ಫೈನಲ್‌ ಗೆದ್ದರೆ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸುವುದೇ ಎಂಬುದು ಕುತೂಹಲ ಮೂಡಿಸಿದೆ. ಕಳೆದ ವರ್ಷದ ಪುರುಷರ ಏಷ್ಯಾ ಕಪ್ ಫೈನಲ್‌ನಲ್ಲಿ ನಡೆದ ಘಟನೆಯಿಂದಾಗಿ ಈ ಸಾಧ್ಯತೆ ಗಮನ ಸೆಳೆಯುವ ಸಾಧ್ಯತೆಯಿದೆ. ದುಬೈನಲ್ಲಿ ಭಾರತ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಉಳಿಸಿಕೊಂಡಿತು, ಆದರೆ ಪ್ರಶಸ್ತಿ ಪ್ರದಾನ ಸಮಾರಂಭವು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಮತ್ತು ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ನಖ್ವಿ ಅವರಿಂದ ಭಾರತ ತಂಡವು ಟ್ರೋಫಿ ಪಡೆಯಲು ನಿರಾಕರಿಸಿದ ನಂತರ ಭಾರಿ ಹೈಡ್ರಾಮಾ ನಡೆದಿತ್ತು.

ಸಂಭಾವ್ಯ ತಂಡಗಳು

ಭಾರತ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಪ್ರತೀಕಾ ರಾವಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಭಾರತಿ ಫುಲ್ಮಾಲಿ, ರಿಚಾ ಘೋಷ್ (ವಿ.ಕೀ.), ದೀಪ್ತಿ ಶರ್ಮಾ, ಪ್ರೇಮಾ ರಾವತ್, ಶ್ರೀ ಚರಣಿ, ಕ್ರಾಂತಿಗೌಡ, ನಂದನಿ ಶರ್ಮಾ.

ಶ್ರೀಲಂಕಾ: ಇಮೇಶಾ ದುಲಾನಿ, ಚಾಮರಿ ಅಟಪಟ್ಟು (ನಾಯಕಿ), ಸಂಜನಾ ಕವಿಂದಿ, ಹರ್ಷಿತಾ ಸಮರವಿಕ್ರಮ, ಹಾಸಿನಿ ಪೆರೇರಾ, ಕವಿಶಾ ದಿಲ್ಹರಿ, ನೀಲಕ್ಷಿಕಾ ಸಿಲ್ವ, ಕೌಶನಿ ನುತ್ಯಂಗನಾ (ವಿ.ಕೀ.), ಸುಗಂದಿಕಾ ಕುಮಾರಿ, ಚಾಮುದಿ ಪ್ರಬೋದಾ, ಮಿಥಾಲಿ ಅಯೋಧ್ಯೆ.