ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ ಭಾರತ ತಂಡ ಪ್ರಕಟ; ಕನ್ನಡಿಗ ರಾಹುಲ್‌ ನಾಯಕ

IND vs SA ODI Series: ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅವರ ಅನುಪಸ್ಥಿತಿಯಲ್ಲಿ ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ ಮತ್ತು ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ವೇಗಿಗಳಾಗಿ ಆಯ್ಕೆಯಾಗಲಿದ್ದಾರೆ.

ಕೆ.ಎಲ್‌ ರಾಹುಲ್‌

ಮುಂಬಯಿ, ನ.23: ದಕ್ಷಿಣ ಆಫ್ರಿಕಾ(IND vs SA ODI Series) ವಿರುದ್ಧದ ಮುಂಬರುವ ಏಕದಿನ ಸರಣಿಗೆ ಭಾರತ ತಂಡವನ್ನು ಭಾನುವಾರ ಪ್ರಕಟಿಸಲಾಗಿದ್ದು, ಕನ್ನಡಿಗ ಕೆ.ಎಲ್ ರಾಹುಲ್(KL Rahul ) ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. 2023ರ ಬಳಿಕ ಅವರು ಮತ್ತೆ ತಂಡವನ್ನು ಮುನ್ನಡೆಸಲಿದ್ದಾರೆ. ಕೊನೆಯ ಬಾರಿಗೂ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೇ ನಾಯಕತ್ವ ವಹಿಸಿದ್ದರು.

ಮೊದಲ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದರಿಂದ ಶುಭಮನ್ ಗಿಲ್ ಸರಣಿಯಿಂದ ಹೊರಗುಳಿದರು. ಆಸ್ಟ್ರೇಲಿಯಾ ಸರಣಿಯ ವೇಳೆ ಗಾಯಗೊಂಡ ಶ್ರೇಯಸ್‌ ಅಯ್ಯರ್‌ ಕೂಡ ಗೈರಾಗಿದ್ದು, ರಿಷಭ್ ಪಂತ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.

ಅನುಭವಿ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಕೂಡ ಆಯ್ಕೆ ಮಾಡಲಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಹಿಂದಿನ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಇಬ್ಬರೂ ಪಂದ್ಯ ಗೆಲ್ಲುವ ಜೊತೆಯಾಟವಾಡಿದ್ದರು. 2023 ರಲ್ಲಿ ಭಾರತ ಪರ ಕೊನೆಯ ಬಾರಿಗೆ 50 ಓವರ್‌ಗಳ ಮಾದರಿಯಲ್ಲಿ ಆಡಿದ್ದ ಋತುರಾಜ್ ಗಾಯಕ್ವಾಡ್ ಅವರನ್ನು ತಂಡಕ್ಕೆ ಮರಳಿ ಕರೆಸಿಕೊಳ್ಳಲಾಗಿದೆ. ಯಶಸ್ವಿ ಜೈಸ್ವಾಲ್ ಅವರು ರೋಹಿತ್ ಅವರೊಂದಿಗೆ ಬ್ಯಾಟಿಂಗ್ ಆರಂಭಿಸುವ ನಿರೀಕ್ಷೆಯಿದ್ದು, 4 ನೇ ಸ್ಥಾನಕ್ಕಾಗಿ ತಿಲಕ್ ವರ್ಮಾ ಅವರೊಂದಿಗೆ ಗಾಯಕ್ವಾಡ್‌ ಪೈಪೋಟಿ ನಡೆಸಲಿದ್ದಾರೆ.

ಇದನ್ನೂ ಓದಿ IND vs SA 2nd Test: ದಕ್ಷಿಣ ಆಫ್ರಿಕಾದ ಬಿಗಿ ಹಿಡಿತದಲ್ಲಿ ಗುವಾಹಟಿ ಟೆಸ್ಟ್‌

ತಂಡದಲ್ಲಿ ಅಕ್ಷರ್ ಪಟೇಲ್ ಬದಲಿಗೆ ರವೀಂದ್ರ ಜಡೇಜಾ ಅವರನ್ನು ಆಲ್‌ರೌಂಡರ್ ಆಗಿ ಆಯ್ಕೆ ಮಾಡಲಾಗಿದೆ. ವಾಷಿಂಗ್ಟನ್ ಸುಂದರ್‌ಗೂ ಅವಕಾಶ ನೀಡಲಾಗಿದೆ. ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅವರ ಅನುಪಸ್ಥಿತಿಯಲ್ಲಿ ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ ಮತ್ತು ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ವೇಗಿಗಳಾಗಿ ಆಯ್ಕೆಯಾಗಲಿದ್ದಾರೆ.



ಭಾರತ ತಂಡ

ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಕೆ.ಎಲ್ ರಾಹುಲ್ (ನಾಯಕ), ರಿಷಭ್ ಪಂತ್ (ವಿ.ಕೀ.), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಋತುರಾಜ್ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಧ್ರುವ್ ಜುರೆಲ್.

ಸರಣಿ ವೇಳಾಪಟ್ಟಿ

ಮೊದಲನೇ ಏಕದಿನ: ಭಾನುವಾರ, ನವೆಂಬರ್ 30, 2025 (ರಾಂಚಿ)

ಎರಡನೇ ಏಕದಿನ: ಬುಧವಾರ, ಡಿಸೆಂಬರ್ 3, 2025 (ರಾಯಪುರ)

ಮೂರನೇ ಏಕದಿನ: ಶನಿವಾರ, ಡಿಸೆಂಬರ್ 6, 2025 (ವಿಶಾಖಪಟ್ಟಣ)