ನವದೆಹಲಿ, ಫೆ.24: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಸೂಪರ್ 8(T20 World Cup Super 8) ಪಂದ್ಯಕ್ಕೆ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ಆಡುವ ಹನ್ನೊಂದರಲ್ಲಿ ಸೇರಿಸಿಕೊಳ್ಳದಿರುವ ಭಾರತದ ನಿರ್ಧಾರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅಕ್ಷರ್ ಬದಲಿಗೆ ಆಡಿದ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವಿಫಲರಾದ ಕಾರಣ ಭಾರತ 76 ರನ್‌ಗಳ ಸೋಲಿಗೆ ಶರಣಾಯಿತು. ಜಿಂಬಾಬ್ವೆ(India vs Zimbabwe) ವಿರುದ್ಧದ ಮುಂದಿನ ಪಂದ್ಯಕ್ಕೂ ಮುನ್ನ, ಭಾರತದ ದಂತಕಥೆ ಸುನಿಲ್ ಗವಾಸ್ಕರ್(Sunil Gavaskar), ಅಕ್ಷರ್ ಅವರು ಆಡುವ XIಗೆ ಮರಳುವ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದರು.
ಜಿಯೋಸ್ಟಾರ್ ಜತೆಗಿನ ಕ್ರಿಕೆಟ್ ಚರ್ಚೆ ವೇಳೆ ಗವಾಸ್ಕರ್ ಮಾತನಾಡಿ, "ಜಿಂಬಾಬ್ವೆ ತಂಡದಲ್ಲಿ ಎಡಗೈ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಿರುವುದನ್ನು ಗಮನದಲ್ಲಿಟ್ಟುಕೊಂಡು ಅಕ್ಷರ್ ಪಟೇಲ್ ಅವರನ್ನು ಮತ್ತೆ ಆಡುವ XIಗೆ ಕರೆತರಬೇಕು. ಅರ್ಶ್‌ದೀಪ್ ಸಿಂಗ್ ಬದಲಿಗೆ ಅವರ(ಅಕ್ಷರ್)ನ್ನು ಕರೆತರಬಹುದು" ಎಂದು ಗವಾಸ್ಕರ್ ಹೇಳಿದರು.
"ಅರ್ಷ್‌ದೀಪ್ ದಕ್ಷಿಣ ಆಫ್ರಿಕಾ ವಿರುದ್ಧ ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು ಮತ್ತು ಅಷ್ಟು ಉತ್ತಮ ಲಯದಲ್ಲಿ ಕಾಣುವ ಯಾರನ್ನಾದರೂ ನೀವು ಬದಲಾಯಿಸಲು ಬಯಸುವುದಿಲ್ಲ. ಆದರೆ ತಂಡದಲ್ಲಿ ಪಾಂಡ್ಯ, ದುಬೆ ಕೂಡ ಜಸ್‌ಪ್ರೀತ್ ಬುಮ್ರಾ ಅವರಿಗೆ ವೇಗದ ಬೌಲಿಂಗ್‌ನಲ್ಲಿ ಸಾಥ್ ನೀಡುವ ಕಾರಣ ಹೆಚ್ಚುವರ ವೇಗಿಯ ಅಗತ್ಯವಿಲ್ಲ ಎನ್ನುವುದು ನನ್ನ ಯೋಚನೆ. ಹೀಗಾಗಿ ಅರ್ಶ್‌ದೀಪ್ ಕೈಬಿಟ್ಟು ಅಕ್ಷರ್‌ಗೆ ಅವಕಾಶ ನೀಡಿದರೆ, ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ಆಯ್ಕೆ ಲಭ್ಯ" ಎಂದು ಗವಾಸ್ಕರ್ ಹೇಳಿದರು.
ಮಾಡು ಇಲ್ಲವೇ ಮಡಿ ಪಂದ್ಯಕ್ಕೂ ಮುನ್ನ ವಿಂಡೀಸ್, ಜಿಂಬಾಬ್ವೆ ವಿರುದ್ಧ ಭಾರತದ ಟಿ20 ಸಾಧನೆಯ ಇಣುಕು ನೋಟ
ಈ ಎಲ್ಲ ಚರ್ಚೆಗಳ ಮಧ್ಯೆ, ವಾಷಿಂಗ್ಟನ್ ಸುಂದರ್ ಮತ್ತು ಅಭಿಷೇಕ್ ಶರ್ಮ ಅವರನ್ನು ಕೈಬಿಡುವ ಸಾಧ್ಯತೆಯೂ ಕಂಡುಬಂದಿದೆ. ಸುಂದರ್ ಅವರ ಸ್ಥಾನಕ್ಕೆ ಕುಲ್ದೀಪ್ ಯಾದವ್ ಅವರನ್ನು ಆಡಿಸುವ ಸಾಧ್ಯತೆಯಿದೆ. ಏಕೆಂದರೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣವು ಸ್ಪಿನ್ ಸ್ನೇಹಿ ಪಿಚ್ ಆಗಿದೆ. ಈ ಹಿನ್ನೆಲೆಯಲ್ಲಿ ಕುಲ್ದೀಪ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಸತತ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿರುವ ಅಭಿಷೇಕ್ ಶರ್ಮ ಬದಲು ಸಂಜು ಸ್ಯಾಮ್ಸನ್ ಅವಕಾಶ ಪಡೆಯಬಹುದು.
ಜಿಂಬಾಬ್ವೆ ಪಂದ್ಯಕ್ಕೆ ಗವಾಸ್ಕರ್ ಆರಿಸಿದ ಪ್ಲೇಯಿಂಗ್ 11
ಅಭಿಷೇಕ್ ಶರ್ಮ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ.