ಮುಂಬಯಿ, ಮಾ.4: ಭಾರತ ತಂಡ ಗುರುವಾರ ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್(T20 World Cup) ಸೆಮಿಫೈನಲ್ ಪಂದ್ಯವನ್ನಾಡಲಿದೆ. ಆದರೆ ಮಂಗಳವಾರ ನಡೆದ ಚಂದ್ರಗ್ರಹಣದ ಪರಿಣಾಮ ಭಾರತ ತಂಡ ಅಭ್ಯಾಸದ ಸಮಯ ಬದಲಾವಣೆ(India Postpones Practice Session) ಮಾಡಿಕೊಂಡಿತು. ಮಂಗಳವಾರ ಸಂಜೆ 6ರಿಂದ ರಾತ್ರಿ 9ರವರೆಗೆ ಹೊನಲು ಬೆಳಕಿನಲ್ಲಿ ತಂಡದ ಆಟಗಾರರು ತಾಲೀಮು ನಡೆಸಬೇಕಿತ್ತು. ಆದರೆ ಚಂದ್ರಗ್ರಹಣವಿದ್ದ ಕಾರಣ ರಾತ್ರಿ 7.20ಕ್ಕೆ ಅಭ್ಯಾಸ ಆರಂಭಿಸಿತು.
"ಚಂದ್ರಗ್ರಹಣ ಆಗಿರುವುದರಿಂದ ಯಾವುದೇ ಒಳ್ಳೆಯದನ್ನು ಮಾಡುವುದನ್ನು ತಪ್ಪಿಸಬೇಕು ಎಂದು ತಂಡವು ನಿರ್ಧರಿಸಿತು. ತಂಡದ ಆಡಳಿತ ಮಂಡಳಿ ಇದಕ್ಕೆ ಒಪ್ಪಿಕೊಂಡಿತು ಮತ್ತು ಅಭ್ಯಾಸವನ್ನು ಒಂದು ಗಂಟೆ ಮುಂದೂಡಲಾಯಿತು" ಎಂದು ಮೂಲವೊಂದು ತಿಳಿಸಿದೆ. ಭಾರತದಲ್ಲಿ, ಆಳವಾಗಿ ಬೇರೂರಿರುವ ಪೌರಾಣಿಕ ಮತ್ತು ಶಕ್ತಿಯುತ ನಂಬಿಕೆಗಳಿಂದಾಗಿ ಚಂದ್ರಗ್ರಹಣಗಳನ್ನು ಸಾಂಪ್ರದಾಯಿಕವಾಗಿ ಅಶುಭವೆಂದು ಪರಿಗಣಿಸಲಾಗುತ್ತದೆ.
ಭಾನುವಾರ ವೆಸ್ಟ್ ಇಂಡೀಸ್ ವಿರುದ್ಧದ ಅದ್ಭುತ ಗೆಲುವಿನ ನಂತರ ಸೂರ್ಯಕುಮಾರ್ ಪಡೆ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು. ಆದರೆ ತಂಡ ಸಾಗಿ ಬಂದ ಹಾದಿ ಸುಲಭವಾಗಿರಲಿಲ್ಲ. ಯುಎಸ್ಎ, ಪಾಕಿಸ್ತಾನ, ನಮೀಬಿಯಾ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧದ ಗುಂಪು ಹಂತದ ಪಂದ್ಯಗಳು ತಂಡದ ಬೌಲಿಂಗ್ ಕ್ರಮಾಂಕದಲ್ಲಿ ಪ್ರಶ್ನೆ ಮಾಡುವಂತೆ ಮಾಡಿತ್ತು. ಜತೆಗೆ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮ ಮತ್ತು ತಿಲಕ್ ವರ್ಮಾ ಅವರ ಕಳಪೆ ಬ್ಯಾಟಿಂಗ್ ಫಾರ್ಮ್ ಕೂಡ ತಂಡಕ್ಕೆ ದೊಡ್ಡ ಚಿಂತೆ ಉಂಟು ಮಾಡಿತ್ತು.
ಭಾರತಕ್ಕೆ ಎಚ್ಚರಿಕೆ ನೀಡಿದ ಸ್ಯಾಮ್ ಕರನ್
ಇಂಗ್ಲೆಂಡ್ ತಂಡದ ವೇಗದ ಬೌಲಿಂಗ್ ಆಲ್‌ರೌಂಡರ್ ಸ್ಯಾಮ್ ಕರನ್ ಪಂದ್ಯಕ್ಕೂ ಮುನ್ನವೇ ಸವಾಲೆಸೆದಿದ್ದಾರೆ. 'ವಾಂಖೆಡೆ ಕ್ರೀಡಾಂಗಣ ಅದ್ಭುತವಾಗಿದೆ. ಆದರೆ ಗುರುವಾರ ರಾತ್ರಿ ಇದು ಸ್ತಬ್ಧವಾಗಲಿದೆ ಎಂಬ ನಂಬಿಕೆ ನನಗಿದೆ’ ಎಂದಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, ‘ಇಲ್ಲಿ ಪಿಚ್ ಚೆನ್ನಾಗಿದೆ. ಬೌಂಡರಿ ಅಂತರವೂ ಕಡಿಮೆ. ಆದ್ದರಿಂದ ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆ ಇದೆ. ನಾವು ಕೂಡ ಇಲ್ಲಿ ಬಹಳಷ್ಟು ಪಂದ್ಯಗಳಲ್ಲಿ ಆಡಿದ್ದೇವೆ. ಭಾರತ ತಂಡದ ಎದುರು ಹಾಗೂ ಐಪಿಎಲ್ ಪಂದ್ಯಗಳಲ್ಲಿ ಆಡಿದ ಅನುಭವ ನಮಗಿದೆ’ ಎಂದರು.