ಕೊಲಂಬೊ: ಇತ್ತೀಚೆಗಷ್ಟೇ ಭಾರತ ತಂಡ ಮಹಿಳಾ ಏಕದಿನ ವಿಶ್ವಕಪ್(Blind Women's T20 World) ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿತ್ತು. ಇದೀಗ ಅಂಧ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳ(India vs Nepal)ವನ್ನು 7 ವಿಕೆಟ್‌ಗಳಿಂದ ಮಣಿಸಿ ಚೊಚ್ಚಲ ಆವೃತ್ತಿಯಲ್ಲೇ ವಿಶ್ವಕಪ್ ಗೆದ್ದ ಚಾರಿತ್ರಿಕ ಸಾಧನೆ ಮಾಡಿದೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕದ ದೀಪಿಕಾ ಟಿ.ಸಿ. ಅವರ ನಾಯಕತ್ವದ ಭಾರತ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿತು. ತನ್ನ ಆಯ್ಕೆಗೆ ತಕ್ಕ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಎದುರಾಳಿ ನೇಪಾಳವನ್ನು 5 ವಿಕೆಟ್‌ಗಳಿಗೆ 114 ರನ್‌ಗೆ ಕಟ್ಟಿ ಹಾಕಿತು. ಆ ಬಳಿಕ ಗುರಿ ಬೆನ್ನಟ್ಟಿದ ಭಾರತ 12 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 117 ರನ್ ಗಳಿಸಿ ಜಯಭೇರಿ ಬಾರಿಸಿತು.
ಚೇಸಿಂಗ್ ವೇಳೆ ಪೂಲಾ ಸೊರೆನ್ ಅವರು ಔಟಾಗದೇ 27 ಎಸೆತಗಳಲ್ಲಿ ನಾಲ್ಕು ಸ್ಟೈಲಿಶ್ ಬೌಂಡರಿಗಳನ್ನು ಒಳಗೊಂಡಂತೆ 162.96 ಸ್ಟ್ರೈಕ್ ರೇಟ್‌ನಲ್ಲಿ 44 ರನ್ ಗಳಿಸಿದರು. ಅವರ ಟಾಪ್ ಆರ್ಡರ್ ಇನ್ನಿಂಗ್ಸ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.
ಇದನ್ನೂ ಓದಿ IND vs SA 2nd Test: ದಕ್ಷಿಣ ಆಫ್ರಿಕಾದ ಬಿಗಿ ಹಿಡಿತದಲ್ಲಿ ಗುವಾಹಟಿ ಟೆಸ್ಟ್
ಟೂರ್ನಿಯಲ್ಲಿ ಭಾರತ ತಂಡ ಅಸಾಧಾರಣ ಪ್ರದರ್ಶನ ನೀಡಿ, ಟೂರ್ನಿಯಾದ್ಯಂತ ಅಜೇಯರಾಗಿ ಪ್ರಶಸ್ತಿ ಗೆದ್ದುಕೊಂಡಿತು. ತಮ್ಮ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಕೇವಲ 41 ರನ್‌ಗಳಿಗೆ ಆಲೌಟ್ ಮಾಡಿ, ಕೇವಲ ಮೂರು ಓವರ್‌ಗಳಲ್ಲಿ ಗುರಿಯನ್ನು ತಲುಪಿತ್ತು.
ಆಸ್ಟ್ರೇಲಿಯಾ ವಿರುದ್ಧ ಭಾರತ 4 ವಿಕೆಟ್‌ಗೆ 292 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ದೀಪಿಕಾ ಟಿಸಿ 91 ಮತ್ತು ಫುಲಸರೇನ್ ಔಟಾಗದೆ 54 ರನ್ ಗಳಿಸಿದರು. ನಂತರ ಆಸ್ಟ್ರೇಲಿಯಾವನ್ನು ಕೇವಲ 57 ರನ್‌ಗಳಿಗೆ ಆಲೌಟ್ ಮಾಡಿ 209 ರನ್‌ಗಳ ಅಂತರದಿಂದ ಗೆದ್ದರು.
ನಂತರ ದೀಪಿಕಾ ಮತ್ತು ಅನೇಖಾ ದೇವಿ ಅವರ ಅದ್ಭುತ ಬ್ಯಾಟಿಂಗ್‌ನಿಂದ ಕೇವಲ 10.2 ಓವರ್‌ಗಳಲ್ಲಿ 136 ರನ್‌ಗಳನ್ನು ಬೆನ್ನಟ್ಟಿ ಪಾಕಿಸ್ತಾನವನ್ನು ಸೋಲಿಸಿತ್ತು. ಸೆಮಿಫೈನಲ್‌ನಲ್ಲಿ, ಭಾರತವು ಆಸ್ಟ್ರೇಲಿಯಾವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿತು ಮತ್ತು ಫೈನಲ್‌ನಲ್ಲಿ ನೇಪಾಳ ವಿರುದ್ಧದ ಅದ್ಭುತ ಪ್ರದರ್ಶನದೊಂದಿಗೆ ಟ್ರೋಫಿಯನ್ನು ಗೆದ್ದುಕೊಂಡಿತು.