ವೆಲ್ಲಿಂಗ್ಟನ್, ನ.19: ಚೆಂಡು ಹಳೆಯದಾದಂತೆ ಲಯ ಕಂಡುಕೊಂಡ ನ್ಯೂಜಿಲೆಂಡ್ ಬ್ಯಾಟರ್‌ಗಳು ಭಾರತದ ವಿರುದ್ಧ ಹಿಡಿತ ಸಾಧಿಸಿದ್ದಾರೆ. ಗುರುವಾರ ಆರಂಭಗೊಂಡ ಮೊದಲ ಟೆಸ್ಟ್‌ನಲ್ಲಿ ದಿನದಾಟದ ಅಂತ್ಯಕ್ಕೆ ಕಿವೀಸ್ 5 ವಿಕೆಟ್‌ಗೆ 243 ರನ್ ಕಲೆ ಹಾಕಿದೆ. ಹೆನ್ರಿ ನಿಕೋಲ್ಸ್(113) ಮತ್ತು ಗ್ಲೆನ್ ಫಿಲಿಪ್ಸ್(94) ಕ್ರಮವಾಗಿ ಶತಕ ಮತ್ತು ಅರ್ಧಶತಕ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇಲ್ಲಿನ ಬೇಸಿನ್ ರಿಸರ್ವ್‌ನಲ್ಲಿ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ ಹೊಸ ಚೆಂಡಿನಲ್ಲಿ ಉತ್ತಮ ದಾಳಿ ನಡೆಸಿತು. ಒಂದು ವರ್ಷದ ಬಳಿಕ ಭಾರತ ಪರ ಟೆಸ್ಟ್ ಆಡಲಿಳಿದ ಜಸ್‌ಪ್ರೀತ್ ಬುಮ್ರಾ ತಾವೆಸೆದ ಮೊದಲ ಓವರ್‌ನ ಮೂರನೇ ಎಸೆತದಲ್ಲಿಯೇ ನಾಯಕ ಟಾಮ್ ಲ್ಯಾಥಮ್(0) ಅವರನ್ನು ಖಾತೆ ತೆರುವ ಮುನ್ನವೇ ಪೆವಿಲಿಯನ್‌ಗೆ ಅಟ್ಟಿದರು. ಇನ್‌ಸ್ಪಿಂಗ್ ಮೂಲಕ ನುಗ್ಗಿದ ಚೆಂಡು ವಿಕೆಟ್‌ಗೆ ಬಡಿಯಿತು.
ಇದರ ಬೆನ್ನಲ್ಲೇ ಅನ್ಷುಲ್ ಕಂಬೋಜ್ ಅವರು ಮತೋರ್ವ ಅಪಾಯಕಾರಿ ಬ್ಯಾಟರ್ ಡೆವೋನ್ ಕಾನ್ವೆ(4)ಗೂ ಪೆವಿಲಿಯನ್ ದಾರಿ ತೋರಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ರಚಿನ್ ರವೀಂದ್ರ(15) ಕೂಡ ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಲು ವಿಫಲರಾದರು. ಊಟದ ವಿರಾಮಕ್ಕೂ ಮುನ್ನ ಮತ್ತೆ ಘಾತಕ ದಾಳಿ ನಡೆಸಿದ ಬುಮ್ರಾ ಡೇರಿಲ್ ಮಿಚೆಲ್ (1) ಮತ್ತು ಬ್ಲಂಡೆಲ್(5) ವಿಕೆಟ್ ಕಿತ್ತರು. 70 ರನ್‌ಗೆ 5 ವಿಕೆಟ್ ಕಳೆದುಕೊಂಡು ಕಿವೀಸ್ ಸಂಕಷ್ಟಕ್ಕೆ ಸಿಲುಕಿತು.
ನಿಕೋಲ್ಸ್ ಶತಕ
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಕ್ರೀಸ್‌ನಲ್ಲಿ ಬೇರೂರಿ ನಿಂತ ಹೆನ್ರಿ ನಿಕೋಲ್ಸ್ ತಾಳ್ಮೆಯುತ ಬ್ಯಾಟಿಂಗ್ ಮೂಲಕ ಭಾರತೀಯ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿನಿಂತರು. ಇವರಿಗೆ 7ನೇ ಕ್ರಮಾಂಕದಲ್ಲಿ ಆಡಲಿಳಿದ ಗ್ಲೆನ್ ಫಿಲಿಪ್ಸ್ ಉತ್ತಮ ಜತೆಯಾಟದ ಸಾಥ್ ನೀಡಿದರು. ಚೆಂಡಿನ ಹೊಳಪು ಸವೆದಂತೆ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಈ ಜೋಡಿ 6ನೇ ವಿಕೆಟ್‌ಗೆ ಮುರಿಯದ 173 ರನ್‌ಗಳ ಜತೆಯಾಟ ನಡೆಸಿದರು.
ದಿಗ್ಗಜ ಜಾವಗಲ್ ಶ್ರೀನಾಥ್ ಟೆಸ್ಟ್ ದಾಖಲೆ ಹಿಂದಿಕ್ಕಿದ ಜಸ್‌ಪ್ರೀತ್ ಬುಮ್ರಾ
221 ಎಸೆತ ಎದುರಿಸಿದ ನಿಕೋಲ್ಸ್ 14 ಬೌಂಡರಿ ಸಿಡಿಸಿ ಅಜೇಯ 113 ರನ್ ಬಾರಿಸಿದರು. ಇದು ಭಾರತ ವಿರುದ್ಧ ಅವರ ಚೊಚ್ಚಲ ಮತ್ತು ಒಟ್ಟಾರೆ 13ನೇ ಟೆಸ್ಟ್ ಶತಕವಾಗಿದೆ. ಫಿಲ್ಸಪ್ 94 ರನ್ ಗಳಿಸಿದ್ದು ಶತಕದ ಹೊಸ್ತಿಲಲ್ಲಿ ನಿಂತಿದ್ದಾರೆ.
ಭಾರತ ಈ ಪಂದ್ಯಕ್ಕೆ ನಾಲ್ಕು ವೇಗಿಗಳು ಮತ್ತು 7 ಬ್ಯಾಟರ್‌ಗಳ ಸಂಯೋಜನೆಯೊಂದಿಗೆ ಆಡಲಿಳಿಯಿತು. ಅನುಭವಿಗಳಾದ ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಆಡುವ ಬಳಗದಿಂದ ಕೈಬಿಟ್ಟ ನಿರ್ಧಾರ ಅಚ್ಚರಿ ಎನಿಸಿತು.