ಗುವಾಹಟಿ, ಜ.25: ಅಭಿಷೇಕ್ ಶರ್ಮ ಮತ್ತು ಸೂರ್ಯಕುಮಾರ್ ಜೋಡಿಯ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿತು. ಜತೆಗೆ ಟಿ20 ವಿಶ್ವಕಪ್‌ಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತು.
ಇಲ್ಲಿನ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿತು. ನಾಯಕನ ಆಯ್ಕೆಗೆ ತಕ್ಕ ಬೌಲಿಂಗ್ ಪ್ರದರ್ಶನ ತೋರಿದ ಭಾರತೀಯ ಬೌಲರ್‌ಗಳು ಆರಂಭದಲ್ಲೇ ಕಿವೀಸ್ ಬ್ಯಾಟರ್‌ಗಳಿಗೆ ಇನ್ನಿಲ್ಲದಂತೆ ಕಾಡಿದರು. ನ್ಯೂಜಿಲ್ಯಾಂಡ್ 9 ವಿಕೆಟ್‌ಗೆ 153 ರನ್ ಮಾತ್ರ ಗಳಿಸಿತು. ಜವಾಬಿತ್ತ ಭಾರತ ಈ ಅಲ್ಪ ಮೊತ್ತವನ್ನು ಕೇವಲ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿ ಗೆಲುವು ಸಾಧಿಸಿತು.ಇದು ಅತಿ ಕಡಿಮೆ ಎಸೆತಗಳಿಂದ ಪಂದ್ಯ ಗೆದ್ದ ಎರಡನೇ ನಿದರ್ಶನ.
ಅಭಿಷೇಕ್-ಸೂರ್ಯ ಸ್ಫೋಟಕ ಬ್ಯಾಟಿಂಗ್
ಚೇಸಿಂಗ್ ವೇಳೆ ಭಾರತ ಖಾತೆ ತೆರೆಯುವ ಮುನ್ನವೇ ಆರಂಭಿ ಬ್ಯಾಟರ್ ಸಂಜು ಸ್ಯಾಮ್ಸನ್(0) ವಿಕೆಟ್ ಕಳೆದುಕೊಂಡಿತು. ಆದರೆ ಇಶಾನ್ ಇಶನ್ ಮತ್ತು ಅಭಿಷೇಕ್ ಶರ್ಮ ಬಿರುಸಿನ ಬ್ಯಾಟಿಂಗ್ ನಡೆಸಿ ಕೇವಲ 19 ಎಸೆತಗಳಲ್ಲಿ 53 ರನ್‌ಗಳ ಜತೆಯಾಟ ನಡೆಸಿದರು. ಇಶಾನ್ ಇಶನ್ 13 ಎಸೆತಗಳಲ್ಲಿ 28 ರನ್ ಚಚ್ಚಿದರು. ಇಶಾನ್ ವಿಕೆಟ್ ಪತನದ ಬಳಿಕ ಸೂರ್ಯಕುಮಾರ್ ಮತ್ತು ಅಭಿಷೇಕ್ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿ ಸಿಕ್ಸರ್ ಮತ್ತು ಬೌಂಡರಿಗಳ ಮಳೆಯನ್ನೇ ಸುರಿಸಿ ನೆರೆದಿದ್ದ ಪ್ರೇಕ್ಷಕರನ್ನು ಬರಪೂರ ರಂಜಿಸಿದರು.
ಅಭಿಷೇಕ್ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, 23 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅಂತಿಮವಾಗಿ ಸೂರ್ಯಕುಮಾರ್ 6 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿ ಅಜೇಯ 57 ರನ್ ಗಳಿಸಿದರು. ಅಭಿಷೇಕ್ 20 ಎಸೆತಗಳಲ್ಲಿ ಅಜೇಯ 68 ರನ್ ಬಾರಿಸಿದರು. ಸಿಡಿದದ್ದು 5 ಸಿಕ್ಸರ್ ಮತ್ತು 7 ಬೌಂಡರಿ.
ಇದಕ್ಕೂ ಮುನ್ನ ಬ್ಯಾಟಿಂಗ್ ನೆಡೆಸಿದ ನ್ಯೂಜಿಲ್ಯಾಂಡ್ ಪರ ಗ್ಲೆನ್ ಫಿಲಿಪ್ಸ್(48) ಮತ್ತು ಮಾರ್ಕ್ ಚಾಪ್‌ಮನ್(32) ರನ್ ಗಳಿಸಿ ತಂಡದ ಪರ ಅತ್ಯಧಿಕ ಸ್ಕೋರರ್ ಎನಿಸಿಕೊಂಡರು. ಉಳಿದಂತೆ ನಾಯಕ ಮಿಚೆಲ್ ಸ್ಯಾಂಟ್ನರ್ 27 ರನ್ ಬಾರಿಸಿದರು. ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಜಸ್‌ಪ್ರೀತ್ ಬುಮ್ರಾ 17 ರನ್‌ಗೆ 3 ವಿಕೆಟ್ ಉರುಳಿಸಿದರೆ, ಹಾರ್ದಿಕ್ ಪಾಂಡ್ಯ ಮತ್ತು ರವಿ ಬಿಷ್ಣೋಯ್ ತಲಾ 2 ವಿಕೆಟ್ ಪಡೆದರು.
ಹರ್ಷಿತ್ ರಾಣಾ ಒಂದು ವಿಕೆಟ್ ಕಿತ್ತರು. ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ 2 ಬದಲಾವಣೆ ಮಾಡಿತು. ಅರ್ಶ್‌ದೀಪ್ ಸಿಂಗ್ ಮತ್ತು ವರುಣ್ ಚಕ್ರವರ್ತಿ ಅವರನ್ನು ಕೈಬಿಟ್ಟು ಜಸ್‌ಪ್ರೀತ್ ಬುಮ್ರಾ ಮತ್ತು ರವಿ ಬಿಷ್ಣೊಯಿ ಆಡುವ ಬಳಗದಲ್ಲಿ ಸ್ಥಾನ ಪಡೆದರು.