ಮೌಂಟ್ ಮೌಂಗನುಯಿ, ನ.13: ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ಇಳಿದದ್ದು ಪಾತಾಳಕ್ಕೆ. ಬರೀ ಸೋಲಲ್ಲ ಅತ್ಯಂತ ಹೀನಾಯ ಸೋಲು. 89 ರನ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 244 ರನ್ ಅಂತರದ ಹೀನಾಯ ಸೋಲು ಅನುಭವಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಆರಂಭಿಕ ಬ್ಯಾಟರ್ ವಿಲ್ ಯಂಗ್(125) ಆಕರ್ಷಕ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 333 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಭಾರತದ ಆಟಗಾರರು ಕಿವೀಸ್ ತಂಡದ ಬೌಲರ್ಗಳ ಎದುರು ತತ್ತರಿಸಿದರು. 26.4 ಓವರ್ಗಳಲ್ಲಿ ಕೇವಲ 89 ರನ್ ಗಳಿಸಿ ಸರ್ವಪತನ ಕಂಡರು. ಗೆಲುವು ಸಾಧಿಸಿದ ಕಿವೀಸ್ ಸರಣಿ ಸೋಲಿನಿಂದ ಸದ್ಯ ಪಾರಾಯಿತು. ಇತ್ತಂಡಗಳ ನಡುವಣ ಅಂತಿಮ ಪಂದ್ಯ ಭಾನುವಾರ ನಡೆಯಲಿದೆ.
ಹೆನ್ರಿ ದಾಳಿಗೆ ತತ್ತರಿಸಿದ ಭಾರತ
ಕಠಿಣ ಮೊತ್ತದ ಸವಾಲು ಬೆನ್ನತ್ತಿದ ಭಾರತ ತಂಡಕ್ಕೆ ವೇಗಿ ಮ್ಯಾಟ್ ಹೆನ್ರಿ ಇನಿಂಗ್ಸ್ನ ಮೊದಲ ಓವರ್ನಲ್ಲಿ ತ್ರಿವಳಿ ಆಘಾತವಿಕ್ಕಿದರು. ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿ ಪೆವಿಲಿಯನ್ಗೆ ಅಟ್ಟಿದರು. ಇದರಲ್ಲಿ ರೋಹಿತ್ ಮತ್ತು ಅಯ್ಯರ್ ಗೋಲ್ಡನ್ ಡಕ್ ಆದರು. ನಾಲ್ಕು ಎಸೆತ ಎದುರಿಸಿದ ಕೊಹ್ಲಿ ಕ್ಲೀನ್ ಬೌಲ್ಡ್ ಆದರು.
ಮೊದಲ ಓವರ್ನಲ್ಲಿಯೇ ಮೂರು ವಿಕೆಟ್ ಪತನಗೊಳ್ಳುತ್ತಿದ್ದಂತೆ ಅದಾಗಲೇ ಭಾರತ ಸೋಲು ಬಹುತೇಕ ಖಚಿತವಾಯಿತು. ಘಾತಕ ಬೌಲಿಂಗ್ ದಾಳಿ ನಡೆಸಿದ ಹೆನ್ರಿ 2 ಓವರ್ ಮೇಡನ್ ಸಹಿತ 27 ರನ್ ವೆಚ್ಚದಲ್ಲಿ 6 ವಿಕೆಟ್ ಉಡಾಯಿಸಿದರು.
ಏಕದಿನ ಪಂದ್ಯವೊಂದರಲ್ಲಿ ಯಾವುದೇ ರನ್ ಗಳಿಸುವ ಮೊದಲೇ ತಮ್ಮ ಮೊದಲ ಮೂರು ವಿಕೆಟ್ಗಳನ್ನು ಕಳೆದುಕೊಂಡ ಐದನೇ ತಂಡವಾಗಿ ಭಾರತ ಹೊರಹೊಮ್ಮಿತು.
ಭಾರತ ಪರ ಕೇವಲ ಮೂವರು ಬ್ಯಾಟರ್ಗಳು ಮಾತ್ರ ಎರಡಂಕಿ ಮೊತ್ತದ ಗಡಿ ದಾಟಿದರು. ಇಶಾನ್ ಕಿಶನ್(27), ಅಕ್ಷರ್ ಪಟೇಲ್ ಮತ್ತು ನಮನ್ ಧೀರ್ ತಲಾ 21 ರನ್ ಗಳಿಸಿದರು. ಹೆನ್ರಿ ಹೊರತುಪಡಿಸಿ ಮ್ಯಾಥ್ಯೂ ಫಿಶರ್ ಮೂರು ವಿಕೆಟ್ ಕಿತ್ತರು.
ಕಳಪೆ ಫೀಲ್ಡಿಂಗ್ಗೆ ಬೆಲೆ ತೆತ್ತ ಭಾರತ
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡಕ್ಕೆ ಭಾರತ ಕಳಪೆ ಫೀಲ್ಡಿಂಗ್ ವರದಾನವಾಯಿತು. ರೋಹಿತ್ ಶರ್ಮಾ ಮತ್ತು ವಿಕೆಟ್ ಕೀಪರ್ ಇಶಾನ್ ಕಿಶನ್ ಅವರು ಸತತ ಎಸೆತಗಳಲ್ಲಿ ಕ್ಯಾಚ್ಗಳನ್ನು ಕೈಬಿಟ್ಟಿದ್ದರಿಂದ, ನ್ಯೂಜಿಲೆಂಡ್ ಆರಂಭಿಕ ಆಟಗಾರ ವಿಲ್ ಯಂಗ್ಗೆ ಒಂದೇ ಓವರ್ನ ಎರಡು ಎಸೆತಗಳಲ್ಲಿ ಎರಡು ಜೀವದಾನಗಳು ಲಭಿಸಿದವು. ಇದರ ಸಂಪೂರ್ಣ ಲಾಭವೆತ್ತಿದ ಅವರು ಸೊಗಸಾದ ಶತಕ ಬಾರಿಸಿ ಮಿಂಚಿದರು. 14 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 125 ರನ್ ಬಾರಿಸಿದರು. ಇವರ ಜತೆಗಾರ ಟಿಮ್ ಸೀಫರ್ಟ್(58) ಅರ್ಧಶತಕ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಫಿನ್ ಆಲೆನ್ 41 ರನ್ ಕೊಡುಗೆ ನೀಡಿದರು. ಭಾರತ ಪರ ಬೌಲಿಂಗ್ನಲ್ಲಿ ಔಕಿಬ್ ನಬಿ, ಗುರ್ನೂರ್ ಬ್ರಾರ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು.