ವಡೋದರ, ಜ.11: 2025ರಲ್ಲಿ ಸತತ ಟಾಸ್ ಸೋಲಿನಿಂದ ಕಂಗೆಟ್ಟಿದ್ದ ಭಾರತ ತಂಡ 2026ರ ವರ್ಷದ ಮೊದಲ ಸರಣಿಯಲ್ಲೇ ಟಾಸ್ ಗೆದ್ದು ಶುಭಾರಂಭ ಮಾಡಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಮೊಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿದೆ.
ಕೋಟಂಬಿ ಸ್ಟೇಡಿಯಂನಲ್ಲಿ ಇದು ಮೊಟ್ಟಮೊದಲ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಗಿದೆ. ಸದ್ಯ ಇಲ್ಲಿನ 25 ಡಿಗ್ರಿ ಸೆಲ್ಸಿಯಸ್ ಸಮೀಪದಲ್ಲಿದ್ದು, ಇಬ್ಬನಿ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಟಾಸ್ ಗೆದ್ದ ಭಾರತ ತಂಡ ಚೇಸಿಂಗ್ಗೆ ಆದ್ಯತೆ ನೀಡಿತು.
ಭಾರತದ ಪರ ಕಳೆದ ಅಕ್ಟೋಬರ್‌ನಲ್ಲಿ ಕೊನೆ ಬಾರಿ ಏಕದಿನ ಪಂದ್ಯವಾಡಿದ್ದ ಶ್ರೇಯಸ್ ಅಯ್ಯರ್, ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಅವರು 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಕೆ.ಎಲ್.ರಾಹುಲ್ ವಿಕೆಟ್ ಕೀಪಿಂಗ್ ಜೊತೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ.
ಒಟ್ಟಾರೆ ಉಭಯ ತಂಡಗಳ ನಡುವೆ 17 ಬಾರಿ ಏಕದಿನ ಸರಣಿ ಆಯೋಜನೆಗೊಂಡಿವೆ. 9 ಬಾರಿ ಭಾರತ ಗೆದ್ದಿದ್ದರೆ, 2ರಲ್ಲಿ ಕಿವೀಸ್ ಜಯಗಳಿಸಿದೆ. 2 ಸರಣಿಗಳು ಡ್ರಾಗೊಂಡಿವೆ. ಕಳೆದ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಭಾರತದ ವಿರುದ್ಧ ಸೋತ ನಂತರ ಕಿವೀಸ್ ತಂಡ ಸತತ 9 ಏಕದಿನ ಪಂದ್ಯ ಗೆದ್ದ ಸಾಧನೆ ಮಾಡಿದೆ. ವಡೋದರದಲ್ಲೂ ಗೆದ್ದರೆ ಕಿವೀಸ್ ತಂಡ 2015 ಮತ್ತು 2021ರಲ್ಲಿ ಸತತ 10 ಏಕದಿನ ಪಂದ್ಯ ಗೆದ್ದ ತನ್ನ ದಾಖಲೆಯನ್ನು ಸರಿಗಟ್ಟಲಿದೆ.
ಉಭಯ ಆಡುಬ ಬಳಗ
ನ್ಯೂಜಿಲ್ಯಾಂಡ್: ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ವಿಲ್ ಯಂಗ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಹೇ(ವಿಕೆ), ಮೈಕೆಲ್ ಬ್ರೇಸ್‌ವೆಲ್(ಸಿ), ಜಕಾರಿ ಫೌಲ್ಕ್ಸ್, ಕ್ರಿಸ್ಟಿಯನ್ ಕ್ಲಾರ್ಕ್, ಕೈಲ್ ಜೇಮಿಸನ್, ಆದಿತ್ಯ ಅಶೋಕ್
ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್ (ಸಿ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ಡಬ್ಲ್ಯೂ), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ನೇರಪ್ರಸಾರ: ಭಾರತ vs ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯವನ್ನು ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಮತ್ತು ಭಾನುವಾರ ಮಧ್ಯಾಹ್ನ 1.30 ರಿಂದ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗುತ್ತದೆ.