ಆಕ್ಲೆಂಡ್, ನ.2: ಐದು ಪಂದ್ಯಗಳ ಟಿ20 ಸರಣಿಯಲ್ಲಿ 3-2 ಅಂತರದ ಗೆಲುವು ಸಾಧಿಸಿದ ನಂತರ, ಭಾರತೀಯ ಪುರುಷರ ಕ್ರಿಕೆಟ್ ತಂಡವು ಈಗ ಐದು ಪಂದ್ಯಗಳ ಏಕದಿನ (ODI) ಸರಣಿಯಲ್ಲಿ ನ್ಯೂಜಿಲೆಂಡ್ ತಂಡದ ಮತ್ತೊಂದು ಎದುರಿಸಲಿದೆ. ವಿಶ್ವದ ನಂ. 1 ಏಕದಿನ ಬ್ಯಾಟರ್ ಶುಭಮನ್ ಗಿಲ್ ಅವರು ಮೊದಲ ಮೂರು ಪಂದ್ಯಗಳಲ್ಲಿ ಪ್ರವಾಸಿ ತಂಡದ ನಾಯಕತ್ವ ವಹಿಸಲಿದ್ದಾರೆ. ಕೊನೆಯ ಎರಡು ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ.
ಅಯ್ಯರ್ ಭಾರತದ ಟಿ20 ಅಂತರರಾಷ್ಟ್ರೀಯ ತಂಡದ ಖಾಯಂ ನಾಯಕರಾಗಿದ್ದರೂ, ಏಕದಿನ ಕ್ರಿಕೆಟ್ನಲ್ಲಿ ಈ ಹಿಂದೆಂದೂ ಭಾರತ ತಂಡವನ್ನು ಮುನ್ನಡೆಸಿರಲಿಲ್ಲ. ಹೀಗಾಗಿ, ನವೆಂಬರ್ 13 ರಂದು ಅವರು ನಾಯಕರಾಗಿ ತಮ್ಮ ಚೊಚ್ಚಲ ಪಂದ್ಯವನ್ನು ಆಡಲಿದ್ದಾರೆ.
ಕಿವೀಸ್ ತಂಡವು ಮಿಚೆಲ್ ಸ್ಯಾಂಟ್ನರ್ ಅವರ ನಾಯಕತ್ವದಲ್ಲಿ ಆಡಲಿದೆ. ಆದರೆ, ತಂಡಕ್ಕೆ ದೊಡ್ಡ ಹಿನ್ನಡೆಯುಂಟಾಗಿದೆ. ಗಾಯದ ಸಮಸ್ಯೆಯಿಂದಾಗಿ ರಚಿನ್ ರವೀಂದ್ರ ಮತ್ತು ಮಾರ್ಕ್ ಚಾಪ್ಮನ್ ಈ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಟಿಮ್ ಸೀಫರ್ಟ್ ಮತ್ತು ಹೆನ್ರಿ ನಿಕೋಲ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಐಪಿಎಲ್ ಹರಾಜಿಗೂ ಮುನ್ನ 14.2 ಕೋಟಿ ಮೌಲ್ಯದ ಆಲ್ರೌಂಡರ್ ಕೈಬಿಡಲು ಮುಂದಾದ ಸಿಎಸ್ಕೆ
ಏಕದಿನ ಪಂದ್ಯಗಳಿಗಾಗಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತ ತಂಡಕ್ಕೆ ಮರಳಿದ್ದು, ಅವರು ಐದೂ ಪಂದ್ಯಗಳಲ್ಲಿ ಆಡಲಿದ್ದಾರೆ. ಆದರೆ, ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
ಸರಣಿಯ ಬಗ್ಗೆ...
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ಬುಧವಾರದಂದು (ನವೆಂಬರ್ 4) ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆಯಲಿದೆ. ನಂತರದ ಎರಡು ಪಂದ್ಯಗಳು ಕ್ರಮವಾಗಿ ನವೆಂಬರ್ 7 ಮತ್ತು 10 ರಂದು ವೆಲ್ಲಿಂಗ್ಟನ್ನ ಸ್ಕೈ ಸ್ಟೇಡಿಯಂ ಹಾಗೂ ಹ್ಯಾಮಿಲ್ಟನ್ನ ಸೆಡ್ಡನ್ ಪಾರ್ಕ್ನಲ್ಲಿ ನಡೆಯಲಿವೆ. ಸರಣಿಯ ಕೊನೆಯ ಎರಡು ಪಂದ್ಯಗಳು ಕ್ರಮವಾಗಿ ನವೆಂಬರ್ 13 ಮತ್ತು 15 ರಂದು ಮೌಂಟ್ ಮೌಂಗನುಯಿಯ ಬೇ ಓವಲ್ನಲ್ಲಿ ನಡೆಯಲಿವೆ.
ಪಂದ್ಯಗಳ ಆರಂಭದ ಸಮಯ
ಇತ್ತಂಡಗಳ ನಡುವಿನ ಎಲ್ಲಾ ಐದು ಏಕದಿನ ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 7:30ಕ್ಕೆ (ಸ್ಥಳೀಯ ಕಾಲಮಾನ ಮಧ್ಯಾಹ್ನ 3:00ಕ್ಕೆ) ಪ್ರಾರಂಭವಾಗಲಿವೆ.
ಲೈವ್ ಸ್ಟ್ರೀಮಿಂಗ್ ಮತ್ತು ಪ್ರಸಾರ ವಿವರಗಳು
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯು ಭಾರತದಲ್ಲಿ 'ಸೋನಿ ಟೆನ್' (Sony Ten) ಟಿವಿ ಚಾನೆಲ್ಗಳಲ್ಲಿ ನೇರ ಪ್ರಸಾರವಾಗಲಿದೆ. ಅಲ್ಲದೆ, 'ಸೋನಿ ಲಿವ್' (Sony LIV) ಆ್ಯಪ್ ಮತ್ತು ವೆಬ್ಸೈಟ್ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.