ಕೊಲಂಬೊ, ಫೆ.14: ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಿನ ಘರ್ಷಣೆ ಕೇವಲ ಕ್ರಿಕೆಟ್ ಪಂದ್ಯವಲ್ಲ ಇದು ಭಾವನೆ, ಒತ್ತಡ ಮತ್ತು ಇತಿಹಾಸವನ್ನು ಒಂದಾಗಿ ಸಂಯೋಜಿಸುತ್ತದೆ. ಐಸಿಸಿ ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಭೇಟಿಯಾದಾಗಲೆಲ್ಲಾ, ಲಕ್ಷಾಂತರ ಅಭಿಮಾನಿಗಳು ಪಂದ್ಯ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಲ್ಲುತ್ತಾರೆ. ಈ ಪಂದ್ಯಗಳು ಸಾಮಾನ್ಯವಾಗಿ ನಿಕಟ, ನಾಟಕೀಯ ಮತ್ತು ವರ್ಷಗಳ ಕಾಲ ನೆನಪಿನಲ್ಲಿ ಉಳಿಯುತ್ತವೆ. ಇದೀಗ ಇತ್ತಂಡಗಳ ನಡುವಣ ಟಿ20 ವಿಶ್ವಕಪ್‌ನ ಲೀಗ್ ಪಂದ್ಯ ಭಾನುವಾರ(ಫೆ.15) ಕೊಲಂಬೊದಲ್ಲಿ ನಡೆಯಲಿದೆ.
ಉಭಯ ತಂಡಗಳು ಇಲ್ಲಿಯವರೆಗೆ ಟಿ20 ವಿಶ್ವಕಪ್‌ಗಳಲ್ಲಿ ಎಂಟು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಭಾರತ ಏಳು ಬಾರಿ ಗೆದ್ದಿದೆ. ಪಾಕಿಸ್ತಾನ ಒಮ್ಮೆ ಮಾತ್ರ ಗೆದ್ದಿದೆ. ಪ್ರತಿ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರತಿಯೊಂದು ಪಂದ್ಯವು ಹೇಗೆ ಕೊನೆಗೊಂಡಿತು ಎಂಬುದರ ಕುರಿತು ಒಂದು ಸಣ್ಣ ನೋಟ ಇಲ್ಲಿದೆ.
2007: ಎರಡು ಪಂದ್ಯಗಳು (ಗುಂಪು ಹಂತ + ಫೈನಲ್)
ಉದ್ಘಾಟನ ಆವೃತ್ತಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡು ಬಾರಿ ಮುಖಾಮುಖಿಯಾಗಿತ್ತು. ಲೀಗ್ ಹಂತದ ಪಂದ್ಯ ಟೈ ಆಗಿ ಬಾಲ್ ಔಟ್ ಮೂಲಕ ಫಲಿತಾಂಶ ನಿರ್ಧರಿಸಲಾಯಿತು. ಇಲ್ಲಿ ಭಾರತ ಗೆಲುವು ಸಾಧಿಸಿತ್ತು. ಫೈನಲ್‌ನಲ್ಲಿ ಮತ್ತೆ ಇತ್ತಂಡಗಳು ಎದುರಾದವು. ಅತ್ಯಂತ ರೋಚಕತೆಯಿಂದ ಸಾಗಿದ ಈ ಪಂದ್ಯದಲ್ಲಿ ಭಾರತ 5 ರನ್‌ಗಳ ಗೆಲುವು ಸಾಧಿಸಿ ಚೊಚ್ಚಲ ಟ್ರೋಫಿ ಗೆದ್ದಿತು.
2012: ಭಾರತಕ್ಕೆ 8 ವಿಕೆಟ್‌ಗಳ ಜಯ
ಐದು ವರ್ಷಗಳ ನಂತರ, ಇತ್ತಂಡಗಳು ಮತ್ತೆ ಮುಖಾಮುಖಿಯಾದವು. ವಿರಾಟ್ ಕೊಹ್ಲಿಯ ಅದ್ಭುತ ಅಜೇಯ ಬ್ಯಾಟಿಂಗ್‌ನಿಂದ ಭಾರತ ಸುಲಭವಾಗಿ ಗುರಿಯನ್ನು ಬೆನ್ನಟ್ಟಿ 8 ವಿಕೆಟ್ ಅಂತರದ ಗೆಲವು ಸಾಧಿಸಿತು. ಈ ಪಂದ್ಯ ಕೊಲಂಬೊದಲ್ಲಿ ನಡೆದಿತ್ತು.
IND vs PAK: ಪಾಕ್ ಪಂದ್ಯಕ್ಕೂ ಮುನ್ನ ಕೊಲಂಬೊದಲ್ಲಿ ಭಾರತ ಟಿ20 ಸಾಧನೆಯ ಇಣುಕು ನೋಟ
2014: ಭಾರತಕ್ಕೆ 7 ವಿಕೆಟ್ ಗೆಲುವು
ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ಅವರ ಅಮೋಘ ಜತೆಯಾಟದಿಂದ ಭಾರತ 7 ವಿಕೆಟ್ ಅಂತರದ ಗೆಲುವು ಸಾಧಿಸಿತು. ಪಾಕಿಸ್ತಾನ 130 ರನ್ ಗಳಿಸಿದರೆ ಭಾರತ 3 ವಿಕೆಟ್‌ಗೆ 131 ರನ್ ಬಾರಿಸಿ ಗೆಲುವು ಸಾಧಿಸಿತ್ತು.
2016: ಭಾರತಕ್ಕೆ 6 ವಿಕೆಟ್‌ಗಳ ಜಯ
ಮಳೆಯಿಂದ ಬಾಧಿತವಾದ ಪಂದ್ಯದಲ್ಲಿ ಭಾರತ ತಂಡವು ಗುರಿಯನ್ನು ಸರಾಗವಾಗಿ ಬೆನ್ನಟ್ಟಿತು. ವಿರಾಟ್ ಕೊಹ್ಲಿ ಮತ್ತೊಮ್ಮೆ ಪಂದ್ಯ ಗೆಲ್ಲುವ ಇನ್ನಿಂಗ್ಸ್ ಆಡಿದರು. ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ 5 ವಿಕೆಟ್‌ಗೆ 118 ರನ್ ಗಳಿಸಿದರೆ, ಭಾರತ ವಿರಾಟ್ ಕೊಹ್ಲಿಯ ಅಜೇಯ ಅರ್ಧಶತಕದ ನೆರವಿನಿಂದ 4 ವಿಕೆಟ್‌ಗೆ 119 ರನ್ ಬಾರಿಸಿ ಗೆಲುವು ಕಂಡಿತ್ತು.
2021: ಪಾಕಿಸ್ತಾನಕ್ಕೆ 10 ವಿಕೆಟ್ ಜಯ
ಸತತ ನಾಲ್ಕು ಆವೃತ್ತಿಯಲ್ಲಿಯೂ ಸೋಲು ಕಂಡಿದ್ದ ಪಾಕಿಸ್ತಾನ ಕೊನೆಗೂ ದೀರ್ಘ ಸೋಲಿನ ಸರಣಿಯನ್ನು ಕೊನೆಗೊಳಿಸಿತು. ಅದು ಕೂಡ 10 ವಿಕೆಟ್ ಅಂತರದ ಗೆಲುವಿನ ಮೂಲಕ. ದುಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತದ 150 ರನ್ ಬೆನ್ನಟ್ಟಿದ ಪಾಕ್ ವಿಕೆಟ್ ನಷ್ಟವಿಲ್ಲದೆ ಗೆಲುವು ಸಾಧಿಸಿತು. ಪಾಕ್ ಪರ ಬಾಬರ್ ಅಜಂ(68*) ಮತ್ತು ರಿಜ್ವಾನ್(79*) ರನ್ ಗಳಿಸಿದ್ದರು.
ಆಸ್ಟ್ರೇಲಿಯಾವನ್ನು ಜಿಂಬಾಬ್ವೆ ಸೋಲಿಸಿದೆ, ಇದೀಗ ಪಾಕ್‌ನ ಸರದಿ; ಭಾರತಕ್ಕೆ ಮೊಹಮ್ಮದ್ ಯೂಸಫ್ ವಾರ್ನಿಂಗ್!
2022: ಭಾರತಕ್ಕೆ 4 ವಿಕೆಟ್ ಗೆಲುವು
ವಿರಾಟ್ ಕೊಹ್ಲಿ(82*)ಯ ಅಸಾಮಾನ್ಯ ಬ್ಯಾಟಿಂಗ್ ಪದರ್ಶನದ ನೆರವಿನಿಂದ ಭಾರತ ತಂಡ 4 ವಿಕೆಟ್ ಅಂತರದ ಗೆಲುವು ಸಾಧಿಸಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ 159/8 ಬಾರಿಸಿದರೆ, ಭಾರತ 160/6 ಗಳಿಸಿ ಜಯ ಗಳಿಸಿತ್ತು.
2024: ಭಾರತಕ್ಕೆ 6 ರನ್ ಜಯ
ಲೋ-ಸ್ಕೋರ್ ಪಂದ್ಯವಾದರೂ ಅತ್ಯಂತ ಪೈಪೋಟಿಯಿಂದ ಕೂಡಿದ ಈ ಮುಖಾಮುಖಿಯಲ್ಲಿ ಭಾರತ 6 ರನ್‌ಗಳ ರೋಚಕ ಗೆಲುವು ಸಾಧಿಸಿತ್ತು. ಜಸ್‌ಪ್ರೀತ್ ಬುಮ್ರಾ(14ಕ್ಕೆ2) ಮತ್ತು ಹಾರ್ದಿಕ್ ಪಾಂಡ್ಯ(24 ಕ್ಕೆ2) ವಿಕೆಟ್ ಕಿತ್ತು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.