ವಿಶಾಖಪಟ್ಟಣಂ, ಡಿ.6: ಸತತ 20 ಪಂದ್ಯಗಳಲ್ಲಿ ಟಾಸ್ ಸೋತಿದ್ದ ಭಾರತ ತಂಡ ಕೊನೆಗೂ 21ನೇ ಪ್ರಯತ್ನದಲ್ಲಿ ಟಾಸ್ ಗೆಲ್ಲುವಲ್ಲಿ ಯಶಸ್ಸು ಕಂಡಿದೆ. ದಕ್ಷಿಣ ಆಫ್ರಿಕಾ(India vs South Africa 3rd ODI) ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ರಾಂಚಿ ಹಾಗೂ ರಾಯ್ಪುರ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ 3ನೇ ಪಂದ್ಯದಲ್ಲೂ ಅಬ್ಬರಿಸಬಲ್ಲರೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಭಾರತ ಟಾಸ್ ಗೆಲ್ಲುತ್ತಿದ್ದಂತೆ ನಾಯಕ ರಾಹುಲ್, ಸಹ ಆಟಗಾರರಾದ ಹರ್ಷಿತ್ ರಾಣಾ, ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಖುಷಿಯಲ್ಲಿ ಕುಣಿದಾಡಿದರು. ಅತ್ತ ನೆರೆದಿದ್ದ ಪ್ರೇಕ್ಷಕರು ಪಂದ್ಯ ಗೆದ್ದಂತೆ ಜೋರಾಗಿ ಕಿರುಚುತ್ತಾ ಸಂಭ್ರಮಿಸಿದರು. ರಾಹುಲ್ ಎಡಗೈನಲ್ಲಿ ನಾಣ್ಯ ಚಿಮ್ಮುಗೆ ಮಾಡಿದರು.
ಭಾರತ ತಂಡವು ಈ ಪಂದ್ಯಕ್ಕೆ ಒಂದು ಬದಲಾವಣೆ ಮಾಡಿಕೊಂಡಿತು. ಕಳೆದ ಎರಡು ಪಂದ್ಯಗಳಲ್ಲಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಎರಡೂ ಪಂದ್ಯಗಳಲ್ಲೂ ಸುಂದರ್ ಅವರು ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸುಂದರ್ ಬದಲಿಗೆ ತಿಲಕ್ ವರ್ಮಾಗೆ ಸ್ಥಾನ ನೀಡಲಾಯಿತು. ದಕ್ಷಿಣ ಆಫ್ರಿಕಾ ಕೂಡ ಎರಡು ಬದಲಾವಣೆ ಮಾಡಿಕೊಂಡಿತು. ಗಾಯಾಳು ಬರ್ಗರ್ ಮತ್ತು ಡಿ ಜೋರ್ಜಿ ಅವರನ್ನು ಕೈಬಿಟ್ಟು ರಿಕಲ್ಟನ್ ಮತ್ತು ಬಾರ್ಟ್‌ಮನ್‌ಗೆ ಅವಕಾಶ ನೀಡಲಾಯಿತು.
ದ.ಆಫ್ರಿಕಾ ತಂಡ ಈವರೆಗೂ ಭಾರತದಲ್ಲಿ 6 ಬಾರಿ ಏಕದಿನ ಸರಣಿ ಆಡಿದ್ದು, ಒಮ್ಮೆ ಮಾತ್ರ ಗೆದ್ದಿದೆ. 2015-16ರ ಪ್ರವಾಸದಲ್ಲಿ ದ.ಆಫ್ರಿಕಾ 5 ಪಂದ್ಯಗಳ ಸರಣಿಯನ್ನು 3-2 ಅಂತರದಲ್ಲಿ ಗೆದ್ದಿತ್ತು. ಉಳಿದ 4 ಸರಣಿಗಳಲ್ಲಿ ಭಾರತ ಗೆದ್ದಿದ್ದು, ಒಂದು ಬಾರಿ ಸರಣಿ ಡ್ರಾಗೊಂಡಿದೆ. ಒಟ್ಟಾರೆ ಉಭಯ ತಂಡಗಳು 14 ಬಾರಿ ಸರಣಿ ಆಡಿದ್ದು, ಭಾರತ 7ರಲ್ಲಿ, ದ.ಆಫ್ರಿಕಾ 6ರಲ್ಲಿ ಜಯಗಳಿಸಿದೆ. ಒಂದು ಸರಣಿ ಡ್ರಾ ಆಗಿದೆ.
ಇದನ್ನೂ ಓದಿ ಸಚಿನ್ ತೆಂಡೂಲ್ಕರ್‌ರ 100 ಶತಕಗಳ ದಾಖಲೆ ಮುರಿಯುತ್ತಾರಾ ವಿರಾಟ್ ಕೊಹ್ಲಿ?
ಉಭಯ ಆಡುವ ಬಳಗ
ದಕ್ಷಿಣ ಆಫ್ರಿಕಾ: ರಿಯಾನ್ ರಿಕೆಲ್ಟನ್, ಕ್ವಿಂಟನ್ ಡಿ ಕಾಕ್ (ವಿ.ಕೀ.), ಟೆಂಬಾ ಬವುಮಾ (ನಾಯಕ), ಮ್ಯಾಥ್ಯೂ ಬ್ರೀಟ್ಜ್ಕೆ, ಐಡೆನ್ ಮಾರ್ಕ್ರಾಮ್, ಡೆವಾಲ್ಡ್ ಬ್ರೆವಿಸ್, ಮಾರ್ಕೊ ಜಾನ್ಸೆನ್, ಕಾರ್ಬಿನ್ ಬಾಷ್, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಒಟ್ನೀಲ್ ಬಾರ್ಟ್ಮನ್.
ಭಾರತ: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಕೆಎಲ್ ರಾಹುಲ್(w/c), ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಕುಲದೀಪ್ ಯಾದವ್,ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ.