ಕೋಲ್ಕತಾ, ಮಾ.1: ಮಹತ್ವದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್(97*) ಬಾರಿಸಿದ ಅರ್ಧಶತಕದ ನೆರವಿನಿಂದ ಭಾರತ ತಂಡ ತನ್ನ ಕೊನೆಯ ಸೂಪರ್-8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 5 ವಿಕೆಟ್ ಅಂತರದ ಗೆಲುವು ಸಾಧಿಸಿ ಕೊನೆಯ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು. ಮಾ.5ರಂದು ಮಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಸವಾಲು ಎದುರಿಸಲಿದೆ.
ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಆಹ್ವಾನ ಪಡೆದ ವೆಸ್ಟ್ ಇಂಡೀಸ್ ಬೀಸಾಟ ನಡೆಸಿ 4 ವಿಕೆಟ್‌ಗೆ 195 ರನ್ ಬಾರಿಸಿತು. ಜವಾಬಿತ್ತ ಭಾರತ 4 ಎಸೆತ ಬಾಕಿ ಇರುವಂತೆಯೇ 5 ವಿಕೆಟ್‌ಗೆ 199 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಈ ಮೂಲಕ 6ನೇ ಬಾರಿಗೆ ಭಾರತ ಟಿ20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದ ಸಾಧನೆಗೈದಿತು.
ಚೇಸಿಂಗ್ ವೇಳೆ ಭಾರತ ಆರಂಭಿಕ ಆಘಾತ ಎದುರಿಸಿತು. ಅಪಾಯಕಾರಿ ಬ್ಯಾಟರ್‌ಗಳಾದ ಅಭಿಷೇಕ್ ಶರ್ಮ ಮತ್ತು ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡಿತು. ಉಭಯ ಆಟಗಾರರು 10 ರನ್ ಬಾರಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಸಿಡಿದು ನಿಂತ ಸಂಜು ಸ್ಯಾಮ್ಸನ್, ನಾಯಕ ಸೂರ್ಯಕುಮಾರ್ ಯಾದವ್ ಜತೆಗೂಡಿ ಉತ್ತಮ ಜತೆಯಾಟ ಸಂಘಟಿಸಿದರು. 26 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಇದು ಟಿ20 ವಿಶ್ವಕಪ್‌ನಲ್ಲಿ ಅವರ ಚೊಚ್ಚಲ ಅರ್ಧಶತಕ.
ಕಳಪೆ ಬ್ಯಾಟಿಂಗ್ ಫಾರ್ಮ್‌ನಿಂದ ಟೀಕೆ ಎದುರಿಸುತ್ತಿದ್ದ ಸಂಜು, ಈ ಮಹತ್ವದ ಪಂದ್ಯದಲ್ಲಿ ಜವಾಬ್ದಾರಿಯು ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸುವ ಮೂಲಕ ತಮ್ಮ ಮೇಲಿಟ್ಟ ವಿಶ್ವಾಸವನ್ನು ಉಳಿಸಿಕೊಂಡರು. ಸೂರ್ಯಕುಮಾರ್ 18, ತಿಲಕ್ ವರ್ಮ (27) ಮತ್ತು ಹಾರ್ದಿಕ್ ಪಾಂಡ್ಯ(17) ರನ್ ಗಳಿಸಿದರು. ಕೊನೆಯ ತನಕ ಬ್ಯಾಟಿಂಗ್ ನಡೆಸಿದ ಸಂಜು 50 ಎಸೆತಗಳಿಂದ 97 ರನ್ ಬಾರಿಸಿ ಅಜೇಯರಾಗಿ ಉಳಿದರು. ಅವರ ಈ ಬ್ಯಾಟಿಂಗ್ ಅಬ್ಬರದಲ್ಲಿ 4 ಸಿಕ್ಸರ್ ಮತ್ತು 12 ಸೊಗಸಾದ ಬೌಂಡರಿ ಸಿಡಿಯಿತು.
ವಿಂಡೀಸ್‌ಗೆ ಹೋಪ್, ಹೋಲ್ಡರ್, ಪೊವೆಲ್ ಆಸರೆ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ಆರಂಭದಿಂದಲೇ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ನಡೆಸಿದರು. ಅಭಿಷೇಕ್ ಶರ್ಮ ಕೈಚೆಲ್ಲಿದ ಕ್ಯಾಚ್‌ನಿಂದ ಜೀವದಾನ ಪಡೆದ ರೋಸ್ಟನ್ ಚೇಸ್ ಇದರ ಸಂಪೂರ್ಣ ಲಾಭವೆತ್ತಿ 25 ಎಸೆತಗಳಿಂದ 40 ರನ್ ಬಾರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಶಾಯ್ ಹೋಪ್ 32 ರನ್ ಬಾರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 68 ರನ್ ಒಟ್ಟುಗೂಡಿಸಿತು.
ಶಾಯ್ ಹೋಪ್ ವಿಕೆಟ್ ಪತನದ ಬಳಿಕ ಆಡಳಿಲಿದ ಶಿಮ್ರಾನ್ ಹೆಟ್‌ಮೇರ್ ಕೂಡ ಸ್ಫೋಟಕ ಆಟಕ್ಕೆ ಒತ್ತು ನೀಡಿದರು. 12 ಎಸೆತಗಳಿಂದ 27 ರನ್ ಬಾರಿಸಿದರು. ಇವರ ಈ ಅಬ್ಬರದ ಬ್ಯಾಟಿಂಗ್‌ಗೆ ಬುಮ್ರಾ ಬ್ರೇಕ್ ಹಾಕಿದರು. 2 ಸಿಕ್ಸರ್ ಬಾರಿಸಿದ ಅವರು ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿದರು. ಒಟ್ಟು 19 ಸಿಕ್ಸರ್ ಬಾರಿಸಿದ್ದಾರೆ. ಪಾಕಿಸ್ತಾನದ ಸಾಹಿಬ್‌ಜಾದಾ ಫರ್ಹಾನ್(18) ಎರಡನೇ ಸ್ಥಾನದಲ್ಲಿದ್ದಾರೆ. ಅವರು ಕೂಡ ಇದೇ ಆವೃತ್ತಿಯಲ್ಲಿ ಈ ಸಾಧನೆಗೈದರು.
ಜಿಂಬಾಬ್ವೆ ವಿರುದ್ಧ 5 ವಿಕೆಟ್ ಅಂತರದ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ
ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ವೆಸ್ಟ್ ಇಂಡೀಸ್ 100 ರನ್ ಗಳಿಸುತ್ತಿದ್ದಂತೆ ದಿಢೀರ್ ಕುಸಿತ ಕಂಡಿತು. ಆದರೆ ಅಂತಿಮ 5 ಓವರ್‌ಗಳ ಆಟದಲ್ಲಿ ಜಾಸನ್ ಹೋಲ್ಡರ್ ಮತ್ತು ರೋವ್ಮನ್ ಪೊವೆಲ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಈ ಜೋಡಿ ಮುರಿಯದ 5ನೇ ವಿಕೆಟ್‌ಗೆ 35 ಎಸೆತಗಳಲ್ಲಿ 76 ರನ್ ಕಲೆಹಾಕಿದರು.
ಭಾರತದ ಫೀಲ್ಡಿಂಗ್ ಈ ಪಂದ್ಯದಲ್ಲಿ ಅತ್ಯಂತ ಕಳಪೆ ಮಟ್ಟದಿಂದ ಕೂಡಿತು. ಅಭಿಷೇಕ್ ಶರ್ಮ ಎರಡು ಕ್ಯಾಚ್ ಕೈಚೆಲ್ಲಿದರು. ಉಳಿದಂತೆ ಹಲವು ಮಿಸ್ ಫೀಲ್ಡ್ ಮೂಲಕ ಬೌಂಡರಿ ಬಿಟ್ಟುಕೊಟ್ಟರು. ಹೋಲ್ಡರ್ 37 ಮತ್ತು ರೋವ್ಮನ್ ಪೊವೆಲ್ 34 ರನ್ ಬಾರಿಸಿ ಅಜೇಯರಾಗಿ ಉಳಿದರು. ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬುಮ್ರಾ 2 ವಿಕೆಟ್ ಕಿತ್ತರು.