ಹರಾರೆ, ಜು. 26: ವೈಭವ್ ಸೂರ್ಯವಂಶಿ(81) ಬಾರಿಸಿದ ಸೊಗಸಾದ ಅರ್ಧಶತಕದ ನೆರವಿನಿಂದ ಭಾರತ ತಂಡ ಜಿಂಬಾಬ್ವೆ ವಿರುದ್ಧ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 35 ರನ್ ಅಂತರದ ಗೆಲುವು ಸಾಧಿಸಿ ಕ್ಲೀನ್‌ಸ್ವೀಪ್ ಸಾಧನೆಗೈದಿದೆ. ನಾಯಕನಾಗಿ ಶ್ರೇಯಸ್ ಅಯ್ಯರ್ ಮೊದಲ ಸರಣಿ ಗೆಲುವಿನ ಖಾತೆ ತೆರೆದರು.
ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 192 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಜಿಂಬಾಬ್ವೆ 7 ವಿಕೆಟ್‌ಗೆ 157 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಈ ಮೂಲಕ ತವರಿನಲ್ಲಿಯೇ ವೈಟ್‌ವಾಶ್ ಮುಖಭಂಗ ಎದುರಿಸಿತು.
ಗುರಿ ಬೆನ್ನಟ್ಟಿದ ಜಿಂಬಾಬ್ವೆ ಆರಂಭದಲ್ಲೇ ಆಘಾತ ಎದುರಿಸಿತು. ಮಾಯಾಂಕ್ ಯಾದವ್ ಎಸೆದ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಬ್ರಿಯಾನ್ ಬೆನೆಟ್(0) ವಿಕೆಟ್ ಕಿತ್ತು ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. 34 ರನ್‌ಗೆ ಮೂರು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ರಯಾನ್ ಬರ್ಲ್ ಏಕಾಂಗಿ ಹೋರಾಟ ನಡೆಸಿ ಅರ್ಧಶತಕ ಬಾರಿಸಿ ಸೋಲಿನ ಅಂತರವನ್ನು ಕಡಿಮೆಗೊಳಿಸಿದರು. ಇವರಿಗೆ ಸ್ವಲ್ಪ ಹೊತ್ತು ಜತೆಯಾಟ ನೀಡಿದ ವೆಸ್ಲಿ ಮಧೆವೆರೆ 28 ರನ್‌ಗಳ ಕೊಡುಗೆ ನೀಡಿದರು. ಅಜೇಯರಾಗಿ ಉಳಿದ ರಯಾನ್ ಬರ್ಲ್ 5 ಬೌಂಡರಿ ನೆರವಿನಿಂದ 54 ರನ್ ಬಾರಿಸಿದರು.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದ ವಾಷಿಂಗ್ಟನ್ ಸುಂದರ್
ನಾಯಕ ಸಿಕಂದರ್ ರಾಜಾ ಗೋಲ್ಡನ್ ಡಕ್ ಆಗುವ ಮೂಲಕ ಆಡಿದ ಮೂರು ಪಂದ್ಯಗಳಲ್ಲಿಯೂ ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ಭಾರತ ಪರ ವೇಗಿ ಮಾಯಾಂಕ್ ಯಾದವ್ 3 ವಿಕೆಟ್ ಕಿತ್ತರು. ಯಶ್ ಠಾಕೂರ್ 2 ವಿಕೆಟ್ ಪಡೆದರು.
ಮತ್ತೆ ಮಿಂಚಿದ ಸೂರ್ಯವಂಶಿ
ಇಂಗ್ಲೆಂಡ್‌ನಲ್ಲಿ ಶಾರ್ಟ್‌ಬಾಲ್ ಎದುರಿಸುವಲ್ಲಿ ಸಮಸ್ಯೆ ಎದುರಿಸಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಜಿಂಬಾಬ್ವೆಯಲ್ಲಿ ಸತತ ಎರಡು ಅರ್ಧಶತಕ ಬಾರಿಸಿ ಮಿಂಚಿದರು. ಎಂದಿನಂತೆ ಬಿರುಸಿನ ಬ್ಯಾಟಿಂಗ್ ನಡೆಸಿದ ಸೂರ್ಯವಂಶಿ 49 ಎಸೆತಗಳಲ್ಲಿ 81 ರನ್ ಬಾರಿಸಿ ಔಟಾದರು. ಚೊಚ್ಚಲ ಶತಕ ಬಾರಿಸುವ ಅವಕಾಶ ಕಳೆದುಕೊಂಡರು. ಅವರ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ 4 ಸಿಕ್ಸರ್ ಮತ್ತು 8 ಬೌಂಡರಿ ದಾಖಲಾಯಿತು.
ಅಭಿಷೇಕ್ ಶರ್ಮ ಈ ಪಂದ್ಯದಲ್ಲಿಯೂ ವಿಫಲರಾದರು. 4 ಎಸೆತಗಳಿಂದ ಕೇವಲ 2 ರನ್‌ಗೆ ಆಟ ಮುಗಿಸಿದರು. ಶನಿವಾರದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಇಶಾನ್ ಕಿಶನ್ ಈ ಪಂದ್ಯದಲ್ಲಿ 29 ರನ್, ನಾಯಕ ಶ್ರೇಯಸ್ ಅಯ್ಯರ್ 27 ರನ್ ಗಳಿಸಿದರು. ರಿಂಕು ಸಿಂಗ್ 14 ಎಸೆತಗಳಿಂದ 25 ರನ್ ಗಳಿಸಿದರು. ಜಿಂಬಾಬ್ವೆ ಪರ ಬ್ರಾಡ್ ಇವಾನ್ಸ್ 2 ವಿಕೆಟ್ ಕಿತ್ತರು. ಸಿಕಂದರ್ ರಾಜಾ 40 ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿದರು.