ನಿಶಿನ್(ಜಪಾನ್), ಸೆ.22: ಏಷ್ಯನ್ ಗೇಮ್ಸ್ 2026ರ ಕ್ರೀಡಾಕೂಟದಲ್ಲಿ ಭಾರತ ಮೊದಲ ಚಿನ್ನದ ಪದಕ ಸಾಧನೆ ಮಾಡಿದೆ. ಮಹಿಳಾ ಕ್ರಿಕೆಟ್ ತಂಡ ಫೈನಲ್‌ನಲ್ಲಿ ಶ್ರೀಲಂಕಾವನ್ನು 147 ರನ್‌ಗಳಿಂದ ಮಣಿಸಿ ಚಿನ್ನದ ಪದಕ್ಕೆ ಕೊರಳೊಡ್ಡಿತು. ಕಳೆದ ಆವೃತ್ತಿಯಲ್ಲಿಯೂ ಭಾರತ ತಂಡ ಚಿನ್ನ ಗೆದ್ದಿತ್ತು.
ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬಿರುಸಿನ ಬ್ಯಾಟಿಂಗ್ ಮೂಲಕ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 216 ರನ್ ಬೇರಿಸಿತು. ಬೃಹತ್ ಮೊತ್ತ ಬೆನಟ್ಟಿದ ಶ್ರೀಲಂಕಾ ತಂಡ ಆರಂಭದಲ್ಲೇ ಕುಸಿತ ಕಂಡು 15.4 ಓವರ್‌ಗಳಲ್ಲಿ 69 ರನ್‌ಗೆ ಸರ್ವಪತನ ಕಂಡು ಬೆಳ್ಳಿಗೆ ತೃಪ್ತಿಪಟ್ಟಿತು.
ಚೇಸಿಂಗ್ ವೇಳೆ ಲಂಕಾಗೆ ಯಾವುದೇ ಹಂತದಲ್ಲಿಯೂ ಉತ್ತಮ ಜತೆಯಾಟದ ನೆರವು ಸಿಗಲಿಲ್ಲ. ನಾಯಕಿ ಚಾಮರಿ ಅಟಪಟ್ಟು(29) ಅವರದ್ದೇ ಹೆಚ್ಚಿನ ಗಳಿಕೆ. ಅರೆಕಾಲಿಕ ಸ್ಪಿನ್ನರ್ ಶಫಾಲಿ ವರ್ಮ(3ಕ್ಕೆ 2), ಅನುಭವಿಗಳಾದ ದೀಪ್ತಿ ಶರ್ಮಾ(6ಕ್ಕೆ 3) ಮತ್ತು ಶ್ರೀಚರಣಿ(13ಕ್ಕೆ 2) ಅವರ ಸ್ಪಿನ್ ಜಾದೂಗೆ ಮಂಕಾದ ಲಂಕಾ ಬ್ಯಾಟರ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಕನ್ನಡತಿ ಶ್ರೇಯಾಂಕ ಪಾಟೀಲ್ 9ಕ್ಕೆ 2 ವಿಕೆಟ್ ಕಿತ್ತರು.
ಮಂಧಾನ ಅರ್ಧಶತಕ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಭಾರತ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ ಸೊಗಸಾದ ಅರ್ಧಶತಕ ಬಾರಿಸಿದರು. ಬರೋಬ್ಬರಿ 7 ಸಿಕ್ಸರ್ ಮತ್ತು 5 ಬೌಂಡರಿ ಸಿಡಿಸಿ 79 ರನ್ ಗಳಿಸಿದರು. ಇದೇ ವೇಳೆ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11 ಸಾವಿರ ರನ್ ಮೈಲಿಗಲ್ಲು ತಲುಪಿದರು.
ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಶಫಾಲಿ ವರ್ಮಾ 48 (3 ಬೌಂಡರಿ, 3 ಸಿಕ್ಸರ್) ಗಳಿಸಿದರು. ಮಂಧಾನ ಮತ್ತು ಶಫಾಲಿ ಮೊದಲ ವಿಕೆಟ್‌ಗೆ 99 ರನ್ ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಅಡಿಪಾಯ ನಿರ್ಮಿಸಿದರು. ಇದೇ ವೇಳೆ ಮಹಿಳಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 4 ಸಾವಿರ ರನ್ ಜೊತೆಯಾಟ ನಡೆಸಿದ ವಿಶ್ವದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಏಷ್ಯನ್ ಗೇಮ್ಸ್; ಕ್ವಾರ್ಟರ್ ಫೈನಲ್ ತಲುಪಿದ ಭಾರತ ಮಹಿಳಾ ಟಿಟಿ ತಂಡ
ಕೆಲ ಕ್ರಮಾಂಕದಲ್ಲಿ ಸಿಡಿದು ನಿಂತ ರಿಚಾ ಘೋಷ್ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಮೂರು ಸಿಕ್ಸರ್ ಮತ್ತು ಆರು ಬೌಂಡರಿ ಬಾರಿಸಿದ ಅವರು 22 ಎಸೆತಗಳಿಂದ ಅಜೇಯ 49 ರನ್ ಗಳಿಸಿದರು. ನಾಯಕಿ ಹರ್ಮ್‌ಪ್ರೀತ್ ಕೌರ್ 19 ರನ್ ಕಲೆಹಾಕಿದರು. ಶ್ರೀಲಂಕಾ ಪರ ಸುಗಂಧಿಕಾ ಕುಮಾರಿ, ಕವಿಶಾ ದಿಲ್ಹಾರಿ ಮತ್ತು ಚಾಮುಡಿ ಪ್ರಬೋದ ತಲಾ ಒಂದು ವಿಕೆಟ್ ಪಡೆದರು.
ಕಂಚು ಗೆದ್ದ ಪಾಕಿಸ್ತಾನ
ದಿನದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಮಹಿಳಾ ತಂಡವನ್ನು 31 ರನ್‌ಗಳಿಂದ ಸೋಲಿಸುವ ಮೂಲಕ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡವು ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿತು. ಇದು ಪಾಕಿಸ್ತಾನದ ಮೂರನೇ ಏಷ್ಯನ್ ಕ್ರೀಡಾಕೂಟ ಪದಕವಾಗಿದೆ. ಇದಕ್ಕೂ ಮುನ್ನ 2010 ಮತ್ತು 2014ರಲ್ಲಿ ಎರಡು ಚಿನ್ನದ ಪದಕ ಗೆದ್ದುಕೊಂಡಿತ್ತು. ಕಾಕತಾಳೀಯವೆಂಬಂತೆ ಮೂರು ಪದಕಗಳನ್ನೂ ಬಾಂಗ್ಲಾದೇಶವನ್ನು ಸೋಲಿಸಿಯೇ ಗೆದ್ದಿರುವುದು. ಈ ಬಾರಿಯ ಏಷ್ಯನ್ ಕ್ರೀಡಾಕೂಟದಲ್ಲಿ ಪಾಕಿಸ್ತಾನ ಗೆದ್ದ ಮೊದಲ ಪದಕ ಇದಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 145 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 7 ವಿಕೆಟ್‌ಗೆ 114 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.