ನಗೋಯಾ, ಸೆ.27: ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತದ ಅಭಿಯಾನ ಅಂತ್ಯ ಕಂಡಿದೆ. ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಪಂದ್ಯದಲ್ಲಿ ಪಿ.ವಿ. ಸಿಂಧು ಮತ್ತು ಉನ್ನತಿ ಹೂಡಾ ಸೋತು ಹೊರಬಿದ್ದರು. ಇದರೊಂದಿಗೆ ಕಳೆದ 12 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಯಾವುದೇ ವೈಯಕ್ತಿಕ ಪದಕವನ್ನು ಗೆಲ್ಲಲು ವಿಫಲವಾಯಿತು.
ಭಾರತವು ವೈಯಕ್ತಿಕ ಪದಕವಿಲ್ಲದೆ ಹಿಂದಿರುಗಿದ ಕೊನೆಯ ಸಂದರ್ಭವು 2014ರಲ್ಲಿತ್ತು; ಆ ಅಭಿಯಾನದಲ್ಲಿ ಕಿಡಂಬಿ ಶ್ರೀಕಾಂತ್, ಪರುಪಳ್ಳಿ ಕಶ್ಯಪ್ ಮತ್ತು ಸೈನಾ ನೆಹ್ವಾಲ್ ಪ್ರಮುಖ ಆಟಗಾರರಾಗಿದ್ದರು.
ಪಿ.ವಿ. ಸಿಂಧು, ಉನ್ನತಿ ಹೂಡಾ ಮಾತ್ರವಲ್ಲದೆ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಮತ್ತು ಧ್ರುವ್ ಕಪಿಲಾ-ತನಿಶಾ ಕ್ರಾಸ್ಟೊ ತಮ್ಮ ಕ್ವಾರ್ಟರ್-ಫೈನಲ್ ಪಂದ್ಯಗಳಲ್ಲಿ ಸೋಲುವ ಮೂಲಕ ಸ್ಪರ್ಧೆಯಿಂದ ಹೊರಬಿದ್ದರು.
ಸಿಂಧು ಅವರು ಚೆನ್ ಯು ಫೀ ವಿರುದ್ಧ 21-11, 18-21, 10-21 ಅಂತರದಲ್ಲಿ ಸೋಲನ್ನಪ್ಪಿದರು. ವಿಶ್ವದ 4ನೇ ಶ್ರೇಯಾಂಕದ ಆಟಗಾರ್ತಿಯಾದ ಚೀನಾದ ಚೆನ್ ಯು ಫೀ, 1 ಗಂಟೆ 15 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ತಿರುಗೇಟು ನೀಡಿ ಭಾರತದ ಅಗ್ರಗಣ್ಯ ಸಿಂಗಲ್ಸ್ ಆಟಗಾರ್ತಿಯನ್ನು ಸೋಲಿಸಿದರು.
19 ವರ್ಷದ ಹೂಡಾ ಅವರು ಜಪಾನ್‌ನ ಮೂರು ಬಾರಿಯ ವಿಶ್ವ ಚಾಂಪಿಯನ್ ಅಕಾನೆ ಯಮಗುಚಿ ಅವರಿಗೆ ಕಠಿಣ ಪೈಪೋಟಿ ನೀಡಿದರಾದರೂ, ಅಂತಿಮವಾಗಿ 16-21, 21-14, 17-21 ಅಂತರದಲ್ಲಿ ಪರಾಭವಗೊಂಡರು.
ಕಳೆದ ತಿಂಗಳು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಕಂಚಿನ ಪದಕ ಗೆದ್ದಿದ್ದ ಮಹಿಳಾ ಜೋಡಿಯಾದ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್, ಮಲೇಷ್ಯಾದ ವಿಶ್ವದ 5ನೇ ಶ್ರೇಯಾಂಕಿತ ಜೋಡಿಯಾದ ಪರ್ಲಿ ಟಾನ್ ಮತ್ತು ಥಿನಾ ಮುರಳಿಧರನ್ ವಿರುದ್ಧ 18-21, 9-21 ಅಂತರದಲ್ಲಿ ಸೋಲನುಭವಿಸಿದರು.
15 ಸಾವಿರ ರನ್ ಸನಿಹ ವಿರಾಟ್ ಕೊಹ್ಲಿ; 59 ರನ್‌ಗಳ ಅಗತ್ಯ
ಮಿಶ್ರ ಡಬಲ್ಸ್ ವಿಭಾಗದಲ್ಲಿ, ಧ್ರುವ್ ಕಪಿಲಾ ಮತ್ತು ತನಿಷಾ ಕ್ರಾಸ್ಟೊ ಜೋಡಿಯು ವಿಶ್ವದ ಅಗ್ರ ಶ್ರೇಯಾಂಕಿತ ಚೀನೀ ಜೋಡಿಯಾದ ಫೆಂಗ್ ಯಾನ್ ಝೆ ಮತ್ತು ಹುವಾಂಗ್ ಡಾಂಗ್‌ಪಿಂಗ್ ಅವರಿಗೆ ಆಘಾತ ನೀಡುವ ಹಂತಕ್ಕೆ ಬಂದಿತ್ತಾದರೂ, ಅಂತಿಮವಾಗಿ 14-21, 21-18, 18-21 ಅಂತರದಲ್ಲಿ ಪರಾಭವಗೊಂಡಿತು.
ಈ ವರ್ಷ ಭಾರತೀಯ ತಂಡಕ್ಕೆ ಸಮಾಧಾನಕರ ಸಂಗತಿಯೆಂದರೆ, ಪುರುಷರ ತಂಡವು ಕಂಚಿನ ಪದಕವನ್ನು ಗೆದ್ದುಕೊಂಡಿದ್ದು. ಹಾಲಿ ಚಾಂಪಿಯನ್ ಚೀನಾ ವಿರುದ್ಧ ಸೆಪ್ಟೆಂಬರ್ 23 ರಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 1-3 ಅಂತರದಿಂದ ಸೋಲನುಭವಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತ್ತು.