ನಗೋಯಾ, ಸೆ. 25: ಶುಕ್ರವಾರ ನಾಗೊಯಾದಲ್ಲಿ ನಡೆದ ಏಷ್ಯನ್ ಗೇಮ್ಸ್ ಕಬಡ್ಡಿ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ಮಹಿಳಾ ಮತ್ತು ಪುರುಷರ ತಂಡಗಳು ಫೈನಲ್‌ಗೆ ಲಗ್ಗೆಯಿಟ್ಟಿತು. ಮಹಿಳಾ ತಂಡ ನೇಪಾಳದ ವಿರುದ್ಧ 48-24 ಅಂತರದ ಭರ್ಜರಿ ಗೆಲುವು ಸಾಧಿಸಿದರೆ, ಪುರುಷರ ತಂಡ ಥಾಯ್ಲೆಂಡ್ ತಂಡವನ್ನು 66-27 ಅಂತರದಿಂದ ಹಿಮ್ಮೆಟಿಸಿತು.
ನೇಪಾಳ ಈ ಭರ್ಜರಿ ಗೆಲುವು, ಪ್ರಸ್ತುತ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್‌ಗಳ ಅಜೇಯ ಓಟವನ್ನೂ ಕಾಯ್ದುಕೊಂಡಿತು. ಭಾರತವು ಮೊದಲಾರ್ಧದಲ್ಲಿ ನಾಲ್ಕು 'ಆಲ್-ಔಟ್' ಮತ್ತು ನಾಲ್ಕು ಬೋನಸ್ ಅಂಕಗಳನ್ನೊಳಗೊಂಡಂತೆ 31-17 ರ ಭಾರೀ ಮುನ್ನಡೆಯನ್ನು ಸಾಧಿಸಿತು.
ನೇಪಾಳವು ಭಾರತಕ್ಕೆ ಸಾಕಷ್ಟು ಸವಾಲು ಹಾಕಲು ಸಾಧ್ಯವಾಗಲಿಲ್ಲ ಮತ್ತು ದ್ವಿತೀಯಾರ್ಧದಲ್ಲಿ ಕೇವಲ ಏಳು ಅಂಕಗಳನ್ನು ಮಾತ್ರ ಕಲೆಹಾಕಲು ಸಾಧ್ಯವಾಯಿತು. ಭಾರತ ತಂಡ ಇದಕ್ಕೂ ಮುನ್ನ ಗುಂಪು ಹಂತಗಳಲ್ಲಿ ಇರಾನ್, ಬಾಂಗ್ಲಾದೇಶ ಮತ್ತು ಜಪಾನ್ ತಂಡಗಳನ್ನು ಸೋಲಿಸಿ ಸತತ ಜಯಗಳನ್ನು ದಾಖಲಿಸಿತ್ತು.
ಫಲ ನೀಡಿದ ಅಂತಿಮ ಕ್ಷಣದ ಬದಲಾವಣೆ; ಭಾರತಕ್ಕೆ ಶೂಟಿಂಗ್‌ನಲ್ಲಿ ಮೊದಲ ಚಿನ್ನ ಗೆದ್ದ ಕಮಲ್‌ಜೀತ್-ಸುರುಚಿ ಜೋಡಿ
ಮಹಿಳಾ ಕಬಡ್ಡಿಯು 2010ರಲ್ಲಿ ಮೊದಲ ಬಾರಿಗೆ ಏಷ್ಯನ್ ಕ್ರೀಡಾಕೂಟದ ಕ್ರೀಡೆಯಾಗಿ ಸೇರ್ಪಡೆಗೊಂಡಿತು ಮತ್ತು ಇಲ್ಲಿಯವರೆಗಿನ ಪ್ರತಿಯೊಂದು ಆವೃತ್ತಿಯಲ್ಲೂ ಭಾರತವು ತನ್ನ ಪ್ರಾಬಲ್ಯವನ್ನು ಮೆರೆದಿದೆ. ಇದೀಗ ನಾಲ್ಕನೇ ಬಾರಿಗೆ ಚಿನ್ನದ ಪದಕ ಗೆಲ್ಲುವ ಹಾದಿಯಲ್ಲಿ ಮುಂದುವರಿದಿದೆ.
ಪುರುಷರ ಕಬಡ್ಡಿ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್ ವಿರುದ್ಧ 66-27 ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ. ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತವು ಇರಾನ್ ಅಥವಾ ಚೈನೀಸ್ ತೈಪೆ ವಿರುದ್ಧ ತನ್ನ ಚಿನ್ನದ ಪದಕವನ್ನು ಉಳಿಸಿಕೊಳ್ಳಲು ಹೋರಾಡಲಿದೆ.
1990ರಿಂದ ಏಷ್ಯನ್ ಕ್ರೀಡಾಕೂಟದ (ಏಷ್ಯಾಡ್) ಪಟ್ಟಿಯಲ್ಲಿ ಪುರುಷರ ಕಬಡ್ಡಿ ಸೇರ್ಪಡೆಗೊಂಡಿದ್ದು, ಭಾರತ ಇಲ್ಲಿಯವರೆಗೆ ಎಂಟು ಬಾರಿ ಚಿನ್ನದ ಪದಕವನ್ನು ಗೆದ್ದುಕೊಂಡಿದೆ.
ಈ ಸ್ಪರ್ಧೆಯಲ್ಲಿ ಭಾರತವನ್ನು ಹೊರತುಪಡಿಸಿ ಚಿನ್ನದ ಪದಕ ಗೆದ್ದಿರುವ ಏಕೈಕ ದೇಶವೆಂದರೆ ಇರಾನ್. 2018ರ ಆವೃತ್ತಿಯಲ್ಲಿ ಅಗ್ರಸ್ಥಾನವನ್ನು ಪಡೆದಿತ್ತು. ಆ ಆವೃತ್ತಿಯಲ್ಲಿ ಭಾರತವು ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಗಿ ಬಂದಿತ್ತು.
ಸ್ಕ್ವಾಷ್: ವೀರ್ ಚೋತ್ರಾನಿಗೆ ಸೋಲು
ಪುರುಷರ ಸ್ಕ್ವಾಷ್ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ವೀರ್ ಚೋತ್ರಾನಿ ಅವರಿಗೆ ನಿರಾಶಾದಾಯಕ ಸೋಲು ಎದುರಾಯಿತು. ಅವರು 33 ನಿಮಿಷಗಳ ಹೋರಾಟದಲಲ್ಲಿ ಪಾಕಿಸ್ತಾನದ ಮುಹಮ್ಮದ್ ಇರ್ಫಾನ್ ವಿರುದ್ಧ 1-3 (11-6, 8-11, 3-11, 3-11) ಅಂತರದಲ್ಲಿ ಸೋಲನ್ನಪ್ಪಿದರು. ಶನಿವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಇರ್ಫಾನ್ ಮತ್ತೊಬ್ಬ ಭಾರತೀಯ ಆಟಗಾರ ಅಭಯ್ ಅವರನ್ನು ಎದುರಿಸಲಿದ್ದಾರೆ.
ಟೇಬಲ್ ಟೆನಿಸ್‌ನಲ್ಲಿ ನಿರಾಸೆ
ಟೇಬಲ್ ಟೆನಿಸ್‌ನಲ್ಲಿ ಭಾರತಕ್ಕೆ ಎರಡು ಹಿನ್ನಡೆಗಳಾಗಿವೆ. ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಶ್ರೀಜಾ ಅಕುಲಾ ಮತ್ತು ಮಾನವ್ ಠಕ್ಕರ್ ಕ್ರಮವಾಗಿ ಹೊರಬಿದ್ದಿದ್ದಾರೆ. ಶ್ರೀಜಾ ಅವರು ಉತ್ತರ ಕೊರಿಯಾದ ಪ್ಯೋನ್ ಸಾಂಗ್ ಗ್ಯೊಂಗ್ ವಿರುದ್ಧ ಸೋತರೆ, ಮಾನವ್ ಅವರು ಉತ್ತರ ಕೊರಿಯಾದ ಯು ಟೇ ರಿಯಾಂಗ್ ವಿರುದ್ಧ ಪರಾಜಿತಗೊಂಡರು.