ಕ್ರೈಸ್ಟ್ಚರ್ಚ್, ನ.26: ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯ ಶುಕ್ರವಾರ ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ನಲ್ಲಿ ನಡೆಯಲಿದೆ. ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ನಲ್ಲಿ ನಡೆದ ಇತ್ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಕೇವಲ 24 ವಿಕೆಟ್ಗಳು ಪತನಗೊಂಡವು ಮತ್ತು ಒಟ್ಟು 1,327 ರನ್ಗಳು ದಾಖಲಾದವು. ಈ ಪಂದ್ಯದ ಅಂತ್ಯದಲ್ಲಿ, ಬಳಸಲಾದ ಪಿಚ್ನ ಬಗ್ಗೆ ಅಷ್ಟೇನೂ ಸಕಾರಾತ್ಮಕವಲ್ಲದ ಅಭಿಪ್ರಾಯಗಳು ವ್ಯಕ್ತವಾದವು. ಎರಡನೇ ಟೆಸ್ಟ್ನಲ್ಲಿ ಹಿಂದಿನ ಪಂದ್ಯಕ್ಕಿಂತ ಪಿಚ್ ಸ್ವಲ್ಪ ಉತ್ತಮವಾಗಿ ವರ್ತಿಸುವ ಸಾಧ್ಯತೆಯಿದೆ.
ಭಾರತ ತಂಡವು ಬ್ಯಾಟಿಂಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ, ಆದರೆ ಬೌಲಿಂಗ್ ವಿಭಾಗ ತುಲನಾತ್ಮಕವಾಗಿ ದುರ್ಬಲವಾಗಿರುವುದು ತಂಡಕ್ಕೆ ಹಿನ್ನಡೆಯುಂಟುಮಾಡಿದೆ. ಮೊದಲ ಪಂದ್ಯದಲ್ಲಿ ನಾಲ್ವರು ವೇಗದ ಬೌಲರ್ಗಳನ್ನು ಒಳಗೊಂಡಿದ್ದ ಈ ವಿಭಾಗದಲ್ಲಿ ಜಸ್ಪ್ರೀತ್ ಬೂಮ್ರಾ ಅತ್ಯಂತ ಅನುಭವಿ ಆಟಗಾರರಾಗಿದ್ದರು. ಮೊಹಮ್ಮದ್ ಸಿರಾಜ್ ಅವರಿಗೆ ಆಡುವ ಅವಕಾಶ ಸಿಗದೆ, ಪಾನೀಯಗಳನ್ನು ಒದಗಿಸುವ (ಡ್ರಿಂಕ್ಸ್ ಕ್ಯಾರಿಯರ್) ಜವಾಬ್ದಾರಿಯನ್ನು ನಿರ್ವಹಿಸಬೇಕಾಯಿತು ಇದೀಗ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ, ಆಡುವ ಹನ್ನೊಂದರ ಬಳಗದಲ್ಲಿ ಕನಿಷ್ಠ ಒಂದೆರಡು ಬದಲಾವಣೆಗಳನ್ನು ನಿರೀಕ್ಷಿಸಬಹುದು.
2ನೇ ಟೆಸ್ಟ್ನಲ್ಲೂ ಸಿರಾಜ್ಗೆ ಸ್ಥಾನವಿಲ್ಲ; ಸಿದ್ಧತೆ ನಡೆಸುವಂತೆ ಬೌಲಿಂಗ್ ಕೋಚ್ ಸೂಚನೆ
ಪಂದ್ಯದಲ್ಲಿ ಭಾರತ, ವಾಷಿಂಗ್ಟನ್ ಸುಂದರ್ ಬದಲಿಗೆ ರವೀಂದ್ರ ಜಡೇಜಾಗೆ ಅವಕಾಶ ನೀಡಬಹುದು. ಹಾಗೆಯೆ ಪ್ರಸಿದ್ಧ್ ಕೃಷ್ಣ ಕೈಬಿಟ್ಟು ಅವರ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಅಥವಾ ಯುವ ವೇಗಿ ಗುರ್ನೂರ್ ಬ್ರಾರ್ರನ್ನು ಆಡುವ ಬಳಗಕ್ಕೆ ಸೇರಿಕೊಳ್ಳಬಹುದು.
ಪಿಚ್ ರಿಪೋರ್ಟ್
ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ ಮೈದಾನವು ಅತ್ಯುತ್ತಮ 'ಬೌನ್ಸ್' ಒದಗಿಸುವುದಕ್ಕೆ ಹೆಸರುವಾಸಿಯಾಗಿದೆ. ಇದರರ್ಥ, ಬ್ಯಾಟರ್ಗಳಿಗೆ ಇಲ್ಲಿ ರನ್ ಗಳಿಸುವುದು ಕಷ್ಟಕರವಾಗಬಹುದು ಮತ್ತು ಚೆಂಡು ಅನಿರೀಕ್ಷಿತವಾಗಿ ಮೇಲಕ್ಕೆ ಜಿಗಿಯುವುದರಿಂದ ಅವರು ಇಕ್ಕಟ್ಟಿಗೆ ಸಿಲುಕಬಹುದು. ಪಂದ್ಯದ ಮುನ್ನಾದಿನದಂದು ಆಕಾಶವು ಮೋಡ ಕವಿದಿದ್ದರೂ, 'ಅಕ್ಯೂವೆದರ್' (AccuWeather) ಮುನ್ಸೂಚನೆಯ ಪ್ರಕಾರ ಮಳೆಯಾಗುವ ಸಾಧ್ಯತೆಯಿಲ್ಲ. ಭಾರತವು ಇಲ್ಲಿ ಈ ಹಿಂದೆ ಫೆಬ್ರವರಿ 2020ರಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದು, ಅದರಲ್ಲಿ ಹೀನಾಯ ಸೋಲನ್ನು ಅನುಭವಿಸಿತ್ತು
ಸಂಭಾವ್ಯ ಆಡುವ ಬಳಗ
ಭಾರತ: ಯಶಸ್ವಿ ಜೈಸ್ವಾಲ್, ಕೆ.ಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿ.ಕೀ.), ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್/ರವೀಂದ್ರ ಜಡೇಜಾ, ಗುರ್ನೂರ್ ಬ್ರಾರ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.
ನ್ಯೂಜಿಲೆಂಡ್: ಟಾಮ್ ಲ್ಯಾಥಮ್ (ನಾಯಕ), ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ನಾಥನ್ ಸ್ಮಿತ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಜಾಕೋಬ್ ಡಫಿ.