ವೆಲ್ಲಿಂಗ್ಟನ್, ನ.17: ಪ್ರವಾಸಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಗುರುವಾರದಿಂದ (ನವೆಂಬರ್ 19) ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ನಲ್ಲಿ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ರೇಸ್ನಲ್ಲಿ ಉಳಿಯಬೇಕಿದ್ದರೆ, ಶುಭಮನ್ ಗಿಲ್ ನೇತೃತ್ವದ ಭಾರತ ತಂಡಕ್ಕೆ ಈ ಸರಣಿ ಗೆಲುವು ಅತ್ಯಗತ್ಯ.
ನ್ಯೂಜಿಲೆಂಡ್ನಲ್ಲಿ ಆಡಿದ ಕಳೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಭಾರತ ಸೋಲನ್ನು ಅನುಭವಿಸಿದೆ. ಅಷ್ಟೇ ಅಲ್ಲದೆ, ಭಾರತದಲ್ಲಿ ಈ ಎರಡೂ ತಂಡಗಳ ನಡುವೆ ನಡೆದ ಹಿಂದಿನ ಟೆಸ್ಟ್ ಸರಣಿಯಲ್ಲಿಯೂ (ಅಕ್ಟೋಬರ್-ನವೆಂಬರ್ 2024) ಭಾರತವು ಆಡಿದ ಮೂರೂ ಪಂದ್ಯಗಳಲ್ಲಿ ಸೋಲು ಕಂಡಿತ್ತು. 21ನೇ ಶತಮಾನದಲ್ಲಿ, ನ್ಯೂಜಿಲೆಂಡ್ನಲ್ಲಿ ಭಾರತಕ್ಕೆ ಕೇವಲ ಒಂದು ಟೆಸ್ಟ್ ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿದೆ.
ʼಬೇಸಿನ್ ರಿಸರ್ವ್' ಮೈದಾನದಲ್ಲಿ ಭಾರತದ ಸಾಧನೆ
ಭಾರತವು ಇಲ್ಲಿಯವರೆಗೆ 'ಬೇಸಿನ್ ರಿಸರ್ವ್'ನಲ್ಲಿ ಎಂಟು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಕೇವಲ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆ ಗೆಲುವು ಕೂಡ ಬಹಳ ಹಿಂದೆ ದಾಖಲಾಗಿತ್ತು. 1968ರಲ್ಲಿ ಮನ್ಸೂರ್ ಅಲಿ ಖಾನ್ ಅವರ ನಾಯಕತ್ವದಲ್ಲಿ ಲಭಿಸಿತ್ತು. ನ್ಯೂಜಿಲೆಂಡ್ ನೆಲದಲ್ಲಿ ಭಾರತ ಇಲ್ಲಿಯವರೆಗೆ 10 ಟೆಸ್ಟ್ ಪಂದ್ಯಗಳನ್ನು ಸೋತಿದೆ. ಈ 10 ಸೋಲುಗಳ ಪೈಕಿ ಐದು ಪಂದ್ಯಗಳು 'ಬೇಸಿನ್ ರಿಸರ್ವ್'ನಲ್ಲೇ ಸಂಭವಿಸಿವೆ. 8 ಟೆಸ್ಟ್ಗಳಲ್ಲಿ 1 ಗೆಲುವು, 5 ಸೋಲುಗಳು ಮತ್ತು 2 ಡ್ರಾಗಳು ದಾಖಲಾಗಿದೆ.
ಬೇಸಿನ್ ರಿಸರ್ವ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರು
ಗರಿಷ್ಠ ಮೊತ್ತ: ಫೆಬ್ರವರಿ 2014ರಲ್ಲಿ 102.4 ಓವರ್ಗಳಲ್ಲಿ 438/10.
ಕನಿಷ್ಠ ಮೊತ್ತ: ಫೆಬ್ರವರಿ 1976ರಲ್ಲಿ 26.3 ಓವರ್ಗಳಲ್ಲಿ (ಪ್ರತಿ ಓವರ್ಗೆ 8 ಎಸೆತಗಳು) 81/10.
ಅತಿದೊಡ್ಡ ಗೆಲುವು: ಫೆಬ್ರವರಿ-ಮಾರ್ಚ್ 1968ರಲ್ಲಿ 8 ವಿಕೆಟ್ಗಳ ಅಂತರದ ಗೆಲುವು (ಗುರಿ: 59).
ಅತಿ ಹೆಚ್ಚು ರನ್ಗಳು: ಸಚಿನ್ ತೆಂಡೂಲ್ಕರ್ ಮೂರು ಪಂದ್ಯಗಳ ಆರು ಇನ್ನಿಂಗ್ಸ್ಗಳಲ್ಲಿ ಒಟ್ಟು 290 ರನ್ಗಳು.
ಗರಿಷ್ಠ ವೈಯಕ್ತಿಕ ಮೊತ್ತ: ಏಪ್ರಿಲ್ 2009ರಲ್ಲಿ ಗೌತಮ್ ಗಂಭೀರ್ 257 ಎಸೆತಗಳಲ್ಲಿ 167 ರನ್ಗಳು.
ಅತಿ ಹೆಚ್ಚು ಶತಕಗಳು: ಅಜಿತ್ ವಾಡೇಕರ್, ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ತಲಾ 1 ಶತಕ ಗಳಿಸಿದ್ದಾರೆ.
ಗುರ್ನೂರ್ ಪದಾರ್ಪಣೆ, ನಿತೀಶ್ಗೆ ಸ್ಥಾನವಿಲ್ಲ; ನ್ಯೂಜಿಲೆಂಡ್ ಮೊದಲ ಟೆಸ್ಟ್ಗೆ ಭಾರತದ ಸಂಭಾವ್ಯ ಆಡುವ ಬಳಗ
ಅತಿ ಹೆಚ್ಚು ಅರ್ಧಶತಕಗಳು: ಎಂ.ಎಸ್. ಧೋನಿ ಅವರು ಎರಡು ಟೆಸ್ಟ್ ಪಂದ್ಯಗಳ ಮೂರು ಇನ್ನಿಂಗ್ಸ್ಗಳಲ್ಲಿ ಒಟ್ಟು 3 ಅರ್ಧಶತಕಗಳನ್ನು ಗಳಿಸಿದ್ದಾರೆ.
ಅತಿ ಹೆಚ್ಚು ಬಾರಿ ಸೊನ್ನೆಗೆ ಔಟ್ (ಡಕ್ಸ್): ಭಾಗವತ್ ಚಂದ್ರಶೇಖರ್, ವಿ.ವಿ.ಎಸ್. ಲಕ್ಷ್ಮಣ್ ಮತ್ತು ಹರ್ಭಜನ್ ಸಿಂಗ್ ತಲಾ 2 ಬಾರಿ ಸೊನ್ನೆಗೆ ಔಟ್ ಆಗಿದ್ದಾರೆ.
ಅತಿ ಹೆಚ್ಚು ಸಿಕ್ಸರ್ಗಳು: ಸಚಿನ್ ತೆಂಡೂಲ್ಕರ್ 3 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ಅತಿ ಹೆಚ್ಚು ವಿಕೆಟ್ಗಳು: ಮೂರು ಟೆಸ್ಟ್ ಪಂದ್ಯಗಳ ಆರು ಇನ್ನಿಂಗ್ಸ್ಗಳಲ್ಲಿ ಜಹೀರ್ ಖಾನ್ ಒಟ್ಟು 17 ವಿಕೆಟ್ಗಳನ್ನು ಪಡೆದಿದ್ದಾರೆ.
ಅತ್ಯುತ್ತಮ ಬೌಲಿಂಗ್ ಪ್ರದರ್ಶನ (ಒಂದು ಇನ್ನಿಂಗ್ಸ್): ಬಾಪು ನಾಡ್ಕರ್ಣಿ ಅವರು 30 ಓವರ್ಗಳಲ್ಲಿ 43 ರನ್ ನೀಡಿ 6 ವಿಕೆಟ್ಗಳನ್ನು ಪಡೆದಿದ್ದಾರೆ (ಫೆಬ್ರವರಿ-ಮಾರ್ಚ್ 1968).
ಅತ್ಯುತ್ತಮ ಬೌಲಿಂಗ್ ಪ್ರದರ್ಶನ (ಒಂದು ಪಂದ್ಯ): ಎರಾಪಳ್ಳಿ ಪ್ರಸನ್ನ ಅವರು 38.4 ಓವರ್ಗಳಲ್ಲಿ 88 ರನ್ ನೀಡಿ 8 ವಿಕೆಟ್ಗಳನ್ನು ಪಡೆದಿದ್ದಾರೆ (ಫೆಬ್ರವರಿ-ಮಾರ್ಚ್ 1968).
ಅತಿ ಹೆಚ್ಚು ಬಾರಿ ಐದು ವಿಕೆಟ್ಗಳ ಸಾಧನೆ: ಜಹೀರ್ ಖಾನ್ ಆರು ಇನ್ನಿಂಗ್ಸ್ಗಳಲ್ಲಿ 3 ಬಾರಿ ಐದು ವಿಕೆಟ್ಗಳನ್ನು ಪಡೆದಿದ್ದಾರೆ.