ವೆಲ್ಲಿಂಗ್ಟನ್, ನ.16: ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಭಾರತದ ಪ್ರವಾಸವು ಈಗ ಟೆಸ್ಟ್ ಕ್ರಿಕೆಟ್‌ನತ್ತ ಸಾಗಲಿದೆ. ಗುರುವಾರದಿಂದ (ನವೆಂಬರ್ 19) ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಸರಣಿಯ ಮೊದಲ ಪಂದ್ಯವು ವೆಲ್ಲಿಂಗ್ಟನ್‌ನ 'ಬೇಸಿನ್ ರಿಸರ್ವ್'ನಲ್ಲಿ ನಡೆಯಲಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2025-27ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆತಿಥೇಯ ತಂಡವು, ತವರಿನಲ್ಲಿ ಹಾಗೂ ಹೊರಗಿನ ಅಂಗಳದಲ್ಲಿ ಭಾರತದ ವಿರುದ್ಧ ಆಡಿದ ತಮ್ಮ ಕಳೆದ ಮೂರೂ ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈಗ ತಮ್ಮ ಈ ಗೆಲುವಿನ ಓಟವನ್ನು ಐದು ಪಂದ್ಯಗಳವರೆಗೆ ವಿಸ್ತರಿಸಲು ತಂಡವು ಉತ್ಸುಕವಾಗಿದೆ. ಜತೆಗೆ ಟಿ20 ಮತ್ತು ಏಕದಿನ ಸರಣಿ ಸೋಲಿಗೆ ಸೇಡು ತೀರಿಸುವ ತವಕದಲ್ಲಿದೆ. ಸರಣಿಗೂ ಮುನ್ನ ನ್ಯೂಜಿಲೆಂಡ್‌ನಲ್ಲಿ ಭಾರತದ ಟೆಸ್ಟ್ ದಾಖಲೆ ಹೇಗಿದೆ ಎಂಬ ವರದಿ ಇಲ್ಲಿದೆ.
1968ರಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಂಡಾಗಿನಿಂದ, ಭಾರತವು ಅಲ್ಲಿ ಇದುವರೆಗೆ 10 ಟೆಸ್ಟ್ ಸರಣಿಗಳನ್ನು ಆಡಿದ್ದು, ಅವುಗಳಲ್ಲಿ ಎರಡನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ನ್ಯೂಜಿಲೆಂಡ್‌ನಲ್ಲಿ ನಡೆದ ತಮ್ಮ ಮೊಟ್ಟಮೊದಲ ಟೆಸ್ಟ್ ಪ್ರವಾಸದಲ್ಲಿ, ಮನ್ಸೂರ್ ಅಲಿ ಖಾನ್ ಪಟೌಡಿ ಅವರ ನಾಯಕತ್ವದಲ್ಲಿ ಭಾರತವು ನಾಲ್ಕು ಪಂದ್ಯಗಳ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿತ್ತು. ಆ ನಂತರ, 2009ರಲ್ಲಿ ಎಂ.ಎಸ್. ಧೋನಿ ಅವರ ನಾಯಕತ್ವದಲ್ಲಿ ಸರಣಿ ಗೆಲ್ಲುವವರೆಗೆ ಭಾರತವು ಮತ್ತೆ 41 ವರ್ಷಗಳ ಕಾಲ ಕಾಯಬೇಕಾಯಿತು. ಈ ಅವಧಿಯಲ್ಲಿ, ನ್ಯೂಜಿಲೆಂಡ್‌ನಲ್ಲಿ ನಡೆದ ಕೆಲವು ಟೆಸ್ಟ್ ಸರಣಿಗಳು ಡ್ರಾನಲ್ಲಿ ಕೊನೆಗೊಂಡರೆ, ಇತ್ತೀಚಿನ ಎರಡು ಪ್ರವಾಸಗಳು ಸೇರಿದಂತೆ ಒಟ್ಟು ಆರು ಬಾರಿ ನ್ಯೂಜಿಲೆಂಡ್ ತಂಡವು ಜಯ ಸಾಧಿಸಿತು.
ಕೇವಲ ಐದು ಗೆಲುವು
ಕಳೆದ 58 ವರ್ಷಗಳಲ್ಲಿ ಭಾರತವು ನ್ಯೂಜಿಲೆಂಡ್‌ನಲ್ಲಿ ಇಲ್ಲಿಯವರೆಗೆ 25 ಟೆಸ್ಟ್ ಪಂದ್ಯಗಳನ್ನು ಆಡಿದೆ, ಆದರೆ ಅದರಲ್ಲಿ ಕೇವಲ ಐದರಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿದೆ. ಈ ಪೈಕಿ ಮೂರು ಗೆಲುವುಗಳು 1968ರಲ್ಲಿ ನಡೆದ ಅವರ ಮೊದಲ ಪ್ರವಾಸದಲ್ಲೇ ಬಂದಿದ್ದವು. ಇದೀಗ 17 ವರ್ಷಗಳ ಬಳಿಕ ನ್ಯೂಜಿಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆಲುವಿನ ತವಕದಲ್ಲಿದೆ.