ಬೆಂಗಳೂರು, ನ.24: ಲೀಡ್ಸ್ 2025, ಕೊಲೊಂಬೊ(2026) ಮತ್ತು ವೆಲ್ಲಿಂಗ್ಟನ್(2026). ಕಳೆದ 18 ತಿಂಗಳುಗಳಲ್ಲಿ ಮೂರು ಬಾರಿ, ಭಾರತವು ವಿದೇಶಿ ನೆಲದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯವೊಂದರ ಐದನೇ ದಿನವನ್ನು ಪ್ರವೇಶಿಸಿತ್ತು. ಆ ಸಂದರ್ಭಗಳಲ್ಲಿ ತಂಡವು ಅಪರೂಪದ ಗೆಲುವನ್ನು ಎದುರು ನೋಡುತ್ತಿತ್ತು. ಆದರೆ, ಈ ಮೂರೂ ಸಂದರ್ಭಗಳಲ್ಲಿ ಭಾರತವು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಪರಿಣಾಮವಾಗಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ (WTC) ಗೆಲುವಿಗಾಗಿ ಲಭ್ಯವಿದ್ದ 12 ಅಂಕಗಳನ್ನು ಪಡೆಯಲು ತಂಡಕ್ಕೆ ಸಾಧ್ಯವಾಗಲಿಲ್ಲ.
ಲೀಡ್ಸ್ನಲ್ಲಿ ಬೆನ್ ಡಕೆಟ್ ಭಾರತದ ವಿರುದ್ಧ ಅಬ್ಬರಿಸಿದ ಪರಿಣಾಮ ಭಾರತವು ನಿರಾಶಾದಾಯಕ ಸೋಲನ್ನು ಅನುಭವಿಸಿತ್ತು. ಅದೇ ರೀತಿ, ಕೊಲಂಬೊ ಮತ್ತು ವೆಲ್ಲಿಂಗ್ಟನ್ನಲ್ಲಿ ನಡೆದ ಪಂದ್ಯಗಳ ಅಂತಿಮ ದಿನದಂದು, ಎದುರಾಳಿ ತಂಡದ ಬ್ಯಾಟರ್ಗಳು ಇಡೀ ದಿನ ಬ್ಯಾಟಿಂಗ್ ಮಾಡುವ ಮೂಲಕ ಭಾರತಕ್ಕೆ ಗೆಲುವು ಸಿಗದಂತೆ ತಡೆದರು.
ಇದೀಗ ನವೆಂಬರ್ 27 ರಿಂದ ಡಿಸೆಂಬರ್ 1, ರವರೆಗೆ ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ತನ್ನ ಆಡುವ ಬಳಗದಲ್ಲಿ ಬದಲಾವಣೆ ಮಾಡುವ ಅನಿವಾರ್ಯತೆ ಇದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಈ ಪಂದ್ಯ ಮಹತ್ವದ ಪಾತ್ರ ವಹಿಸಲಿದೆ. ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿರುವ ಭಾರತಕ್ಕೆ, ಫೈನಲ್ ತಲುಪುವ ಸ್ಪರ್ಧೆಯಲ್ಲಿ ಉಳಿಯಲು ಗೆಲುವುಗಳ ಅಗತ್ಯವಿದೆ.
181 ರನ್ ಸಿಡಿಸಿ ಟಿ20 ಕ್ರಿಕೆಟ್ನಲ್ಲಿ ನೂತನ ದಾಖಲೆ ಬರೆದ ಪ್ರಿಯಾಂಶ್ ಆರ್ಯ
ಮೊದಲ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ತಂಡದಿಂದ ಹೊರಗಿಟ್ಟ ವಿಷಯವು ಪಂದ್ಯ ಮುಗಿದ ನಂತರವೂ ಚರ್ಚೆಯ ವಿಷಯವಾಗಿಯೇ ಉಳಿಯಿತು. ಅನುಭವಿ ರವೀಂದ್ರ ಜಡೇಜರನ್ನು ಕೈಬಿಟ್ಟದ್ದು ಕೂಡ ಟೀಕೆಗೆ ಗುರಿಯಾಗಿತ್ತು. ಪ್ರಸಿದ್ಧ್ ಕೃಷ್ಣ ಕೂಡ ಮೊದಲ ಇನಿಂಗ್ಸ್ನಲ್ಲಿ ದುಬಾರಿಯಾಗಿದ್ದರು. ಹೀಗಾಗಿ ಎರಡನೇ ಪಂದ್ಯದಕ್ಕೆ ಭಾರತ ತನ್ನ ಆಡುವ ಬಳಗದಲ್ಲಿ ಮೂರು ಬದಲಾವಣೆ ಮಾಡುವ ಸಾಧ್ಯತೆಯಿದೆ.
ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ, ವಾಷಿಂಗ್ಟನ್ ಸುಂದರ್ ಬದಲಿಗೆ ರವೀಂದ್ರ ಜಡೇಜಾಗೆ ಅವಕಾಶ ನೀಡಬಹುದು. ಹಾಗೆಯೆ ಪ್ರಸಿದ್ಧ್ ಕೃಷ್ಣ ಕೈಬಿಟ್ಟು ಅವರ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಅಥವಾ ಯುವ ವೇಗಿ ಗುರ್ನೂರ್ ಬ್ರಾರ್ರನ್ನು ಆಡುವ ಬಳಗಕ್ಕೆ ಸೇರಿಕೊಳ್ಳಬಹುದು.
ಡಬ್ಲ್ಯುಟಿಸಿ ಹಾದಿ ಕಠಿಣ
ವೆಲ್ಲಿಂಗ್ಟನ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿರುವುದು ಡಬ್ಲ್ಯುಟಿಸಿ (WTC) ಅಂಕಪಟ್ಟಿಯ ಮೇಲೆ ಗಮನಾರ್ಹ ಪರಿಣಾಮ ಬೀರಿದ್ದು, ನ್ಯೂಜಿಲೆಂಡ್ ಮತ್ತು ಭಾರತ ಎರಡರ ಭವಿಷ್ಯದ ಮೇಲೂ ಪ್ರಭಾವ ಬೀರಿದೆ. ಭಾರತವು ಈಗ ತನ್ನ ಉಳಿದ ಆರು ಟೆಸ್ಟ್ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದೆ. ಕ್ರೈಸ್ಟ್ಚರ್ಚ್ನಲ್ಲಿನ ಗೆಲುವು ಮಾತ್ರ WTC ಫೈನಲ್ಗೆ ತಲುಪುವ ಭಾರತದ ಭರವಸೆಯನ್ನು ಜೀವಂತವಾಗಿರಿಸುತ್ತದೆ. ಸೋತರೆ ಫೈನಲ್ ತಲುಪುವುದು ದೂರದ ಕನಸಾಗಿಯೇ ಉಳಿಯುತ್ತದೆ.