ಕೋಲ್ಕತಾ, ಎ.20: ಈಡನ್ ಗಾರ್ಡನ್ ಕ್ರಿಕೆಟ್ ಮೈದಾನದಲ್ಲಿ ಸೋಮವಾರ ನಡೆದಿದ್ದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್(KKR vs RR) ವಿರುದ್ಧ ಗೆಲ್ಲುವ ಮೂಲಕ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಟೂರ್ನಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿಕೊಂಡಿತು. ಪಂದ್ಯದ ಸೋಲಿನ ಬಳಿಕ ರಾಜಸ್ಥಾನ ತಂಡದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಕಣ್ಣೀರು ಹಾಕಿರುವ ವಿಡಿಯೊವೊಂದು ಹರಿದಾಡುತ್ತಿದೆ.
ಪಂದ್ಯ ಸೋತ ಬಳಿಕ ಮೈದಾನದ ಹೊರಗೆ ಏಕಾಂಗಿಯಾಗಿ ಕುಳಿತಿದ್ದ ವೈಭವ್ ಸೂರ್ಯವಂಶಿ ಕಣ್ಣೀರು ಹಾಕಿದ್ದಾರೆ. ಕೂಡಲೆ ಓಡಿ ಬಂದ ಕೆಕೆಆರ್ ತಂಡದ ರಮಣ್‌ದೀಪ್ ಅವರನ್ನು ಸಂತೈಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವಿಡಿಯೊ ಕಂಡ ನೆಟ್ಟಿಗರು ವಯಸ್ಸು ಚಿಕ್ಕದಾದರೂ ಕ್ರಿಕೆಟ್ ಮೇಲಿನ ಅವರ ಬದ್ಧತೆ ದೊಡ್ಡದು ಎಂದು ಹೇಳುತ್ತಿದ್ದಾರೆ.
ಬಾರಿಯ ಐಪಿಎಲ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವ ವೈಭವ್ ಸೂರ್ಯವಂಶಿ 246 ರನ್ ಬಾರಿಸಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ 81 ರನ್‌ಗಳ ಉತ್ತಮ ಆರಂಭ ನೀಡಿದರು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದಾಗಿ ರಾಜಸ್ಥಾನ ತಂಡವು ಕೇವಲ 155 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಸತತ 5 ಪಂದ್ಯಗಳನ್ನು ಸೋತಿದ್ದ ಕೋಲ್ಕತಾ ತಂಡ ಕೊನೆಗೂ 7ನೇ ಪ್ರಯತ್ನದಲ್ಲಿ ಗೆಲುವಿನ ಖಾತೆ ತೆರೆಯಿತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 155 ರನ್ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನಟ್ಟಿದ ಕೆಕೆಆರ್ ನಾಟಕೀಯ ಕುಸಿತದ ಹೊರತಾಗಿಯೂ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 161 ರನ್ ಬಾರಿಸಿ ಗೆಲವು ದಾಖಲಿಸಿತು.
ಪಂದ್ಯ ಗೆದ್ದರೂ ಅನಪೇಕ್ಷಿತ ದಾಖಲೆ ಬರೆದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ
ಚೇಸಿಂಗ್ ವೇಳೆ ರಿಂಕು ಅಜೇಯ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 34 ಎಸೆತಗಳಿಂದ 53 ರನ್ ಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಅನುಕುಲ್ ರಾಯ್ ಅಜೇಯ 29 ರನ್ ಬಾರಿಸಿದರು. ಈ ಜೋಡಿ ಮುರಿಯದ 7ನೇ ವಿಕೆಟ್‌ಗೆ 76 ರನ್‌ಗಳ ಜತೆಯಾಟ ನಡೆಸಿತು. ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಕ್ಯಾಮರೂನ್ ಗ್ರೀನ್ 27, ಪೋವೆಲ್ 23 ರನ್ ಗಳಿಸಿದರು. ರಾಜಸ್ಥಾನ್ ಪರ ರವೀಂದ್ರ ಜಡೇಜಾ 8 ರನ್‌ಗೆ 2 ವಿಕೆಟ್ ಕಿತ್ತರು. ಕೆಕೆಆರ್ ಪರ ವರುಣ್ ಚಕ್ರವರ್ತಿ 3 ವಿಕೆಟ್.