ಅಹಮದಾಬಾದ್, ಜೂ.1: ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಐಪಿಎಲ್(IPL 2026 Final) ಪ್ರಶಸ್ತಿಯನ್ನು ಗೆದ್ದುಕೊಂಡಿತು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಂತರ ಸತತ ಆವೃತ್ತಿಗಳಲ್ಲಿ ಐಪಿಎಲ್ ಗೆದ್ದ ಮೂರನೇ ತಂಡ ಎನಿಸಿತು. ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ವೈಭವ್ ಸೂರ್ಯವಂಶಿ(Vaibhav Sooryavanshi) ಐದು(IPL 2026 Awards) ಪ್ರಶಸ್ತಿಗಳನ್ನು ಗೆದ್ದರು. ಉದಯೋನ್ಮುಖ ಆಟಗಾರ, ಅತ್ಯಂತ ಮೌಲ್ಯಯುತ ಆಟಗಾರ, ಆರೆಂಜ್ ಕ್ಯಾಪ್, ಮತ್ತು ಅತ್ಯುತ್ತಮ ಸ್ಟ್ರೈಕ್ ರೇಟ್ ಮತ್ತು ಹೆಚ್ಚಿನ ಸಿಕ್ಸರ್‌ಗಳಿಗಾಗಿ ಪ್ರಶಸ್ತಿಗಳು.
ಅದ್ಭುತ ಸ್ಟ್ರೈಕ್ ರೇಟ್ನೊಂದಿಗೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರನಿಗೆ ನೀಡಲಾಗುವ ಟಾಟಾ ಸಫಾರಿ ಕಾರು ಈ ಬಾರಿ ವೈಭವ್ ಸೂರ್ಯವಂಶಿ ಪಾಲಾಯಿತು. ಆದರೆ ಅವರಿಗೆ ಈ ಕಾರು ಚಲಾಯಿಸಲು ಇನ್ನೂ ಮೂರು ವರ್ಷಗಳ ತನಕ ಕಾಯಬೇಕು. ಹೌದು ಈಗ ಸೂರ್ಯವಂಶಿಗೆ 15 ವರ್ಷ. ನಿಮಯ ಪರವಾಗಿ ಭಾರತದಲ್ಲಿ ವಾಹನ ಚಲಾಯಿಸಲು 18 ವರ್ಷ ಮೇಲ್ಪಟ್ಟಿರಬೇಕು. ಇದಕ್ಕೂ ಮುನ್ನ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ ಕಾನೂನು ಸಂಕಷ್ಟ ಎದುರಿಸಬೇಕಾಗುತ್ತದೆ.
ಫೈನಲ್ ಬಳಿಕ ಅಪಾಯದಿಂದ ಪಾರಾದ ಟೈಟಾನ್ಸ್ ಆಟಗಾರರು; ಹೊತ್ತಿ ಉರಿದ ಬಸ್
ರಾಜಸ್ಥಾನ ರಾಯಲ್ಸ್ ತಂಡವು ಕ್ವಾಲಿಫೈಯರ್–2ರಲ್ಲಿ ಹೊರನಡೆದರೂ ಟೂರ್ನಿಯುದ್ಧಕ್ಕೂ ಸೂರ್ಯಂಶಿ ಅಮೋಘ ಪ್ರದರ್ಶನ ನೀಡಿದ್ದರು. ಅವರು ನೀಡಿದ ಅದ್ಭುತ ಪ್ರದರ್ಶನಕ್ಕಾಗಿ, ಅವರಿಗೆ ‘ಸರಣಿಶ್ರೇಷ್ಠ ಆಟಗಾರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಡಿದ 16 ಇನಿಂಗ್ಸ್‌ಗಳಿಂದ 1 ಶತಕ ಮತ್ತು 5 ಅರ್ಧಶತಕ ಸಹಿತ, 49.50 ಸರಾಸರಿಯಲ್ಲಿ 776 ರನ್ ಗಳಿಸಿದ್ದಾರೆ. ಆ ಮೂಲಕ, ಐಪಿಎಲ್‌ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆಟಗಾರನಿಗೆ ನೀಡುವ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡರು.
ಐಪಿಎಲ್ ಸೀಸನ್ ಒಂದರಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ಆಟಗಾರನಿಗೆ ನೀಡುವ ‘ಏಂಜಲ್ ಒನ್ ಸೂಪರ್ ಸಿಕ್ಸರ್ ಆಫ್ ದ ಸೀಸನ್’ ಪ್ರಶಸ್ತಿಯನ್ನು ಸೂರ್ಯವಂಶಿ ಅವರು ತಮ್ಮದಾಗಿಸಿಕೊಂಡಿದ್ದಾರೆ. ಅವರು, 16 ಇನಿಂಗ್ಸ್‌ಗಳಲ್ಲಿ 72 ಸಿಕ್ಸರ್ ಸಿಡಿಸಿದ್ದಾರೆ. ಫೈನಲ್ ಪಂದ್ಯಕ್ಕೂ ಹಾಜರಾಗಿದ್ದ ಸೂರ್ಯವಂಶಿ ಪಂದ್ಯದ ಪ್ರಮುಖ ಹೈಲೆಟ್ಸ್‌ಗಳಲ್ಲಿ ಒಂದಾಗಿದ್ದರು. ಐಸಿಸಿ ಅಧ್ಯಕ್ಷ ಜಯ್ ಶಾ ಜತೆ ವಿಐಪಿ ಸೀಟ್‌ನಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸಿದರು.
ಫೈನಲ್ ಬಳಿಕ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಅವರು ಸೂರ್ಯವಂಶಿಯಗೆ ಅತ್ಯಮೂಲ್ಯ ಸಲಹೆಯನ್ನು ನೀಡಿದರು. ಇದರ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೈನಲ್ ಪಂದ್ಯದ ಬಗ್ಗೆ ಹೇಳುವುದಾದರೆ, ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 155 ರನ್ ಗಳಿಸಿತು. ಗೆಲುವಿಗೆ 156 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡ 18 ಓವರ್‌ಗಳಲ್ಲಿ 5 ವಿಕೆಟ್‌ಗೆ 161 ರನ್ ಗಳಿಸಿ ವಿಜಯಶಾಲಿಯಾಯಿತು. ಆರ್‌ಸಿಬಿ ಪವರ್-ಪ್ಲೇನಲ್ಲೇ ಪಂದ್ಯವನ್ನು ತನ್ನತ್ತ ವಾಲಿಸಿಕೊಂಡಿತು. ವೆಂಕಟೇಶ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ, ಗುಜರಾತ್ ಬೌಲಿಂಗ್ ದಾಳಿಯನ್ನು ಪುಡಿಗುಟ್ಟಿದರು ಅಂತಿಮವಾಗಿ 2 ಓವರ್ ಬಾಕಿ ಇರುವಂತೆಯೇ ಆರ್‌ಸಿಬಿ ಗುರಿ ತಲುಪಿ 5 ವಿಕೆಟ್ ಅಂತರದ ಗೆಲುವು ಸಾಧಿಸಿತು.