ಹೈದರಾಬಾದ್, ಎ.19: ಬ್ಲ್ಯಾಕ್ ಮ್ಯಾಜಿಕ್ ಏನಾದರೂ ಇದೆಯೇ? ಬ್ಲ್ಯಾಕ್ ಮ್ಯಾಜಿಕ್ ಕೆಲಸ ಮಾಡುತ್ತದೆಯೇ? ಐಪಿಎಲ್ 2026(IPL 2026) ರಲ್ಲಿ ಸನ್‌ರೈಸರ್ಸ್ ಹೈದರಾಬಾದ್(SRH vs CSK) ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ಅಭಿಮಾನಿಯ ನಿಂಬೆಹಣ್ಣಿನ ಮಾಯಾಜಾಲವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೆಂಬಲಿಗನೊಬ್ಬ ನಿಂಬೆಹಣ್ಣು ಹಿಡಿದುಕೊಂಡು ಶಿವಂ ದುಬೆ ವಿಕೆಟ್ ಪತನಗೊಳ್ಳುವಂತೆ ಮಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್‌ನ 17 ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ. ಶಿವಂ ದುಬೆ ಕ್ರೀಸ್‌ನಲ್ಲಿದ್ದಾಗ ಲಿಂಬೆ ಹಣ್ಣು ಹಿಡಿದ ಅಭಿಮಾನಿ ವಿಕೆಟ್ ಪತನಗೊಳ್ಳಲಿ ಎಂದು ಮಂತ್ರ ಹೇಳುತ್ತಾನೆ. ಕಾಕತಾಳಿಯ ಎಂಬಂತೆ ಶಿವಂ ದುಬೆ ಮುಂದಿನ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು.
ಈ ವಿಡಿಯೋಗೆ ಸಂಬಂಧಿಸಿದಂತೆ ಚೆನ್ನೈ ಸೂಪರ್ ಕಿಂಗ್ಸ್ ಆಡಳಿತ ಮಂಡಳಿ ಬಿಸಿಸಿಐಗೆ ದೂರು ಸಲ್ಲಿಸಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ದೂರಿನ ಪ್ರತಿಯೂ ವೈರಲ್ ಆಗಿದೆ. ಆದರೆ ಈ ಬಗ್ಗೆ ಸಿಎಸ್ಕೆ ಆಡಳಿತ ಮಂಡಳಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಹಾಗೆಯೇ ಸಿಎಸ್ಕೆ ಆಡಳಿತ ಮಂಡಳಿ ಈ ರೀತಿಯ ವಿಚಾರಗಳಿಗೆ ದೂರು ನೀಡುವ ಸಾಧ್ಯತೆಗಳಿಲ್ಲ. ಹೀಗಾಗಿ ವೈರಲ್ ಆಗಿರುವ ದೂರಿನ ಪ್ರತಿ ನಕಲಿಯಾಗಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ.
ಪಂದ್ಯ ಸೋತ ಚೆನ್ನೈ
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡವು ಅಭಿಷೇಕ್ (59) ಮತ್ತು ಕ್ಲಾಸೆನ್ (59) ಅವರ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 194 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಇಶಾನ್ (29ಕ್ಕೆ 3) ಮತ್ತು ನಿತೀಶ್ ಕುಮಾರ್ ರೆಡ್ಡಿ (31ಕ್ಕೆ 2) ಕಡಿವಾಣ ಹಾಕಿದರು. ಅಂತಿಮವಾಗಿ ಚೆನ್ನೈ ತಂಡ 8 ವಿಕೆಟ್‌ಗೆ 184 ರನ್ ಗಳಿಸಿ ಹೋರಾಟ ಮುಗಿಸಿತು. ಚೆನ್ನೈ ತಂಡದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ (7) ನಿರಾಸೆ ಮೂಡಿಸಿದರು.