ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಪಿತ್ತ ನೆತ್ತಿಗೇರುವ ಮುನ್ನ ಜಾಗ ಖಾಲಿ ಮಾಡು'; ಹುಚ್ಚಾಟ ಮೆರೆದ ಅಭಿಮಾನಿಗೆ ಎಚ್ಚರಿಕೆ ನೀಡಿದ ಕ್ಲಾಸೆನ್‌; ಇಲ್ಲಿದೆ ವಿಡಿಯೊ

IPL 2026:‌ ಕ್ಲಾಸೆನ್ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಲ್ಲಿ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 59.14 ರ ಸರಾಸರಿಯಲ್ಲಿ 414 ರನ್ ಗಳಿಸಿ ತಂಡದ ಸಹ ಆಟಗಾರ ಅಭಿಷೇಕ್ ಶರ್ಮಾ ನಂತರ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

Heinrich Klaasen

ಹೈದರಾಬಾದ್‌, ಮೇ 1: ಸನ್‌ರೈಸರ್ಸ್ ಹೈದರಾಬಾದ್(Sunrisers Hyderabad) ಬ್ಯಾಟ್ಸ್‌ಮನ್ ಹೆನ್ರಿಕ್ ಕ್ಲಾಸೆನ್(Heinrich Klaasen) ತಮ್ಮ ಕುಟುಂಬದ ವಿಡಿಯೊ ತೆಗೆದ ಅಭಿಮಾನಿಯೊಬ್ಬರಿಗೆ ಎಚ್ಚರಿಕೆ ನೀಡುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಈ ವಿಡಿಯೊದಲ್ಲಿ ಸಿಟ್ಟಿಗೆದ್ದಂತೆ ಕಾಣಿಸಿಕೊಂಡಿದ್ದು, ಪರಿಸ್ಥಿತಿ ಇನ್ನಷ್ಟು ಹದಗೆಡುವ ಮೊದಲು ರೆಕಾರ್ಡ್ ಮಾಡುವುದನ್ನು ನಿಲ್ಲಿಸಿ ತನ್ನ ಗೌಪ್ಯತೆಯನ್ನು ಗೌರವಿಸುವಂತೆ ಆ ವ್ಯಕ್ತಿಯನ್ನು ದೃಢವಾಗಿ ಕೇಳುತ್ತಿರುವುದು ಕಂಡುಬಂದಿದೆ.

ತಮ್ಮ ವೈಯಕ್ತಿಕ ವಿಚಾರ ಮತ್ತು ಕುಟುಂಬದ ಸಮಯವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸುವ ವ್ಯಕ್ತಿ ಎಂದು ಹೆಸರುವಾಸಿಯಾಗಿರುವ ಕ್ಲಾಸೆನ್, ಕುಟುಂಬಕ್ಕೆ ಸಮಯ ನೀಡುವ ಸಲುವಾಗಿ ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.

ವ್ಯಾಪಕವಾಗಿ ಪ್ರಸಾರವಾದ ವಿಡಿಯೊದಲ್ಲಿ, ಕ್ಲಾಸೆನ್ ಮೊದಲು ಸ್ಪಷ್ಟ ಎಚ್ಚರಿಕೆ ನೀಡುವುದನ್ನು ಕೇಳಲಾಗುತ್ತದೆ. ನನ್ನ ಮಾತನ್ನು ಬಹಳ ಎಚ್ಚರಿಕೆಯಿಂದ ಆಲಿಸಿ. ನಿಮ್ಮ ಪ್ರೀತಿಗೆ ತುಂಬಾ ಧನ್ಯವಾದಗಳು, ಆದರೆ ಫೋಟೋ ತೆಗೆದುಕೊಳ್ಳಬೇಡಿ ಎಂದರು. ಕ್ಲಾಸೆನ್‌ ಇಷ್ಟು ಹೇಳಿದರೂ ಸುಮ್ಮನಾಗದ ಅಭಿಮಾನಿ, ಕ್ಯಾಮೆರಾ ಕೆಳಗೆ ತಿರುಗಿಸಿ ರೆಕಾರ್ಡ್ ಮಾಡುವುದನ್ನು ಮುಂದುವರಿಸಿದ್ದಾನೆ. ಈ ವೇಳೆ ತಾಳ್ಮೆ ಕಳೆದುಕೊಂಡ ಕ್ಲಾಸೆನ್‌ ಮತ್ತೆ ಏರು ಧ್ವನಿಯಲ್ಲಿ "ನಾನು ತಿರುಗಿ ನೋಡಿದಾಗ ನೀವು ನನ್ನ ಮತ್ತು ನನ್ನ ಕುಟುಂಬದ ಫೋಟೋ ತೆಗೆದರೆ, ನೀನು ನೆಲದ ಮೇಲೆ ಇರುತ್ತೀಯ. ಇದಕ್ಕೂ ಮುನ್ನ ದಯವಿಟ್ಟು ತಿರುಗಿ ಹೊರಟು ಹೋಗು" ಎಂದರು. ಹುಚ್ಚು ಅಭಿಮಾನಿಯ ಈ ವರ್ತನೆಯನ್ನು ನೆಟ್ಟಿಗರು ಖಂಡಿಸಿದ್ದಾರೆ.



ಕೆಲವರು ಅಭಿಮಾನದ ನೆಪದಲ್ಲಿ ಗೌಪ್ಯತೆಯ ಪರಿಕಲ್ಪನೆಯನ್ನು ಮರೆತುಬಿಡುತ್ತಿದ್ದಾರೆ. ವಿಶೇಷವಾಗಿ ಕ್ರೀಡಾಪಟುಗಳು ತಮ್ಮ ಕುಟುಂಬಗಳೊಂದಿಗೆ ಖಾಸಗಿ ಸಮಯವನ್ನು ಕಳೆಯುತ್ತಿರುವಾಗ. ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚುತ್ತಿರುವ ಕ್ಯಾಮೆರಾಗಳ ಉಪಸ್ಥಿತಿ ಮತ್ತು ಅಭಿಮಾನಿಗಳ ಹುಚ್ಚಾಟ ಆಟಗಾರರ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪದ ನಡುವಿನ ಸೂಕ್ಷ್ಮ ರೇಖೆಯ ಬಗ್ಗೆ ಚರ್ಚೆಗಳನ್ನು ಮತ್ತೆ ಹುಟ್ಟುಹಾಕುತ್ತಿದೆ.

ಕೆನಡಾ ಪುರುಷರ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಆಗಿ ಮಾಂಟಿ ದೇಸಾಯಿ ನೇಮಕ

ಇತ್ತೀಚೆಗೆ ಸನ್‌ರೈಸರ್ಸ್‌ ತಂಡದ ಅಭಿಷೇಕ್‌ ಶರ್ಮ ತಂಡದ ಸಹ ಆಟಗಾರರೊಂದಿಗೆ ವಿಮಾನ ನಿಲ್ದಾಣದಲ್ಲಿ ಬರುತ್ತಿದ್ದ ವೇಳೆ ಯುವತಿಯೊಬ್ಬಳು ಏಕಾಏಕಿ ಅವರ ಕೈ ಹಿಡಿದು ಎಳೆದಿದ್ದಳು. ಏತನ್ಮಧ್ಯೆ, ಕ್ಲಾಸೆನ್ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಲ್ಲಿ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 59.14 ರ ಸರಾಸರಿಯಲ್ಲಿ 414 ರನ್ ಗಳಿಸಿ ತಂಡದ ಸಹ ಆಟಗಾರ ಅಭಿಷೇಕ್ ಶರ್ಮಾ ನಂತರ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.