ಅಹಮದಾಬಾದ್, ಮೇ 31: ಇಂದು ಸಂಜೆ ಅಹಮದಾಬಾದ್(Ahmedabad)ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೈನಲ್(IPL 2026 Final)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲು ಸಜ್ಜಾಗುತ್ತಿರುವ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್‌ಮನ್ ಗಿಲ್(Shubman Gill), ತವರಿನಲ್ಲಿ ಆಡುವ ಅನುಕೂಲವನ್ನು ಒಂದು ಪ್ರಯೋಜನವೆಂದು ನೋಡುತ್ತೇನೆ ಎಂದಿದ್ದಾರೆ.
ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿಲ್, "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಿರೀಕ್ಷೆಗಳ ಹೊರೆ ನನಗೆ ನಿಜವಾಗಿಯೂ ಅರ್ಥವಾಗುತ್ತಿಲ್ಲ. ಆದರೆ ಅನುಕೂಲಗಳಿವೆ, ನಾವು ಇಲ್ಲಿ ಆಡುವಾಗ ಪರಿಚಿತತೆ ಇರುತ್ತದೆ, ನಮಗೆ ವಿಕೆಟ್, ಮೈದಾನ ತಿಳಿದಿರುತ್ತದೆ. ಆದ್ದರಿಂದ, ಗೆಲ್ಲಲು ನಾವು ಇಲ್ಲಿ ಯಾವ ರೀತಿಯ ಕ್ರಿಕೆಟ್ ಆಡಬೇಕೆಂದು ನಮಗೆ ತಿಳಿದಿದೆ. ತವರಿನಲ್ಲಿ ಆಡುವುದು ಒಂದು ಅನುಕೂಲವೆಂದು ನಾನು ನೋಡುತ್ತೇನೆ. ಏಕೆಂದರೆ ಸ್ವಲ್ಪ ಪರಿಚಿತತೆ ಇದೆ" ಎಂದು ಹೇಳಿದರು.
ಹಾಲಿ ಆವೃತ್ತಿಯಲ್ಲಿ ಟೈಟಾನ್ಸ್ ತಂಡವು ತಮ್ಮ ತವರು ಮೈದಾನದಲ್ಲಿ ಆಡಿದ ಏಳು ಪಂದ್ಯಗಳಲ್ಲಿ ಐದರಲ್ಲಿ ಗೆದ್ದಿದ್ದಾರೆ. ಆರ್‌ಸಿಬಿ ವಿರುದ್ಧವೂ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಗುಜರಾತ್ ಫೈನಲ್ ಪಂದ್ಯವನ್ನು ಯಾವುದೇ ಒತ್ತಡವಿಲ್ಲದೆ ಆಡಬಹುದು.
ಮೇ 29, ಶುಕ್ರವಾರ ಮುಲ್ಲನ್‌ಪುರದಲ್ಲಿ ನಡೆದ ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಟೈಟಾನ್ಸ್ ಫೈನಲ್‌ಗೆ ಪ್ರವೇಶಿಸಿತ್ತು. ವೈಭವ್ ಸೂರ್ಯವಂಶಿ ಅವರ ಅದ್ಭುತ 96 ರನ್‌ಗಳ ಹೊರತಾಗಿಯೂ ಅವರು ರಾಯಲ್ಸ್ ತಂಡವನ್ನು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 214 ರನ್‌ಗಳಿಗೆ ಸೀಮಿತಗೊಳಿಸಿದರು. ನಾಯಕ ಗಿಲ್ ಅದ್ಭುತ ಶತಕ ಗಳಿಸುವುದರೊಂದಿಗೆ ತಂಡ ಏಳು ವಿಕೆಟ್ ಅಂತರದ ಗೆಲುವು ಸಾಧಿಸಿತು.
ಉದಯೋನ್ಮುಖ ತಾರೆ ಸೂರ್ಯವಂಶಿಗೆ ಸಚಿನ್ ತೆಂಡೂಲ್ಕರ್ ಕಾಲಾತೀತ ಸಲಹೆ
ಇಂದಿನ ಫೈನಲ್ ಪಂದ್ಯ ಆರ್‌ಸಿಬಿಯ 5ನೇ ಹಾಗೂ ಗುಜರಾತ್‌ಗೆ ಮೂರನೇ ಫೈನಲ್ ಪಂದ್ಯವಾಗಿದೆ. ಉಭಯ ತಂಡಗಳು ತಲಾ ಒಂದು ಟ್ರೋಫಿ ಗೆದ್ದಿದೆ. ಇಂದು ಯಾರೇ ಗೆದ್ದರು 2ನೇ ಟ್ರೋಫಿಗೆ ಮುತ್ತಿಕ್ಕಲಿದ್ದಾರೆ. ಆರ್‌ಸಿಬಿ ಈ ಹಿಂದೆ 2009, 2011, 2016ರ ಫೈನಲ್‌ನಲ್ಲಿ ಸೋತಿತ್ತು. 2025ರಲ್ಲಿ ಪಂಜಾಬ್ ವಿರುದ್ಧ ಗೆದ್ದು ಮೊದಲ ಬಾರಿಗೆ ಚಾಂಪಿಯನ್ ಆಗಿತ್ತು. 2022ರಿಂದ ಐಪಿಎಲ್ ಆಡುತ್ತಿರುವ ಗುಜರಾತ್‌ಗೆ ಇದು 3ನೇ ಫೈನಲ್. 2022ರ ತನ್ನ ಚೊಚ್ಚಲ ಆವೃತ್ತಿಯಲ್ಲಿ ರಾಜಸ್ಥಾನ ವಿರುದ್ಧ ಗೆದ್ದು ತಂಡ ಚಾಂಪಿಯನ್ ಆಗಿತ್ತು. ಆಗ ಹಾರ್ದಿಕ್ ಪಾಂಡ್ಯ ತಂಡದ ನಾಯಕನಾಗಿದ್ದರು. 2023ರಲ್ಲಿಯೂ ತಂಡ ಫೈನಲ್ ತಲುಪಿತ್ತು. ಆದರೆ ಸಿಎಸ್‌ಕೆ ವಿರುದ್ಧ ಸೋಲು ಕಂಡಿತ್ತು. ಗಿಲ್‌ಗೆ ನಾಯಕನಾಗಿ ಇದು ಮೊದಲ ಫೈನಲ್.