ಮುಂಬಯಿ, ಎ.21: ಆಸ್ಟ್ರೇಲಿಯಾದ ಬ್ಯಾಟರ್ ಜೋಶ್ ಇಂಗ್ಲಿಸ್(Josh Inglis) ಅವರು ಮೇ 4ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್(IPL 2026) ಪಂದ್ಯಕ್ಕೂ ಮುನ್ನ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ನಾಲ್ಕು ಪಂದ್ಯಗಳನ್ನು ಸೋತು ಗೆಲುವಿನ ಹುಡುಕಾಟದಲ್ಲಿರುವ ತಂಡಕ್ಕೆ ಜೋಶ್ ಇಂಗ್ಲಿಸ್ ಆಗಮನ ಬಲ ತುಂಬಿದಂತಾಗಲಿದೆ.
ತಮ್ಮ ವಿವಾಹದ ಕಾರಣದಿಂದಇಂಗ್ಲಿಸ್ ಅವರು ಐಪಿಎಲ್ ಋತುವಿನ ಮೊದಲಾರ್ಧದ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಎಪ್ರಿಲ್ 18ರಂದು ಅವರ ವಿವಾಹ ನಡೆದಿದೆ. ಅವರು ಮುಂದಿನ ತಿಂಗಳು ಭಾರತಕ್ಕೆ ಬರುವ ನಿರೀಕ್ಷೆಯಿದೆ. ಇಂಗ್ಲಿಸ್ ಅವರನ್ನು ಫ್ರಾಂಚೈಸಿ ₹8.6 ಮೊತ್ತಕ್ಕೆ ಖರೀದಿಸಿತ್ತು.
ರಿಷಭ್ ಪಂತ್ ನೇತೃತ್ವದ ತಂಡವು ಸತತ ಮೂರು ಸೋಲುಗಳನ್ನು ಅನುಭವಿಸಿ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ. ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್ ಮತ್ತು ನಿಕೋಲಸ್ ಪೂರನ್ ಈವರೆಗೂ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಪೂರನ್ ಸಂಪೂರ್ಣವಾಗಿ ಫಾರ್ಮ್‌ನಿಂದ ಹೊರಗುಳಿದಿದ್ದಾರೆ, ಆರು ಇನ್ನಿಂಗ್ಸ್‌ಗಳಲ್ಲಿ 80 ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 51 ರನ್‌ಗಳನ್ನು ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಜಾರ್ಜ್ ಲಿಂಡೆ ಇತ್ತೀಚಿನ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಕಾಣಿಸಿಕೊಂಡಿದ್ದರು.
ಕಳೆದ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ ಇಂಗ್ಲಿಸ್ 162.57 ಸ್ಟ್ರೈಕ್ ರೇಟ್‌ನಲ್ಲಿ 278 ರನ್‌ಗಳನ್ನು ಗಳಿಸಿದ್ದರು. ಲಖನೌ ತಂಡವು ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 22ರಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದೆ.
ಭಾರತ ಪ್ರವಾಸದ ಮೇಲೆ ಕಣ್ಣಿಟ್ಟಿರುವ ಟೆನಿಸ್ ದಿಗ್ಗಜ ಜೊಕೊವಿಕ್; ಕೊಹ್ಲಿಯನ್ನು ಭೇಟಿಯಾಗಲು ಬಯಕೆ
ವೇಗಿ ಅನ್ರಿಚ್ ನಾರ್ಟ್ಜೆ ಕಳೆದ ವಾರ ಎಲ್‌ಎಸ್‌ಜಿ ಶಿಬಿರವನ್ನು ತೊರೆದರು, ಅವರ ನಿರ್ಗಮನದ ಕಾರಣವನ್ನು ದೃಢೀಕರಿಸಲಾಗಿಲ್ಲ. ಅವರು ಈ ಋತುವಿನಲ್ಲಿ ಏಪ್ರಿಲ್ 1 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ ಒಂದು ಪಂದ್ಯವನ್ನು ಆಡಿದ್ದರು. ತಮ್ಮ ನಾಲ್ಕು ಓವರ್‌ಗಳಲ್ಲಿ 39 ರನ್ ಬಿಟ್ಟುಕೊಟ್ಟು ವಿಕೆಟ್ ಪಡೆಯಲಿಲ್ಲ.
ಕಳೆದ ಪಂದ್ಯದಲ್ಲಿ ಲಖನೌ ತಂಡ ಪಂಜಾಬ್ ಕಿಂಗ್ಸ್ ತಂಡ ವಿರುದ್ಧ 54 ರನ್‌ಗಳ ಸೋಲು ಕಂಡಿತ್ತು. ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಪಂಜಾಬ್ ಕಿಂಗ್ಸ್ ತಂಡ ಪ್ರಿಯಾಂಶ್ ಆರ್ಯ ಮತ್ತು ಕೂಪರ್ ಕಾನೋಲಿ ಅವರ ಬಿರುಸಿನ ಬ್ಯಾಟಿಂಗ್ ಬಲದಿಂದ 7 ವಿಕೆಟ್‌ಗೆ 254 ಬೃಹತ್ ಮೊತ್ತ ಕಲೆಹಾಕಿತು. ಬೃಹತ್ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟ ಬ್ಯಾಟಿಂಗ್ ಮೂಲಕ ಬೆನ್ನಟಿಕೊಂಡು ಬಂದ ಲಖನೌ, ಅಂತಿಮವಾಗಿ 5 ವಿಕೆಟ್‌ಗೆ 200 ರನ್ ಗಳಿಸಲಷ್ಟೇ ಶಕ್ತವಾಯಿತು.