ಚೆನ್ನೈ, ಮೇ 3: ಶನಿವಾರ ನಡೆದಿದ್ದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಈ ಗೆಲುವಿನಲ್ಲಿ ಕಾರ್ತಿಕ್ ಶರ್ಮಾ(Kartik Sharma) ಪ್ರಮುಖ ಪಾತ್ರ ವಹಿಸಿದ್ದರು, ಆದರೆ ಪಂದ್ಯದ ನಂತರ ಅವರ ಸಂಭ್ರಮಾಚರಣೆಯೇ ಮುಖ್ಯ ಚರ್ಚಾಸ್ಪದ ವಿಷಯವಾಯಿತು.
ಪಂದ್ಯದಲ್ಲಿ ಅರ್ಧಶತಕ ಬಾರಿಸುತ್ತಿದ್ದಂತೆ ಯುವ ಬ್ಯಾಟ್ಸ್‌ಮನ್ ಗನ್-ಪಾಯಿಂಟ್ ಗೆಸ್ಚರ್‌ನಲ್ಲಿ ಸಂಭ್ರಮಾರಣೆ ಮಾಡುವ ಮೂಲಕ 2005 ರ ಎಂಎಸ್ ಧೋನಿ ಮಾಡಿದ ಈ ಸಾಂಪ್ರದಾಯಿಕ ಆಚರಣೆಯನ್ನು ಅಭಿಮಾನಿಗಳಿಗೆ ಮರುಸೃಷ್ಟಿಸಿದರು. ಕಾರ್ತಿಕ್ ಬ್ಯಾಟಿಂಗ್ ಮಾಡಲು ಹೊರನಡೆಯುವ ಮೊದಲೇ ಈ ಆಚರಣೆಯನ್ನು ಯೋಜಿಸಲಾಗಿತ್ತು ಎಂದು ಅವರು ಪಂದ್ಯದ ಬಳಿಕ ವಿವರಿಸಿದರು. ಇದು ಅವರ ಚೊಚ್ಚಲ ಐಪಿಎಲ್ ಅರ್ಧಶತಕ.
"ನಾನು ಪಂದ್ಯದಲ್ಲಿ ರನ್ ಗಳಿಸಿದರೆ, ಹಾಗೆ ಆಚರಿಸುತ್ತೇನೆ ಎಂದು ನಾನು ಮೊದಲೇ ಯೋಜಿಸಿದ್ದೆ" ಎಂದು ಅವರು ಹೇಳಿದರು. ಧೋನಿಯೊಂದಿಗೆ ಹೋಲಿಕೆಗಳು ತಕ್ಷಣವೇ ಹೊರಹೊಮ್ಮಿದರೂ, ಕಾರ್ತಿಕ್ ಆ ಸನ್ನೆಯು ಗೌರವಕ್ಕಿಂತ ಹೆಚ್ಚಾಗಿ ಅವರ ಸ್ವಂತ ಆಯ್ಕೆಯಾಗಿದೆ ಎಂದು ಸ್ಪಷ್ಟಪಡಿಸಿದರು. ಇಂಪ್ಯಾಕ್ಟ್ ಆಟಗಾರನಾಗಿ ಕ್ರೀಸ್‌ಗಿಳಿದ ಕಾರ್ತಿಕ್ ಶರ್ಮಾ 40 ಎಸೆತದಲ್ಲಿ ಔಟಾಗದೆ 54 ರನ್ ಗಳಿಸಿದರು.
2005 ರಲ್ಲಿ, ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಅಜೇಯ 183 ರನ್ ಗಳಿಸುವ ಮೂಲಕ ಧೋನಿ ಶ್ರೇಷ್ಠ ಏಕದಿನ ಇನ್ನಿಂಗ್ಸ್‌ಗಳಲ್ಲಿ ಒಂದನ್ನು ನಿರ್ಮಿಸಿದರು. ಆ ಸಮಯದಲ್ಲಿ, ಧೋನಿ ಅದೇ ಗನ್ ಪಾಯಿಂಟ್ ಭಂಗಿಯಲ್ಲಿ ತಮ್ಮ ಶತಕವನ್ನು ಆಚರಿಸಿದ್ದರು. ಇದು ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿರುವ ಕ್ಷಣವಾಗಿದೆ.
ಶನಿವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರಲ್ಲಿ 7 ವಿಕೆಟ್‌ಗೆ 159 ರನ್ ಗಳಿಸಿತು. ಸುಲಭ ಗುರಿ ಬೆನ್ನತ್ತಿದ ಚೆನ್ನೈ, ಆರಂಭದಲ್ಲೇ ಸ್ಯಾಮ್ಸನ್ (11)ರ ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ಋತುರಾಜ್ ಗಾಯಕ್ವಾಡ್ ಲಯಕ್ಕೆ ಮರಳಿ ಕೊನೆವರೆಗೂ ಕ್ರೀಸ್‌ನಲ್ಲಿ ನಿಂತರು. ಊರ್ವಿಲ್ ಪಟೇಲ್ 12 ಎಸೆತದಲ್ಲಿ 27 ರನ್ ಸಿಡಿಸಿದರು. ಕಾರ್ತಿಕ್ ಶರ್ಮಾ 40 ಎಸೆತದಲ್ಲಿ ಔಟಾಗದೆ 54 ರನ್ ಗಳಿಸಿದರು. ಋತುರಾಜ್ 48 ಎಸೆತದಲ್ಲಿ ಔಟಾಗದೆ 67 ರನ್ ಗಳಿಸಿ, ತಂಡವನ್ನು 18.1 ಓವರಲ್ಲಿ ಜಯದ ದಡ ಸೇರಿಸಿದರು.
IPL 2026: ಏಳು ಪಂದ್ಯ ಸೋತ ಮುಂಬೈ ಇಂಡಿಯನ್ಸ್‌ಗೆ ಇನ್ನೂ ಇದೆ ಪ್ಲೇ-ಆಫ್ ಅವಕಾಶ
ಮೊದಲ 10 ಓವರಲ್ಲಿ 3 ವಿಕೆಟ್‌ಗೆ 100 ರನ್ ಗಳಿಸಿದ್ದ ಮುಂಬೈ, ಕೊನೆ 10 ಓವರಲ್ಲಿ 4 ವಿಕೆಟ್ ಕಳೆದುಕೊಂಡು ಕೇವಲ 59 ರನ್ ಗಳಿಸಿತು. ನಾಯಕ ಹಾರ್ದಿಕ್ ಪಾಂಡ್ಯ 23 ಎಸೆತ ಎದುರಿಸಿ ಕೇವಲ 18 ರನ್ ಗಳಿಸಿದ್ದು ತಂಡಕ್ಕೆ ಹಿನ್ನಡೆ ಉಂಟು ಮಾಡಿತು. ಚೆನ್ನೈ ಪರ ಅನ್ಶುಲ್ ಕಾಂಬೋಜ್ ಹಾಗೂ ನೂರ್ ಅಹ್ಮದ್ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿ, ಮುಂಬೈ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು.