ಕೋಲ್ಕತಾ, ಎ.18: ಸತತ ಸೋಲಿನಿಂದ ಕಂಗೆಟ್ಟಿರುವ ಕೋಲ್ಕತ್ತಾ ನೈಟ್ ರೈಡರ್ಸ್(KKR vs RR) ತಂಡವು ಭಾನುವಾರ(ಎಪ್ರಿಲ್ 19) ಈಡನ್ ಗಾರ್ಡನ್ಸ್(Eden Gardens)ನಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಪಂದ್ಯ ಸಂಖ್ಯೆ 28 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಕೆಕೆಆರ್ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ತಂಡದ ಮೇಲಿದೆ. ಈಗಾಗಲೇ ಆಡಿದ 6 ಪಂದ್ಯಗಳಲ್ಲಿ 5 ಸೋಲು ಕಂಡಿದೆ. ಮಳೆಯಿಂದ ಪಂದ್ಯ ರದ್ದಾದ ಕಾರಣ ಒಂದು ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ, ಲೀಗ್ ಹಂತದಲ್ಲಿ ಇನ್ನೂ 8 ಪಂದ್ಯಗಳ ಬಾಕಿ ಇದೆ. ಹೀಗಾಗಿ ರಾಜಸ್ಥಾನ್ ವಿರುದ್ಧದ ಪಂದ್ಯದಿಂದಲೇ ಗೆಲುವಿನ ಅಭಿಯಾನ ಆರಂಭಿಸಬೇಕಿದೆ. ಆದರೆ ಮಾತ್ರ ಪ್ಲೇ ಆಫ್ ಅವಕಾಶ ಇದೆ.
ಕಳೆದ ಪಂದ್ಯದಲ್ಲಿ ರಾಜಸ್ಥಾನ್ ಸೋಲು ಕಂಡಿದ್ದರೂ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಬಲಿಷ್ಠವಾಗಿದೆ. 15 ವರ್ಷದ ವೈಭವ್ ಸೂರ್ಯವಂಶಿ ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ ಕೂಡಾ ರಾಯಲ್ಸ್ ಬ್ಯಾಟಿಂಗ್ ಆಧಾರಸ್ತಂಭ ಎನಿಸಿಕೊಂಡಿದ್ದಾರೆ.
ಪಿಚ್ ರಿಪೋರ್ಟ್
ಈಡನ್ ಗಾರ್ಡನ್ಸ್‌ನ ಪಿಚ್ ಆರಂಭದಲ್ಲಿ ಸೀಮರ್‌ಗಳಿಗೆ ನೆರವು ನೀಡಿದರೂ, ಪಂದ್ಯ ಮುಂದುವರೆದಂತೆ, ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗುವ ಸಾಧ್ಯತೆಯಿದೆ. ಇಲ್ಲಿ ಚೇಸಿಂಗ್ ನಡೆಸುವ ತಂಡಕ್ಕೆ ಹೆಚ್ಚಿನ ಅವಕಾಶ ಏಕೆಂದರೆ ರಾತ್ರಿಯ ವೇಳೆ ಇಲ್ಲಿ ಇಬ್ಬಿನಿ ಸಮಸ್ಯೆ ಕಾಡಲಿದೆ. ಇದು ಬೌಲರ್ಗಳಿಗೆ ಕಷ್ಟಕರವಾಗಲಿದೆ. ಕೈಯಲ್ಲಿ ಸರಿಯಾಗಿ ಚೆಂಡು ನಿಲ್ಲದೆ ನಿರ್ದಿಷ್ಟ ಗುರಿಗೆ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರೆ ಉತ್ತಮ.
ಮುಖಾಮುಖಿ
ಇತ್ತಂಡಗಳು ಈವರೆಗೆ ಐಪಿಎಲ್‌ನಲ್ಲಿ 31 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಕೆಕೆಆರ್ ತಂಡ 16 ಪಂದ್ಯಗಳನ್ನು ಗೆದ್ದಿದೆ. ರಾಜಸ್ಥಾನ್ 12 ಪಂದ್ಯ ಜಯಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. 2 ಪಂದ್ಯ ಟೈ ಆಗಿದೆ.
RCB vs DC: ಗ್ರೀನ್ ಜೆರ್ಸಿಯಲ್ಲಿ ಆರ್ಸಿಬಿ ಅದೃಷ್ಟ ಹೇಗಿದೆ; ಎಷ್ಟು ಗೆಲುವು ಎಷ್ಟು ಸೋಲು?
ಸಂಭಾವ್ಯ ತಂಡಗಳು
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್): ಟಿಮ್ ಸೀಫರ್ಟ್ (ವಿ.ಕೀ.), ಅಜಿಂಕ್ಯ ರಹಾನೆ (ನಾಯಕ), ಆಂಗ್ಕ್ರಿಶ್ ರಘುವಂಶಿ, ಕ್ಯಾಮೆರಾನ್ ಗ್ರೀನ್, ರೋವ್ಮನ್ ಪೊವೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಸುನಿಲ್ ನರೈನ್, ಅನುಕುಲ್ ರಾಯ್, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ.
ಇಂಪ್ಯಾಕ್ಟ್ ಆಟಗಾರ: ವರುಣ್ ಚಕ್ರವರ್ತಿ.
ರಾಜಸ್ಥಾನ್ ರಾಯಲ್ಸ್ (ಆರ್‌ಆರ್):
ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿ.ಕೀ.), ರಿಯಾನ್ ಪರಾಗ್ (ನಾಯಕ), ಲುವಾನ್-ಡ್ರೆ ಪ್ರಿಟೋರಿಯಸ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಸಂದೀಪ್ ಶರ್ಮಾ, ರವಿ ಬಿಷ್ಣೋಯ್.
ಇಂಪ್ಯಾಕ್ಟ್ ಆಟಗಾರ: ತುಷಾರ್ ದೇಶಪಾಂಡೆ.