ಚೆನ್ನೈ, ಮೇ 1: ಪ್ಲೇ ಆಫ್ ಪ್ರವೇಶದ ಕ್ಷೀಣ ಅವಕಾಶ ಹೊಂದಿರುವ ಮುಂಬೈ ಇಂಡಿಯನ್ಸ್(CSK vs MI) ತಂಡವು ಶನಿವಾರದ ಇಂಡಿಯನ್ ಪ್ರೀಮಿಯರ್ ಲೀಗ್(IPL 2026)ನ 44ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಮುಂಬೈ 6 ಸೋಲಿನೊಂದಿಗೆ 9ನೇ ಸ್ಥಾನದಲ್ಲಿದ್ದರೆ, 5 ಸೋಲು ಕಂಡು 6ನೇ ಸ್ಥಾನದಲ್ಲಿದೆ. ಇತ್ತಂಡಗಳು ತಲಾ 8 ಪಂದ್ಯಗಳನ್ನು ಆಡಿವೆ.
ಮುಂಬೈ ತಂಡ ಕಾಗದ ಮೇಲೆ ಮಾತ್ರ ಬಲಿಷ್ಠವಾಗಿದೆ. ತಂಡದಲ್ಲಿ ಅನುಭವಿ ಆಟಗಾರ ಪಡೆಯೇ ಇದ್ದರೂ ಯಾರು ಕೂಡ ಫಾರ್ಮ್‌ನಲ್ಲಿಲ್ಲ. ವಿಶ್ವದ ಘಾತಕ ವೇಗಿ ಎನಿಸಿಕೊಂಡಿರುವ ಜಸ್‌ಪ್ರೀತ್ ಬುಮ್ರಾ ಅವರ ಬೌಲಿಂಗ್ ಇದುವರೆಗಿನ ಐಪಿಎಲ್‌ನಲ್ಲಿಯೇ ಅತ್ಯಂತ ಕಳಪೆಯಾಗಿದೆ. ಒಂದು ಕಾಲದಲ್ಲಿ ಬ್ಯಾಟರ್‌ಗಳಿಗೆ ಭಯ ಹುಟ್ಟಿಸುತ್ತಿದ್ದ ಅವರು ಇದೀಗ ಅನ್‌ಕ್ಯಾಪ್ಟ್ ಆಟಗಾರರ ಮುಂದೆಯೂ ಭಯ ಪಡುವಂತ ಸ್ಥಿತಿಯಲ್ಲಿದ್ದಾರೆ. ಬೌಲರ್‌ಗಳು ಕೂಡ ಅವರ ಎಸೆತಕ್ಕೆ ಸಿಕ್ಸರ್ ಬಾರಿಸುತ್ತಿದ್ದಾರೆ. ಪಂದ್ಯದಲ್ಲಿ ಕನಿಷ್ಠ ಒಂದು ವಿಕೆಟ್ ಕೂಡ ಪಡೆಯಲು ಅವರಿಂದ ಸಾಧ್ಯವಾಗುತ್ತಿಲ್ಲ.
ಸೂರ್ಯಕುಮಾರ್ ಯಾದವ್ ನೋಡುವಾಗ ಸಂಪೂರ್ಣ ಬ್ಯಾಟಿಂಗ್ ಮರೆತವರಂತೆ ಕಾಣುತ್ತಿದೆ. ತಿಲಕ್ ಅಬ್ಬರ ಕೇವಲ ಒಂದು ಪಂದ್ಯಕ್ಕೆ ಸೀಮಿತಗೊಂಡಂತಿದೆ. ರೋಹಿತ್ ಶರ್ಮ ಇನ್ನೂ ಗುಣಮುಖರಾದಂತೆ ಕಾಣುತ್ತಿಲ್ಲ.
ಚೆನ್ನೈ ತಂಡ ಕೂಡ ಸ್ಥಿರ ಪ್ರದರ್ಶನ ತೋರುತಿಲ್ಲ. ಒಂದು ಪಂದ್ಯ ಗೆದ್ದರೆ ಆ ಬಳಿಕದ ಪಂದ್ಯಗಳಲ್ಲಿ ಸೋಲು ಕಾಣುತ್ತಿದೆ. ತಂಡದ ಪರ ಸಂಜು ಸ್ಯಾಮ್ಸನ್ ಮಾತ್ರ ಅಬ್ಬರಿಸುತ್ತಿದ್ದಾರೆ. ಉಳಿದವರಿಂದ ಸಂಘಟಿತ ಪ್ರದರ್ಶನ ತೋರಿ ಬರುತ್ತಿಲ್ಲ. ನಾಯಕ ಋತುರಾಜ್ ಗಾಯಕ್ವಾಡ್ ಇನ್ನೂ ಬ್ಯಾಟಿಂಗ್ ಫಾರ್ಮ್ ಹುಡುಕಾಟದಲ್ಲಿಯೇ ಇದ್ದಾರೆ. ಹಾರ್ಡ್ ಹಿಟ್ಟರ್ ಶಿವಂ ದುಬೆ ಬ್ಯಾಟ್ ಕೂಡ ಸದ್ದು ಮಾಡುತ್ತಿಲ್ಲ.
ಕೊಹ್ಲಿಯ ಆಕ್ರೋಶಭರಿತ ಬೀಳ್ಕೊಡುಗೆಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ತಕ್ಕ ತಿರುಗೇಟು ನೀಡಿದ ಶುಭಮನ್ ಗಿಲ್
ಪಿಚ್ ರಿಪೋರ್ಟ್
ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂ ಸಾಮಾನ್ಯವಾಗಿ ಸ್ಪಿನ್ ಸ್ನೇಹಿಯಾಗಿದೆ. ಆದರೆ ಇಲ್ಲಿ ದೊಡ್ಡ ಮೊತ್ತವನ್ನು ನಿರೀಕ್ಷೆ ಮಾಡಬಹುದು. ಏಕೆಂದರೆ ಇಲ್ಲಿ ಆಡಿದ ಕಳೆದ ಪಂದ್ಯದಲ್ಲಿಯೂ 200 ಪ್ಲಸ್ ಮೊತ್ತ ದಾಖಲಾಗಿತ್ತು. ವೇಗಿಗಳಿಗೆ ಇಲ್ಲಿನ ಪಿಚ್ ಕಡಿಮೆ ಪ್ರಮಾಣದಲ್ಲಿ ನೆರವು ನೀಡುತ್ತದೆ. ಈ ಪಿಚ್‌ನಲ್ಲಿ ಇದುವರೆಗೆ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಹೆಚ್ಚಿನ ಗೆಲುವು ದಾಖಲಿಸಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ನಡೆಸುವ ಸಾಧ್ಯತೆ ಅಧಿಕ.
ಮುಖಾಮುಖಿ
ಮುಂಬೈ ಇಂಡಿಯನ್ಸ್- 22 ಗೆಲುವು
ಚೆನ್ನೈ ಸೂಪರ್ ಕಿಂಗ್ಸ್- 20 ಗೆಲುವು
ಸಂಭಾವ್ಯ ಆಡುವ ಬಳಗ
ಚೆನ್ನೈ ಸೂಪರ್ ಕಿಂಗ್ಸ್: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್ (ನಾಯಕ), ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಕಾರ್ತಿಕ್ ಶರ್ಮಾ, ಜೇಮಿ ಓವರ್ಟನ್, ಅಕೇಲ್ ಹೊಸೈನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಗುರ್ಜಪ್ನೀತ್ ಸಿಂಗ್, ಮುಖೇಶ್ ಚೌಧರಿ
ಇಂಪ್ಯಾಕ್ಟ್ ಪ್ಲೇಯರ್: ಉರ್ವಿಲ್ ಪಟೇಲ್.
ಮುಂಬೈ ಇಂಡಿಯನ್ಸ್: ವಿಲ್ ಜಾಕ್ಸ್, ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್), ನಮನ್ ಧೀರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಶಾರ್ದೂಲ್ ಠಾಕೂರ್, ಟ್ರೆಂಟ್ ಬೌಲ್ಟ್, ಅಶ್ವನಿ ಕುಮಾರ್, ಜಸ್ಪ್ರೀತ್ ಬುಮ್ರಾ, ಎ.ಎಮ್ ಗಜನ್ಫರ್
ಇಂಪ್ಯಾಕ್ಟ್ ಪ್ಲೇಯರ್: ರಾಬಿನ್ ಮಿಂಜ್.
ಪಂದ್ಯ ಆರಂಭ: ರಾತ್ರಿ 7 ಗಂಟೆಗೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.