ಬೆಂಗಳೂರು, ಮಾ.19: ರಾಜ್ಯಾದ್ಯಂತ ಅಕಾಲಿಕ ಮಳೆಯ ಅಬ್ಬರ ಮುಂದುವರಿದಿದ್ದು, ಬೆಂಗಳೂರು ಸೇರಿ ರಾಜ್ಯದ 15 ಜಿಲ್ಲೆಗಳಲ್ಲಿ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮಾ.28ಕ್ಕೆ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣ(M Chinnaswamy Stadium)ದಲ್ಲಿ ನಿಗದಿಯಾಗಿರುವ 19ನೇ ಆವೃತ್ತಿಯ ಐಪಿಎಲ್(IPL 2026) ಉದ್ಘಾಟನ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್(RCB vs SRH) ಮುಖಾಮುಖಿಯಾಗಲಿವೆ. ಬಂಗಾಳಕೊಲ್ಲಿಯಲ್ಲಿ ಸುಳಿಗಾಳಿ ಇದ್ದು ಮಾರ್ಚ್ 29 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞರು ಎಚ್ಚರಿಸಿದ್ದಾರೆ.
ಮಳೆ ಬಂದರೂ ಆತಂಕವಿಲ್ಲ
ಪಂದ್ಯ ನಡೆಯುವ ಸಮಯದಲ್ಲಿ ಎಷ್ಟೇ ಜೋರಾಗಿ ಮಳೆ ಬಂದರೂ 15 ರಿಂದ 20 ನಿಮಿಷದೊಳಗೆ ಮತ್ತೆ ಪಂದ್ಯ ಮುಂದುವರಿಯಲು ಅವಕಾಶ ಮಾಡಿಕೊಡುವ ಸೌಲಭ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ. ದಶಕದ ಹಿಂದೆ ಇಲ್ಲಿ ಅಳವಡಿಸಲಾಗಿರುವ ಸಬ್ ಏರ್ ಸಿಸ್ಟಂ ತಂತ್ರಜ್ಞಾನದಿಂದ ಮಳೆ ನೀರನ್ನು ಶೀಘ್ರವಾಗಿ ಹೊರಹಾಕಬಹುದು. ಮೈದಾನವನ್ನು ಪಂದ್ಯಕ್ಕೆ ಅಣಿಗೊಳಿಸಬಹುದು. ಆದ್ದರಿಂದ ಮಳೆಯಿಂದಾಗಿ ಪಂದ್ಯ ರದ್ದಾಗುವುದು ತೀರಾ ವಿರಳ. ಆದರೆ ಸತತವಾಗಿ ಮಳೆ ಹನಿಯುತ್ತಲೇ ಇದ್ದರೆ ಪಂದ್ಯ ಮುಂದುವರಿಸುವುದು ತುಸು ಕಷ್ಟ.
ಐಪಿಎಲ್ ಮಳೆ ನಿಯಮ(ಲೀಗ್ ಪಂದ್ಯಗಳಿಗೆ)
ಹೆಚ್ಚುವರಿ ಸಮಯ: ಮಳೆಯಿಂದ ತಡವಾದರೆ ಪಂದ್ಯವನ್ನು ಪೂರ್ಣಗೊಳಿಸಲು 120 ನಿಮಿಷಗಳ (2 ಗಂಟೆ) ಹೆಚ್ಚುವರಿ ಸಮಯ ಲಭ್ಯವಿರುತ್ತದೆ.
ಪಂದ್ಯದ ಓವರ್‌ಗಳು: 5-ಓವರ್‌ಗಳ ಪಂದ್ಯವನ್ನು ನಡೆಸಲು ಎರಡೂ ತಂಡಗಳಿಗೆ ಕನಿಷ್ಠ 5 ಓವರ್‌ಗಳ ಅವಕಾಶವಿರಬೇಕು. ಮಳೆಯಿಂದಾಗಿ 5 ಓವರ್‌ಗಳ ಪಂದ್ಯವೂ ಸಾಧ್ಯವಾಗದಿದ್ದರೆ, ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ ಮತ್ತು ಉಭಯ ತಂಡಗಳಿಗೂ ಅಂಕಗಳನ್ನು ಹಂಚಿಕೊಳ್ಳಲಾಗುತ್ತದೆ.
ಮೊದಲ ಹಂತದಲ್ಲಿ ಒಟ್ಟು 16 ದಿನಗಳ ಕಾಲ ಪಂದ್ಯಗಳು ನಡೆಯಲಿವೆ. ಈ ಪೈಕಿ 4 ಡಬಲ್ ಹೆಡರ್(ದಿನಕ್ಕೆ 2 ಪಂದ್ಯ) ಇರಲಿವೆ. ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ, 2ನೇ ಪಂದ್ಯ ಸಂಜೆ 7.30ಕ್ಕೆ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ ಆರ್‌ಸಿಬಿ ತಂಡ ಬೆಂಗಳೂರಿನಲ್ಲಿ 2 ಪಂದ್ಯಗಳನ್ನಾಡಲಿದೆ. ಉದ್ಘಾಟನಾ ಪಂದ್ಯ ಹೊರತಾಗಿ ತನ್ನ ತವರಿನ 2ನೇ ಪಂದ್ಯದಲ್ಲಿ ಏ.5ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳದ ಚುನಾವಣೆ ಬಳಿಕ ಇನ್ನುಳಿದ ಪಂದ್ಯಗಳ ಪಟ್ಟಿ ಪ್ರಕಟಿಸಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಹೆಸರನ್ನು ಅಕ್ರಮವಾಗಿ ಬಳಸಿದ ಆರೋಪ: ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್
ಬೆಂಗಳೂರಿನಲ್ಲಿ ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್‌ನ ಉದ್ಘಾಟನಾ ಪಂದ್ಯ ನಡೆಯಲಿದೆ. 2008ರ ಚೊಚ್ಚಲ ಆವೃತ್ತಿಯ ಆರಂಭಿಕ ಪಂದ್ಯ ಬೆಂಗಳೂರಿನಲ್ಲೇ ನಡೆದಿತ್ತು. ಆ ಬಳಿಕ ಇದೇ ಮೊದಲ ಬಾರಿ ಇಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಇಲ್ಲಿ 2014, 2016ರಲ್ಲಿ ಫೈನಲ್ ಪಂದ್ಯ ನಡೆದಿವೆ.
ಆರ್‌ಸಿಬಿ ವೇಳಾಪಟ್ಟಿ
ಮಾ. 28 ಆರ್‌ಸಿಬಿ-ಸನ್‌ರೈಸರ್ಸ್, ಬೆಂಗಳೂರು ಸಂಜೆ 7.30
ಏ.5 ಆರ್‌ಸಿಬಿ-ಚೆನ್ನೈ, ಬೆಂಗಳೂರು ಸಂಜೆ 7.30
ಏ.10 ರಾಜಸ್ಥಾನ-ಆರ್‌ಸಿಬಿ ಗುವಾಹಟಿ ಸಂಜೆ 7.30
ಏ.12 ಮುಂಬೈ-ಆರ್‌ಸಿಬಿ ಮುಂಬೈ ಸಂಜೆ 7.30