ಮುಂಬಯಿ, ಎ.17: ಮುಂಬೈ ಇಂಡಿಯನ್ಸ್(Mumbai Indians) ತಂಡದ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ(Hardik Pandya) ಅವರು ದರ್ಪ ತೋರಿದ ವಿಡಿಯೊವೊಂದು ವೈರಲ್(viral video) ಆಗಿದೆ. ಪಾಂಡ್ಯ ವರ್ತನೆಗೆ ಜಸ್‌ಪ್ರೀತ್ ಬುಮ್ರಾ(Jasprit Bumrah) ನೀಡಿರುವ ಪ್ರತಿಕ್ರಿಯೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಾತ್ರವಲ್ಲದೆ ಪಾಂಡ್ಯ ವರ್ತನೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಗುರುವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಸಮಯದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ತೆಗೆದುಕೊಂಡ ನಿರ್ಧಾರದಿಂದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅತೃಪ್ತರಾದರು. ಪಂದ್ಯದ ಪ್ರಮುಖ ಹಂತದಲ್ಲಿ ನಾಯಕ ಪಾಂಡ್ಯ ತನ್ನದೇ ಆದ ತಂತ್ರದ ಪ್ರಕಾರ ಮೈದಾನದಲ್ಲಿ ಫೀಲಿಂಗ್ ಹೊಂದಿಸಲು ನಿರ್ಧರಿಸಿದರು. ಆದರೆ ಅದು ಬುಮ್ರಾಗೆ ಸರಿಹೊಂದಲಿಲ್ಲ. ಆರಂಭದಲ್ಲಿ ವಾದ ಮಾಡಿದರೂ, ಬುಮ್ರಾ ಅಂತಿಮವಾಗಿ ತನ್ನ ನಾಯಕನ ನಿರ್ಧಾರವನ್ನು ಒಪ್ಪಿಕೊಂಡರು ಮತ್ತು ನಿರಾಶೆಗೊಂಡಂತೆ ಕಂಡುಬಂದರು. ಅದೇ ದೃಶ್ಯದಲ್ಲಿ, ಹಾರ್ದಿಕ್ ಫೀಲ್ಡರ್‌ಗಳನ್ನು ಜೋರಾಗಿ ಬೈಯುತ್ತಿರುವುದನ್ನು ಕಾಣಬಹುದು. ಪಾಂಡ್ಯ ವರ್ತನೆ ಕಂಡು ಡಗೌಟ್‌ನಲ್ಲಿ ಕುಳಿತಿದ್ದ ಮಾಜಿ ನಾಯಕ ರೋಹಿತ್ ಶರ್ಮ ತಲೆ ಮೇಲೆ ಕೈಯಿಟ್ಟು ನಿರಾಶಭಾವದಿಂದ ಕಂಡುಬಂದರು.
ಹಾರ್ದಿಕ್ ಪಾಂಡ್ಯ ಅವರಿಗೆ ಮುಂಬೈ ನಾಯಕತ್ವ ನೀಡಿದಾಗಲೇ ತಂಡದ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದರು. ಅವರನ್ನು ನಾಯಕ ಸ್ಥಾನದಿಂದ ಕೈಬಿಡಬೇಕು ಎಂಬ ಕೂಗು ಬಹಿರಂಗವಾಗಿಯೇ ಕೇಳಿ ಬಂದಿತ್ತು. ಬಾರಿ ತಂಡ ಸತತ 4 ಸೋಲು ಕಂಡಿರುವ ಕಾರಣ ಪಾಂಡ್ಯ ವಿರುದ್ಧ ಆಕ್ರೋಶ ಮತಷ್ಟು ಹೆಚ್ಚಿದೆ. ಪಾಂಡ್ಯ ವರ್ತನೆ ತಂಡದ ಉಳಿದ ಆಟಗಾರರಿಗೂ ಹೊಂದಾಣಿಕೆ ಆಗದಂತೆ ಕಾಣುತ್ತಿದೆ. ಒಟ್ಟಾರೆ ತಂಡದ ವಾತಾವರಣ ಅಷ್ಟು ಸರಿಯಾಗಿಲ್ಲದಂತೆ ತೋರುತ್ತಿದೆ.
ವೈರಲ್ ವಿಡಿಯೊ ಇಲ್ಲಿದೆ
ಎಚ್ಚರಿಕೆ ನೀಡಿದ ಪಾಂಡ್ಯ
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಸೋಲಿನ ಬಳಿಕ ಮಾತನಾಡಿದ ಪಾಂಡ್ಯ, ತಂಡದ ಪ್ರದರ್ಶನ ಕುರಿತು ಬೇಸರ ವ್ಯಕ್ತಪಡಿಸಿದರು. ಮಾತ್ರವಲ್ಲ, ಮುಂದಿನ ಪಂದ್ಯಗಳಿಗೆ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸುಳಿವು ನೀಡಿ ಆಟಗಾರರಿಗೆ ಎಚ್ಚರಿಕೆ ನೀಡಿದರು.
‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈಗ ನನಗೆ ಹೇಳಲು ಏನೂ ಉಳಿದಿಲ್ಲ. ನಾವು ಏನು ತಪ್ಪು ಮಾಡುತ್ತಿದ್ದೇವೆ ಎಂಬುದನ್ನು ಪರಾಮರ್ಶಿಸಿ ನೋಡಬೇಕು. ಅದು ವ್ಯಕ್ತಿಗಳದ್ದೋ? ಅಥವಾ ಒಂದು ಗುಂಪಿನದ್ದೋ? ಎಂಬುದನ್ನು ತಿಳಿದುಕೊಳ್ಳಬೇಕು. ಮುಂದಿನ ಪಂದ್ಯಗಳಲ್ಲಿ ಏನು ಮಾಡಬೇಕು ಎಂಬುದನ್ನು ಯೋಚಿಸುತ್ತೇವೆ’ ಎಂದರು.