ಅಹಮದಾಬಾದ್, ಮೇ 31: ಇಂದು(ಭಾನುವಾರ) ನಡೆಯಲಿರುವ ಆರ್ಸಿಬಿ-ಗುಜರಾತ್(RCB vs GT) ತಂಡಗಳ ನಡುವಿನ ಐಪಿಎಲ್ (IPL 2026 Final) 19ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಯಾವುದೇ ತಂಡ ಗೆದ್ದರೂ, 2ನೇ ಬಾರಿ ಐಪಿಎಲ್ ಟ್ರೋಫಿ ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಅಲ್ಲದೆ ಐಪಿಎಲ್ನಲ್ಲಿ ಒಂದಕ್ಕಿಂತ ಹೆಚ್ಚು ಟ್ರೋಫಿ ಗೆದ್ದ 4ನೇ ತಂಡವೆನಿಸಲಿದೆ. ಗೆದ್ದ ತಂಡಕ್ಕೆ ಮತ್ತು ರನ್ನರ್ ಅಪ್ ತಂಡಕ್ಕೆ ಸಿಗುವ ಬಹುಮಾನ(IPL 2026 winner prize money) ಮೊತ್ತದ ಮಾಹಿತಿ ಇಲ್ಲಿದೆ.
20 ಕೋಟಿ
ಐಪಿಎಲ್ 2026ರ ಬಹುಮಾನ ಮೊತ್ತ ಕಳೆದ ಸೀಸನ್‌ನಷ್ಟೇ ಇರಲಿದೆ. ಚಾಂಪಿಯನ್ ತಂಡ 20 ಕೋಟಿ ರೂ. ಬಹುಮಾನ ಪಡೆಯಲಿದೆ. ರನ್ನರ್ಅಪ್ ತಂಡ 12.5 ಕೋಟಿ ರೂ. ಗಳಿಸಲಿದೆ. ಉಳಿದಂತೆ ಪ್ಲೇ ಆಫ್ ಪ್ರವೇಶಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ 3ನೇ ಸ್ಥಾನ ಪಡೆದ ತಂಡಕ್ಕೆ 7 ಕೋಟಿ, 4ನೇ ಸ್ಥಾನ ಪಡೆದ ತಂಡಕ್ಕೆ 6.5 ಕೋಟಿ ರೂ. ಬಹುಮಾನ ಸಿಗಲಿದೆ.
ಆಟಗಾರರಿಗೆ ಸಿಗುವ ಮೊತ್ತವೆಷ್ಟು?
ಐಪಿಎಲ್ ನಿಯಮಗಳ ಪ್ರಕಾರ, ತಂಡದ ಬಹುಮಾನದ ಹಣದ ಶೇಕಡಾ 50 ರಷ್ಟು ಆಟಗಾರರಿಗೆ ಹಂಚಿಕೆಯಾಗುತ್ತದೆ, ಉಳಿದ ಶೇಕಡಾ 50 ರಷ್ಟು ಫ್ರಾಂಚೈಸಿ ಮಾಲೀಕರಿಗೆ ಹೋಗುತ್ತದೆ. ತಂಡದ ಬಹುಮಾನದ ಹಣದ ಹೊರತಾಗಿ, ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್‌ನಂತಹ ವೈಯಕ್ತಿಕ ಗೌರವಗಳಿಗಾಗಿ ಆಟಗಾರರು ಪ್ರತ್ಯೇಕ ನಗದು ಬಹುಮಾನಗಳಿಗೆ ಅರ್ಹರಾಗಿರುತ್ತಾರೆ.
ಇದುವರೆಗಿನ ಐಪಿಎಲ್ ಫೈನಲ್‌ನಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಪ್ರದರ್ಶನ ಹೇಗಿದೆ?
ಆರೆಂಜ್ & ಪರ್ಪಲ್ ಕ್ಯಾಪ್ ಬಹುಮಾನ
ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರಿಗೆ ಆರೆಂಜ್ ಕ್ಯಾಪ್ ಜತೆಗೆ 10 ಲಕ್ಷ ರೂ. ವೈಯಕ್ತಿಕ ಮೊತ್ತ ನೀಡಲಾಗುತ್ತದೆ. ಅದರಂತೆ ಅತಿ ಹೆಚ್ಚು ವಿಕೆಟ್ ಪಡೆದವರಿಗೆ ಪರ್ಪಲ್ ಕ್ಯಾಪ್ ಜತೆಗೆ 10 ಲಕ್ಷ ರೂ. ಸಿಗಲಿದೆ. ಸದ್ಯ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಸೆನ್ಸೇಶನ್ ವೈಭವ್ ಸೂರ್ಯವಂಶಿ (776) ಬಳಿ ಆರೆಂಜ್ ಕ್ಯಾಪ್ ಇದೆ. ಆದರೆ ಫೈನಲ್‌ನಲ್ಲಿ ಆಡಲಿರುವ ಗುಜರಾತ್ ತಂಡದ ಶುಭಮಾನ್ ಗಿಲ್ (722) ಮತ್ತು ಸಾಯಿ ಸುದರ್ಶನ್ (710) ಇದನ್ನು ಕಿತ್ತುಕೊಳ್ಳುವ ಅವಕಾಶ ಹೊಂದಿದ್ದಾರೆ. ಇನ್ನು ಪರ್ಪಲ್ ಕ್ಯಾಪ್ ರೇಸ್ನಲ್ಲಿ ಕಗಿಸೊ ರಬಾಡ (28) ಮತ್ತು ಭುವನೇಶ್ವರ್ ಕುಮಾರ್ (26) ನಡುವೆ ಫೈನಲ್‌ನಲ್ಲಿ ನಿಕಟ ಪೈಪೋಟಿ ನಡೆಯಲಿದೆ.
ಎಮರ್ಜಿಂಗ್ ಪ್ಲೇಯರ್‌ಗೂ ಬಹುಮಾನ
ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಗಮನ ಸೆಳೆದ ಆಟಗಾರರಿಗೆ ಉದಯೋನ್ಮುಖ ಆಟಗಾರ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ವೈಭವ್ ಸೂರ್ಯವಂಶಿಗೆ ಈ ಮೊತ್ತ ಸಿಗುವ ಸಾಧ್ಯತೆ ಇದೆ.