ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs PBKS Final: ಫೈನಲ್‌ ಕಂಟಕದಿಂದ ಪಾರಾಗಿ ಕಪ್‌ ಗೆಲ್ಲಲಿ ಆರ್‌ಸಿಬಿ

ಸದ್ಯ ಆರ್‌ಸಿಬಿ ತಂಡದಲ್ಲಿ ಯಾವುದೇ ಕೊರತೆಗಳು ಕಾಣಿಸಿಲ್ಲ. ಚಾಂಪಿಯನ್‌ ಆಟಗಾರ ಜೋಶ್‌ ಹ್ಯಾಜಲ್‌ವುಡ್‌, ಫಿಲ್‌ ಸಾಲ್ಟ್‌, ಕೊಹ್ಲಿ, ಜಿತೇಶ್‌ ಶರ್ಮ ಇವರೆಲ್ಲ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಟಿಮ್‌ ಡೇವಿಡ್‌ ಕೂಡ ಫಿಟ್‌ ಆಗಿದ್ದು ಫೈನಲ್‌ ಆಡುವ ನಿರೀಕ್ಷೆ ಇದೆ.

ಅಹಮದಾಬಾದ್‌: ಕ್ರಿಕೆಟ್‌ ಅಭಿಮಾನಿಗಳು ಕುತೂಹಲದಿಂದ, ತುದಿ ಗಾಲಲ್ಲಿ ನಿಂತು ನಿರೀಕ್ಷಿಸುತ್ತಿದ್ದ ಸಮಯ ಎದುರಾಗಿದೆ. ಇದುವರೆಗೆ ಐಪಿಎಲ್‌(IPL Final 2025) ಕಪ್‌ ಗೆಲ್ಲದ ತಂಡಗಳಾದ ಪಂಜಾಬ್‌ ಕಿಂಗ್ಸ್‌(RCB vs PBKS Final) ಮತ್ತು ಕನ್ನಡಿಗರ ನೆಚ್ಚಿನ ತಂಡದವಾದ ಆರ್‌ಸಿಬಿ ಫೈನಲ್‌ ಕದನಕ್ಕೆ ಸಜ್ಜಾಗಿವೆ. ಮಂಗಳವಾರ ಅಹ್ಮದಾಬಾದ್‌ನ ದೈತ್ಯ ಕ್ರೀಡಾಂಗಣದಲ್ಲಿ ಕದನಕ್ಕೆ ಇಳಿಯಲಿದೆ. ಎರಡು ಕೂಡ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿ ಫೈನಲ್‌ಗೆ ಮುನ್ನುಗ್ಗಿ ಬಂದ ಬಲಿಷ್ಠ ಪಡೆಗಳು. ಹೀಗಾಗಿ ಉಭಯ ತಂಡಗಳ ಮೇಲೆ ಬೆಟ್ಟದಷ್ಟು ನಿರೀಕ್ಷೆ. ಯಾರೇ ಗೆದ್ದರು ಚೊಚ್ಚಲ ಐಪಿಎಲ್‌ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ.

ಆರ್‌ಸಿಬಿ ಪ್ರತೀ ಕೂಟದಲ್ಲೂ ಅಚ್ಚರಿಯ ಹಾಗೂ ಕಳಪೆ ಪ್ರದರ್ಶನ ನೀಡುವುದು ಮಾಮೂಲು. ಒಮ್ಮೆ ಇನ್ನೂರರ ಗಡಿ ದಾಟುತ್ತದೆ, ಇನ್ನೊಮ್ಮೆ ನೂರರೊಳಗೆ ಗಂಟುಮೂಟೆ ಕಟ್ಟುತ್ತದೆ. ಆದರೆ ಈ ಬಾರಿಯ ಟೂರ್ನಿಯಲ್ಲಿ ಆರ್‌ಸಿಬಿ ಆಡಿದ ಆಟ, ಫೈನಲ್‌ ತನಕ ಸಾಗಿಬಂದ ರೀತಿಯನ್ನು ಗಮನಿಸಿದಾಗ ಈ ಸಲ ಕಪ್‌ ನಮ್ದೇ ಅಭಿಯಾನ ಸಾಕಾರಗೊಳ್ಳಬಹುದೆಂಬ ನಿರೀಕ್ಷೆ ದಟ್ಟವಾಗಿದೆ. ಜತೆಗೆ ಅದೃಷ್ಟ ಕೂಡ ಕೈ ಹಿಡಿಯಬೇಕು.

ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು

ಆರ್‌ಸಿಬಿ ಪ್ರತಿ ಆವೃತ್ತಿಯಲ್ಲಿಯೂ ಜೋಶ್‌ನಿಂದ ಆಡುತ್ತದೆ. ಆದರೆ ಈ ಜೋಶ್‌ ಫೈನಲ್‌ ಪಂದ್ಯಕ್ಕೆ ಬಂದಾಗ ಮರೆಯಾಗುತ್ತದೆ. ಇದಕ್ಕೆ ಈ ಹಿಂದಿನ ಮೂರು ಫೈನಲ್‌ ಪಂದ್ಯಗಳೇ ಸೋಲು ಉತ್ತಮ ನಿದರ್ಶನ. ಫೈನಲ್‌ ತನಕ ಉತ್ತಮವಾಗಿ ಆಡಿದ ಆಟಗಾರರೆಲ್ಲ ಫೈನಲ್‌ನಲ್ಲಿ ಆತ್ಮವಿಶ್ವಾಸ ಕಳೆದುಕೊಂಡಂತೆ ಆಡುತ್ತಾರೆ. ಆದರೆ ಈ ಬಾರಿ ಆತ್ಮವಿಶ್ವಾಸದಿಂದಲೇ ಮುನ್ನುಗ್ಗಿ ಪಂದ್ಯವನ್ನು ಗೆಲ್ಲಬೇಕು. ಕಳೆದ 18 ವರ್ಷಗಳಿಂದ ತಂಡದ ಕಪ್‌ ಗೆಲುವಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿರುವ ವಿರಾಟ್‌ ಕೊಹ್ಲಿಗಾದರೂ ಆರ್‌ಸಿಬಿ ಈ ಬಾರಿ ಕಪ್‌ ಗೆಲ್ಲಲೇ ಬೇಕು.

ಸದ್ಯ ತಂಡದಲ್ಲಿ ಯಾವುದೇ ಕೊರತೆಗಳು ಕಾಣಿಸಿಲ್ಲ. ಚಾಂಪಿಯನ್‌ ಆಟಗಾರ ಜೋಶ್‌ ಹ್ಯಾಜಲ್‌ವುಡ್‌, ಫಿಲ್‌ ಸಾಲ್ಟ್‌, ಕೊಹ್ಲಿ, ಜಿತೇಶ್‌ ಶರ್ಮ ಇವರೆಲ್ಲ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಟಿಮ್‌ ಡೇವಿಡ್‌ ಕೂಡ ಫಿಟ್‌ ಆಗಿದ್ದು ಫೈನಲ್‌ ಆಡುವ ನಿರೀಕ್ಷೆ ಇದೆ. ಅನುಭವಿ ಸ್ವಿಂಗ್‌ ಮಾಸ್ಟರ್‌ ಭುವನೇಶ್ವರ್‌ ಕುಮಾರ್‌, ಯಶ್‌ ದಯಾಳ್‌ ತಮ್ಮ ಬತ್ತಳಿಕೆಯಲ್ಲಿರುವ, ಇದುವರೆಗೂ ಪ್ರಯೋಗಿಸ ಸ್ಫೆಲ್‌ ಇಲ್ಲಿ ಪ್ರಯೋಗಿಸಬೇಕು.



ಅಯ್ಯರ್‌-ಪಾಂಟಿಂಗ್‌ ಯಶಸ್ವಿ ಜೋಡಿ

ರಿಕಿ ಪಾಂಟಿಂಗ್‌ ಹಾಗೂ ಶ್ರೇಯಸ್‌ ಅಯ್ಯರ್‌ ಐಪಿಎಲ್‌ನ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದಾಗಿದೆ. ಅದರಲ್ಲೂ ಫೈನಲ್‌ ಪಂದ್ಯಗಳನ್ನು ಹೇಗೆ ಗೆಲ್ಲಬೇಕು, ಏನೆಲ್ಲ ರಣತಂತ್ರವನ್ನು ರೂಪಿಸಬೇಕು, ಎದುರಾಳಿಯ ಯಾವ ಆಟಗಾರನನ್ನು ಟಾರ್ಗೆಟ್‌ ಮಾಡಬೇಕು ಎಂಬೆಲ್ಲ ಗೆಲುವಿನ ಸೂತ್ರಗಳನ್ನು ಆಸ್ಟ್ರೇಲಿಯದ ಪಾಟಿಂಗ್‌ಗಿಂತ ಬಲ್ಲ ಇನ್ನೊಬ್ಬರಿಲ್ಲ. ಇನ್ನೊಂದೆಡೆ ಪಂದ್ಯವನ್ನು ಗೆಲುವ ಜಿದ್ದಿಗೆ ಬಿದ್ದರೆ ಅಯ್ಯರ್‌ ಅವರನ್ನು ತಡೆದು ನಿಲ್ಲಿಸುವುದು ಕಷ್ಟ. ಇದಕ್ಕೆ ಮುಂಬೈ ವಿರುದ್ಧದ ಕ್ವಾಲಿಫೈಯರ್‌ ಪಂದ್ಯವೇ ಸಾಕ್ಷಿ. ಇನ್ನೇನು ತಂಡ ಸೋಲುತ್ತದೆ ಎನ್ನುವ ಹಂತದಲ್ಲಿ ಸಿಡಿದು ನಿಂತ ಅಯ್ಯರ್‌ ಅಜೇಯ 87 ರನ್‌ ಬಾರಿಸಿ ತಂಡಕ್ಕೆ ಅಮೋಘ ಗೆಲುವು ತಂದು ಕೊಟ್ಟಿದ್ದರು.

ಪಂಜಾಬ್‌, ಆರ್‌ಸಿಬಿ ಎದುರು ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಸೋತಿದ್ದರೂ ಬಲಿಷ್ಠವಾಗಿದೆ. ಜೋಸ್‌ ಇಂಗ್ಲಿಸ್‌, ಮಾರ್ಕಸ್‌ ಸ್ಟೋಯಿನಿಸ್‌, ನೆಹಾಲ್‌ ವಧೇರಾ, ಆರಂಭಿಕರಾದ ಪ್ರಭ್‌ಸಿಮ್ರಾನ್‌ ಸಿಂಗ್‌, ಪ್ರಿಯಾಂಶ್ ಆರ್ಯ ಇವರೆಲ್ಲೆ ಸಿಡಿದು ನಿಂತರೆ ಎದುರಾಳಿ ಬೌಲರ್‌ಗಳು ದಂಡಿಸಿಕೊಳ್ಳುವುದರಲ್ಲಿ ಅನುಮಾನವೇ ಬೇಡ.