ಬೆಂಗಳೂರು, ಮಾ.23: ಬಹುನಿರೀಕ್ಷಿತ ಐಪಿಎಲ್‌ನ 19ನೇ(RCB practice match) ಆವೃತ್ತಿಯ ಟೂರ್ನಿ ಮಾ.28ಕ್ಕೆ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ. ಇದಕ್ಕಾಗಿ ಹಾಲಿ ಚಾಂಪಿಯನ್ ಆರ್‌ಸಿಬಿ ಭರ್ಜರಿ ಅಭ್ಯಾಸ ನಡೆಸಿದೆ. ಮಾರ್ಚ್ 22 ರ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ತಂಡದ ಮೊದಲ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli), ಜಿತೇಶ್ ಶರ್ಮಾ, ಟಿಮ್ ಡೇವಿಡ್ ಮತ್ತು ವೆಂಕಟೇಶ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು.
ಕೃನಾಲ್ ಪಾಂಡ್ಯ ಮತ್ತು ವೆಂಕಟೇಶ್ ಅಯ್ಯರ್ ನಾಯಕತ್ವದಲ್ಲಿ ಎರಡು ತಂಡಗಳಾಗಿ ವಿಂಗಡಿಸಲಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವೆಂಕಟೇಶ್ ಸಾರಥ್ಯದ ತಂಡ 7 ವಿಕೆಟ್‌ಗೆ 234 ರನ್ ಪೇರಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಕೃನಾಲ್ ತಂಡ 247 ರನ್ ಬಾರಿಸಿ ಗೆಲವು ತನ್ನದಾಗಿಸಿಕೊಂಡಿತು.
ಸೋಮವಾರ ಬೆಳಿಗ್ಗೆ ಆರ್‌ಸಿಬಿ ತಮ್ಮ ಅಭ್ಯಾಸ ಅವಧಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಪಂದ್ಯದ ಪ್ರಮುಖ ಕ್ಷಣಗಳನ್ನು ಸೆರೆಹಿಡಿದಿದೆ. ವೀಡಿಯೊದಲ್ಲಿ, ಆಲ್‌ರೌಂಡರ್ ಕೃಣಾಲ್ ಪಾಂಡ್ಯ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ತಂಡದ ಹಲವಾರು ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದಾರೆ ಎಂದು ಹೇಳಿದ್ದಾರೆ.
"ಇದು ಉತ್ತಮ ಅಭ್ಯಾಸ ಪಂದ್ಯವಾಗಿತ್ತು. ಎಲ್ಲರೂ ಉತ್ತಮ ಹೊಡೆತಗಳನ್ನು ನೀಡಿದರು. ಭುವನೇಶ್ವರ್ ಕುಮಾರ್, ಅಭಿನಂದನ್ (ಸಿಂಗ್) ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಿದರು. ಮಂಗೇಶ್ (ಯಾದವ್) ಕೂಡ ಉತ್ತಮ ಬೌಲಿಂಗ್ ನಡೆಸಿದರು. ಬ್ಯಾಟ್ಸ್‌ಮನ್‌ಗಳಲ್ಲಿ, ಜಿತೇಶ್, ಟಿಮ್ ಡೇವಿಡ್, ವೆಂಕಟೇಶ್ ಮತ್ತು ವಿರಾಟ್ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ವಿರಾಟ್ ಅವರ ಕೆಲವು ಹೊಡೆತಗಳು ಅದ್ಭುತವಾಗಿದ್ದವು. ಅವರು ಉತ್ತಮವಾಗಿ ಕಾಣುತ್ತಿದ್ದಾರೆ" ಎಂದು ಕೃನಾಲ್ ಪಾಂಡ್ಯ ಹೇಳಿದರು.
ಜಿತೇಶ್ ಶರ್ಮಾ ಕೇವಲ 37 ಎಸೆತಗಳಲ್ಲಿ 81 ರನ್ ಗಳಿಸಿದರು. ಜಿತೇಶ್ ಜೊತೆಗೆ, ಆಸ್ಟ್ರೇಲಿಯಾದ ಟಿಮ್ ಡೇವಿಡ್ (14 ಎಸೆತಗಳಲ್ಲಿ 36) ಮತ್ತು ವೆಂಕಟೇಶ್ ಅಯ್ಯರ್ (16 ಎಸೆತಗಳಲ್ಲಿ 30) ಕೂಡ ಬ್ಯಾಟಿಂಗ್‌ನಲ್ಲಿ ಪ್ರಭಾವ ಬೀರಿದರು. ವಿರಾಟ್ ಕೊಹ್ಲಿ 12 ಎಸೆತಗಳಲ್ಲಿ 29 ರನ್ ಗಳಿಸಿದರು.
ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊಸ ನಾಯಕನ ಮುನ್ಸೂಚನೆ!
ಐಪಿಎಲ್ 2025 ರ ಫೈನಲ್‌ನಲ್ಲಿ ಆರ್‌ಸಿಬಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿತು. ಶನಿವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮ್ಮ ಅಭಿಯಾನವನ್ನು ಆರಂಭಿಸಲಿರುವ ಅವರು, ಆ ಬಳಿಕ ಗುವಾಹಟಿ ಮತ್ತು ಮುಂಬೈನಲ್ಲಿ ಕ್ರಮವಾಗಿ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಎದುರಿಸಲಿದ್ದಾರೆ.