ಹೈದರಾಬಾದ್: ಇಶಾನ್ ಕಿಶನ್(106*) ಬಾರಿಸಿದ ಸೊಗಸಾದ ಅಜೇಯ ಶತಕ ಮತ್ತು ಟ್ರಾವಿಸ್ ಹೆಡ್(67) ಅವರ ಅರ್ಧಶತಕದ ನೆರವಿನಿಂದ ಸನ್‌ರೈಸರ್ ಹೈದರಾಬಾದ್ ತಂಡವು ಭಾನುವಾರದ ಮೊದಲ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ 44 ರನ್‌ಗಳಿಂದ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಕಳೆದ ಬಾರಿ ತನ್ನ ಆಕ್ರಮಣಕಾರಿ ಆಟದ ಮೂಲಕವೇ ಎದುರಾಳಿ ತಂಡಗಳ ನಿದ್ದೆಗೆಡಿಸಿದ್ದ ಸನ್‌ರೈಸರ್ಸ್ ಹೈದರಾಬಾದ್ ಈ ಬಾರಿಯೂ ತಾನಾಡಿದ ಮೊದಲ ಪಂದ್ಯದಲ್ಲೇ ಸ್ಪೋಟಕ ಆಟವಾಡುವ ಮೂಲಕ ಎದುರಾಳಿ ತಂಡಕ್ಕೆ ಎಚ್ಚರಿಕೆ ರವಾನಿಸಿದೆ.
ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್ ತಂಡ, ಸಿಡಿಲಬ್ಬರದ ಬ್ಯಾಟಿಂಗ್ ಸಾಹಸದಿಂದ ರಾಜಸ್ಥಾನ್ ಮೇಲೆರಗಿ ಹೋಗಿ 6 ವಿಕೆಟಿಗೆ 286 ರನ್ ರಾಶಿ ಹಾಕಿತು. ಜವಾಬಿತ್ತ ರಾಜಸ್ಥಾನ್ ತಂಡ ಒಂದು ಹಂತದವರೆಗೆ ದಿಟ್ಟ ಬ್ಯಾಟಿಂಗ್ ನಡೆಸಿತ್ತಾದರೂ ಅಂತಿಮವಾಗಿ 6 ವಿಕೆಟ್‌ಗೆ 242 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಉಭಯ ತಂಡಗಳ ಬ್ಯಾಟಿಂಗ್ ಅಬ್ಬರದಲ್ಲಿ ಒಟ್ಟು 528 ದಾಖಲಾಯಿತು. ಇದು ಎಡರನೇ ಅತ್ಯಧಿಕ ಗಳಿಕೆ.
ಸಂಜು-ಜುರೇಲ್ ಹೋರಾಟ
ಬೃಹತ್ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ್ ತಂಡ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಪಂಜಾಬ್‌ನ ವೇಗಿ ಸಿಮರ್ಜೀತ್ ಸಿಂಗ್ ಘಾತಕ ಬೌಲಿಂಗ್ ಮೂಲಕ ಹಂಗಾಮಿ ನಾಯಕ ರಿಯಾನ್ ಪರಾಗ್(4) ಮತ್ತು ಯಶಸ್ವಿ ಜೈಸ್ವಾಲ್(1) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಬಳಿಕ ಬಂದ ನಿತೀಶ್ ರಾಣ(4) ಕೂಡ ಒಂದಂಕಿಗೆ ಸೀಮಿತರಾದರು.
50 ರನ್‌ಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಮತ್ತು ಧ್ರುವ್ ಜುರೆಲ್ ಆಸರೆಯಾಗಿ ಕೆಲ ಕಾಲ ಅಬ್ಬರ ಬ್ಯಾಟಿಂಗ್ ಮೂಲಕ ಪ್ರತಿ ಹೋರಾಟವೊಂದನ್ನು ಜಾರಿಯಲ್ಲಿರಿಸಿದರು. ಉಭಯ ಆಟಗಾರರು ಕೂಡ ಅರ್ಧಶತಕ ಬಾರಿಸಿ ಮಿಂಚಿದರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ಈ ಜೋಡಿ 4 ವಿಕೆಟ್‌ಗೆ 111 ರನ್ ಒಟ್ಟುಗೂಡಿಸಿದರು.
ಸಂಜು 66 (7 ಬೌಂಡರಿ, 4 ಸಿಕ್ಸರ್) ರನ್ ಗಳಿಸಿದ ವೇಳೆ ವಿಕೆಟ್ ಕಳೆದುಕೊಂಡರು. ಈ ವಿಕೆಟ್ ಬಿದ್ದ 2 ಎಸೆತಗಳ ಅಂತರದಲ್ಲಿ ಧ್ರುವ್ ಜುರೆಲ್ ವಿಕೆಟ್ ಕೂಡ ಪತನಗೊಂಡಿತು. 35 ಎಸೆತ ಎದುರಿಸಿದ ಜುರೆಲ್ 5 ಬೌಂಡರಿ ಮತ್ತು 6 ಸಿಕ್ಸರ್ ಸಿಡಿಸಿ 70 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಶಿಮ್ರಾನ್ ಹೆಟ್‌ಮೇರ್(42) ರನ್ ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಹೈದರಾಬಾದ್ ಪರ ಹರ್ಷಲ್ ಪಟೇಲ್ ಮತ್ತು ಸಿಮರ್ಜೀತ್ ಸಿಂಗ್ ತಲಾ ಎರಡು ವಿಕೆಟ್ ಪಡೆದರು.
ಇಶಾನ್ ಚೊಚ್ಚಲ ಶತಕ ಸಂಭ್ರಮ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಹೈದರಾಬಾದ್ ಅಬ್ಬರದ ಬ್ಯಾಟಿಂಗ್ ಮೂಲಕ ತವರಿನ ಅಭಿಮಾನಿಗಳನ್ನು ರಂಜಿಸಿದರು. ಅಭಿಷೇಕ್ ಶರ್ಮ(24) ವಿಕೆಟ್ ಕಳೆದುಕೊಂಡ ಬಳಿಕ ಜತೆಯಾದ ಇನ್‌ಫಾರ್ಮ್ ಓಪನರ್ ಟ್ರಾವಿಸ್ ಹೆಡ್ ಮತ್ತು 3ನೇ ಕ್ರಮಾಂಕದಲ್ಲಿ ಬಂದ ಇಶಾನ್ ಕಿಶನ್ ಸೇರಿಕೊಂಡು ರಾಜಸ್ಥಾನ್ ಬೌಲರ್‌ಗಳನ್ನು ಭರ್ಜರಿಯಾಗಿ ದಂಡಿಸತೊಡಗಿದರು. ಇಶಾನ್ ಅವರಂತೂ ಭಾರೀ ಜೋಶ್‌ನಲ್ಲಿದ್ದರು. ಜೋಫ್ರ ಆರ್ಚರ್, ಸಂದೀಪ್ ಶರ್ಮ, ಮಹೀಶ್ ತೀಕ್ಷಣ ಯಾರಿಗೂ ರಿಯಾಯಿತಿ ತೋರಲಿಲ್ಲ. ಎಲ್ಲರಿಗೂ ಸಿಕ್ಸರ್ ರುಚಿ ತೋರಿಸಿದರು. ಇವರ ಈ ಅಬ್ಬರ ಬ್ಯಾಟಿಂಗ್‌ನಿಂದ 14.1 ಓವರ್‌ನಲ್ಲಿ ತಂಡ 200 ರನ್ ಕಲೆ ಹಾಕಿತು.
ಇದನ್ನೂ ಓದಿ MI vs CSK: ಟಾಸ್ ಗೆದ್ದ ಚೆನ್ನೈ; ಮುಂಬೈಗೆ ಬ್ಯಾಟಿಂಗ್ ಆಹ್ವಾನ
ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ಜೋಡಿ ದ್ವಿತೀಯ ವಿಕೆಟ್‌ಗೆ 85 ರನ್ ಒಟ್ಟುಗೂಡಿಸಿದರು. ಟ್ರಾವಿಸ್ ಹೆಡ್ 31 ಎಸೆತಗಳಿಂದ 9 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 67 ರನ್ ಬಾರಿಸಿದರು. ಈ ವಿಕೆಟ್ ತುಷಾರ್ ದೇಶ್‌ಪಾಂಡೆ ಪಾಲಾಯಿತು. ಹೆಡ್ ವಿಕೆಟ್ ಬಿದ್ದರೂ ಕೂಡ ತಂಡದ ರನ್ ಗಳಿಕೆಗೆ ಯಾವುದೇ ಹಿನ್ನಡೆಯಾಗಲಿಲ್ಲ. ಬಳಿಕ ಬಂದ ನಿತೀಶ್ ರೆಡ್ಡಿ(30), ಹೆನ್ರಿಚ್ ಕ್ಲಾಸೆನ್(37) ರನ್ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ಕೊಡುಗೆ ಸಲ್ಲಿಸಿದರು. 45 ಎಸೆತಗಳಿಂದ ಚೊಚ್ಚಲ ಐಪಿಎಲ್ ಶತಕ ಬಾರಿಸಿದ ಇಶಾನ್ ಕಿಶನ್ ಅಂತಿಮವಾಗಿ 47 ಎಸೆತಗಳಿಂದ 11 ಬೌಂಡರಿ ಮತ್ತು 6 ಸೊಗಸಾದ ಸಿಕ್ಸರ್ ನೆರವಿನಿಂದ 106 ರನ್ ಬಾರಿಸಿ ಅಜೇಯರಾಗಿ ಉಳಿದರು.
ರಾಜಸ್ಥಾನ್ ಪರ ನಿತೀಶ್ ರಾಣಾ(9 ರನ್) ಹೊರತುಪಡಿಸಿ ಉಳಿದೆಲ್ಲ ಬೌಲರ್‌ಗಳು ಸರಿಯಾಗಿ ದಂಡಿಸಿಕೊಂಡರು. ಜೋರ್ಫ ಆರ್ಚರ್ 76 ರನ್ ಬಿಟ್ಟುಕೊಟ್ಟು ವಿಕೆಟ್ ಲೆಸ್ ಎನಿಸಿಕೊಂಡರು. ಉಳಿದಂತೆ ತೀಕ್ಷಣ 52, ಫಜಲ್ಹಕ್ ಫಾರೂಕಿ 49, ಸಂದೀಪ್ ಶರ್ಮ 51 ರನ್ ಬಿಟ್ಟುಕೊಟ್ಟು ದುಬಾರಿಯಾದರು.