ಲಖನೌ, ಎ.22: ಬುಧವಾರ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್(RR vs LSG) ವಿರುದ್ಧ 40 ರನ್‌ಗಳ ಜಯ ಸಾಧಿಸುವಲ್ಲಿ ನಿರ್ಣಾಯಕ ಆಲ್‌ರೌಂಡ್ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ(Ravindra Jadeja) ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗುಜರಾತ್ ಶಿಕ್ಷಣ ಸಚಿವರಿಗೆ ಅರ್ಪಿಸುವ ಮೂಲಕ ಗಮನ ಸೆಳೆದರು.
ತಂಡ ಸಂಕಷ್ಟದಲ್ಲಿದ್ದಾಗ ಜಡೇಜಾ ಜವಾಬ್ದಾರಿಯುವ ಬ್ಯಾಟಿಂಗ್ ನಡೆಸುವ ಮೂಲಕ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಒತ್ತಡದ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ಅವರು 29 ಎಸೆತಗಳಲ್ಲಿ ಅಜೇಯ 43 ರನ್ ಗಳಿಸಿದರು. ಬೌಲಿಂಗ್‌ನಲ್ಲಿಯೂ ಒಂದು ವಿಕೆಟ್ ಕಿತ್ತರು.
ಪಂದ್ಯಶ್ರೇಷ್ಠ ಪ್ರಶಸ್ತಿ ಬಳಿಕ ಮಾತನಾಡಿದ ಜಡೇಜಾ, "ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದು ಖುಷಿ ತಂದಿದೆ. ಗುಜರಾತ್ ಶಿಕ್ಷಣ ಸಚಿವರಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ. ನಾನು ಚೆನ್ನಾಗಿ ಆಡುತ್ತೇನೆ ಎಂದು ಅವರು ನಿನ್ನೆ ಹೇಳಿದ್ದರು. ಅದರಂತೆ ನಾನು ಕೂಡ ಮಾಡಿದೆ" ಎಂದು ಹೇಳಿದರು.
ಸಾರಸ್ಯವೆಂದರೆ ಜಡೇಜಾ ಉಲ್ಲೇಖಿಸಿದ ಗುಜರಾತ್ ಶಿಕ್ಷಣ ಸಚಿವರು ಅವರ ಪತ್ನಿ ರಿವಾಬಾ ಜಡೇಜಾ, ಅವರು ಪ್ರಸ್ತುತ ಗುಜರಾತ್ ಸರ್ಕಾರದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ರಾಜ್ಯ ಸಚಿವೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ನೇತೃತ್ವದ ಸಂಪುಟ ಪುನರ್ರಚನೆಯ ನಂತರ ಅವರನ್ನು ಈ ಹುದ್ದೆಗೆ ನೇಮಿಸಲಾಯಿತು.
ಭರ್ಜರಿ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ರಾಜಸ್ಥಾನ್
ರಿವಾಬಾ ಅವರ ರಾಜಕೀಯ ಪ್ರಯಾಣದಲ್ಲಿ ಜಡೇಜಾ ಅವರು ನಿಕಟವಾಗಿ ತೊಡಗಿಸಿಕೊಂಡಿದ್ದಾರೆ. 2022 ರ ಗುಜರಾತ್ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅವರು ಪತ್ನಿ ಪರವಾಗಿ ಸಕ್ರಿಯವಾಗಿ ಪ್ರಚಾರ ಮಾಡಿದ್ದರು. ರಿವಾಬಾ ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಇದು ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ಅವರ ಮಹತ್ವದ ಹೆಜ್ಜೆಯಾಗಿದೆ.
ಪಂದ್ಯ ಗೆದ್ದು ಎರಡನೇ ಸ್ಥಾನಕ್ಕೇರಿದ ರಾಜಸ್ಥಾನ್
ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 40 ರನ್‌ಗಳಿಂದ ಸೋಲಿಸುವ ಮೂಲಕ ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಎರಡನೇ ಸ್ಥಾನಕ್ಕೇರಿದೆ. ಆಡಿದ 7 ಪಂದ್ಯಗಳಿಂದ 5 ಪಂದ್ಯ ಗೆದ್ದು 10 ಅಂಕ ಕಲೆಹಾಕಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 159 ರನ್ ಪೇರಿಸಿತು. ಸಾಧಾರಣ ಮೊತ್ತ ಬೆನ್ನಟ್ಟಿದ ಲಖನೌ ತಂಡವು ಬ್ಯಾಟಿಂಗ್‌ನಲ್ಲಿ ಮತ್ತೆ ವೈಫಲ್ಯ ಅನುಭವಿಸಿತು. ನಿರಂತರವಾಗಿ ವಿಕೆಟ್ ಕಳೆದುಕೊಂಡ ರಿಷಭ್ ಪಂತ್ ಪಡೆ 18 ಓವರ್‌ಗಳಲ್ಲಿ 119 ರನ್‌ಗಳಿಗೆ ಸರ್ವಪತನವಾಯಿತು. ಅದರೊಂದಿಗೆ, ಹಾಲಿ ಲೀಗ್‌ನಲ್ಲಿ ಸತತ ನಾಲ್ಕನೇ ಸೋಲು ಅನುಭವಿಸಿತು.