ಮ್ಯಾಂಚೆಸ್ಟರ್: ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ 22 ರನ್‌ಗಳ ಸೋಲು ಕಂಡಿದ್ದ ಭಾರತ ತಂಡವು ನಾಲ್ಕನೇ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಸರಣಿಯನ್ನು ಸಮಬಲಗೊಳಿಸುವ ವಿಶ್ವಾಸದಲ್ಲಿದೆ. ನಾಲ್ಕನೇ(IND vs ENG 4th Test) ಪಂದ್ಯ ಜುಲೈ 23 ರಿಂದ 27 ರವರೆಗೆ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಪ್ರಧಾನ ವೇಗಿ ಜಸ್‌ಪ್ರೀತ್ ಬುಮ್ರಾ(Jasprit Bumrah)ಗೆ ವಿಶ್ರಾಂತಿ ನೀಡುವ ಜತೆಗೆ ಆಡುವ ಬಳಗದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆ ಇದೆ.
ಜಸ್‌ಪ್ರೀತ್ ಬುಮ್ರಾ ಅವರನ್ನು ಈ ಸರಣಿಯ ಮೂರೇ ಟೆಸ್ಟ್ ಪಂದ್ಯಗಳಿಗೆ ಮೀಸಲಿರಿಸುವುದಾಗಿ ತಂಡ ಪ್ರಕಟಕ್ಕೂ ಮುನ್ನವೇ ನಿರ್ಧರಿಸಲಾಗತ್ತು. ಅದರಂತೆ ಅವು ಮೊದಲ ಟೆಸ್ಟ್ ಬಳಿಕ ದ್ವಿತೀಯ ಟೆಸ್ಟ್‌ನಲ್ಲಿ ವಿಶ್ರಾಂತಿ ಪಡೆದಿದ್ದರು. ಮೂರನೇ ಪಂದ್ಯದಲ್ಲಿ ಮತ್ತೆ ಆಡಿದ್ದರು. ಅದರಂತೆ ಅವರನ್ನು 4ನೇ ಪಂದ್ಯದಿಂದ ಹೊರಗುಳಿಸಿ, ಅಂತಿಮ ಟೆಸ್ಟ್‌ನಲ್ಲಿ ಆಡಿಸುವ ಸಾಧ್ಯತೆ ಇದೆ.
ಬುಮ್ರಾ ವಿಶ್ರಾಂತಿ ಪಡೆದರೆ ಈ ಬಾರಿ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಅವಕಾಶ ಸಿಗುವುದು ಕಷ್ಟ. ಏಕೆಂದರೆ ಅವರು ಆಡಿದ ಎರಡು ಟೆಸ್ಟ್‌ನಲ್ಲಿ ನಿರೀಕ್ಷಿತ ಬೌಲಿಂಗ್ ನಡೆಸಿರಲಿಲ್ಲ. ಹೀಗಾಗಿ ಎಡಗೈ ವೇಗಿ ಅರ್ಷದೀಪ್ ಸಿಂಗ್ ಟೆಸ್ಟ್‌ಕ್ಯಾಪ್ ಧರಿಸುವ ಸಾಧ್ಯತೆಯೊಂದಿದೆ.
ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಕೂಡ ಮ್ಯಾಂಚೆಸ್ಟರ್‌ನಲ್ಲಿ ನಡೆಯುವ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ. ಲಾರ್ಡ್ಸ್ ಟೆಸ್ಟ್‌ನ ಮೊದಲ ದಿನದಾಟದ ವೇಳೆ ಪಂತ್ ಬೆರಳಿಗೆ ಗಾಯವಾಗಿತ್ತು. ಇದರ ಪರಿಣಾಮವಾಗಿ, ಮೊದಲ ಇನ್ನಿಂಗ್ಸ್‌ನಲ್ಲಿ 34 ಓವರ್‌ಗಳ ನಂತರ ಅವರು ಕೀಪಿಂಗ್ ಮಾಡಲಿಲ್ಲ. ಧ್ರುವ್ ಜುರೆಲ್ ಕೀಪಿಂಗ್ ನಡೆದಿದ್ದರು. ಪಂತ್ ಗಾಯದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಅವರು ಹೊರಗುಳಿದರೆ ಧ್ರುವ್ ಜುರೆಲ್ ಆಡುವ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ.
ಇನ್ನೊಂದೆಡೆ ಆಡಿದ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿರುವ ಕನ್ನಡಿಗ ಕರುಣ್ ನಾಯರ್ ಬದಲಿದೆ ಸಾಯಿ ಸುದರ್ಶನ್‌ಗೆ ಅವಕಾಶ ನೀಡಲು ಆಯ್ಕೆ ಸಮಿತಿ ಯೋಚಿಸಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ ENG-W vs IND-W: ಮಹಿಳೆಯರ ಏಕದಿನ: ಭಾರತ ತಂಡದ ಶುಭಾರಂಭ
ನಾಲ್ಕನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ
ಯಶಸ್ವಿ ಜೈಸ್ವಾಲ್, ಕೆ.ಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿ.ಕೀ.), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.