ವೆಲ್ಲಿಂಗ್ಟನ್, ನ.16: ನ್ಯೂಜಿಲೆಂಡ್ ಪ್ರವಾಸದ ಏಕದಿನ ಮತ್ತು ಟಿ20 ಸರಣಿ ಮುಗಿದಿದ್ದು ಇದೀಗ ಭಾರತೀಯ ಪುರುಷರ ಕ್ರಿಕೆಟ್ ತಂಡವು ಆತಿಥೇಯ ತಂಡದ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಡಲಿದೆ. ಈ ಸರಣಿಯು ಗುರುವಾರ ಆರಂಭವಾಗಲಿದೆ.
ಈ ಸರಣಿಯ ಮೊದಲ ಪಂದ್ಯವು ನವೆಂಬರ್ 19 ರಿಂದ 23 ರವರೆಗೆ ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ನಲ್ಲಿ ನಡೆಯಲಿದೆ. ಹಾಗೆಯೇ, ಎರಡನೇ ಪಂದ್ಯವು ನವೆಂಬರ್ 27 ರಿಂದ ಡಿಸೆಂಬರ್ 1 ರವರೆಗೆ ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ನಲ್ಲಿ ನಡೆಯಲಿದೆ.
ಭಾರತವು ಇಲ್ಲಿಯವರೆಗೆ ನ್ಯೂಜಿಲೆಂಡ್ನಲ್ಲಿ ಕೇವಲ ಮೂರು ಟೆಸ್ಟ್ ಸರಣಿಗಳನ್ನು ಮಾತ್ರ ಗೆದ್ದಿದೆ. ಆದರೆ ಈ ಬಾರಿ, ಭಾರತವು ಎರಡೂ ಪಂದ್ಯಗಳನ್ನು ಗೆದ್ದು ಸರಣಿ ಗೆಲ್ಲಲೇಬೇಕಿದೆ. ಇಲ್ಲದಿದ್ದರೆ, 2025-27ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ಮತ್ತು ಲಂಡನ್ನ 'ದಿ ಓವಲ್'ನಲ್ಲಿ ನಡೆಯಲಿರುವ 2027ರ WTC ಫೈನಲ್ಗೆ ಅರ್ಹತೆ ಪಡೆಯುವ ಭಾರತದ ಅವಕಾಶಗಳಿಗೆ ಭಾರಿ ಹಿನ್ನಡೆಯಾಗಲಿದೆ.
ಪ್ರಸ್ತುತ 2026ನೇ ಕ್ಯಾಲೆಂಡರ್ ವರ್ಷದಲ್ಲಿ ಭಾರತ ಇದುವರೆಗೆ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಎರಡರಲ್ಲಿ ಜಯ ಸಾಧಿಸಿದೆ. ಇತ್ತೀಚೆಗೆ ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತು.
ನ್ಯೂಜಿಲೆಂಡ್ನಲ್ಲಿ ನಡೆಯಲಿರುವ ಸರಣಿಗಾಗಿ ಭಾರತವು ತನ್ನ ಅತ್ಯಂತ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಆರು ಮಂದಿ ವಿಶೇಷ ವೇಗದ ಬೌಲರ್ಗಳಲ್ಲದೆ, ವೇಗದ ಬೌಲಿಂಗ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಕೂಡ ಸ್ಥಾನ ಪಡೆದಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮುಂದಿನ ಏಕದಿನ ಸರಣಿ ಆಡುವುದು ಯಾವಾಗ?
ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಆಯ್ಕೆಯಾಗಿರುವ ಭಾರತೀಯ ತಂಡವು ಸಮತೋಲಿತವಾಗಿ ಕಂಡುಬರುತ್ತಿದ್ದರೂ, ಗುರುವಾರ ಆಟ ಆರಂಭವಾದಾಗ ನಿಜವಾದ ಪರೀಕ್ಷೆ ಎದುರಾಗಲಿದೆ. ಏಕೆಂದರೆ, ಈ ಪ್ರವಾಸಕ್ಕಾಗಿ ಆಯ್ಕೆಯಾದ 16 ಆಟಗಾರರ ಪೈಕಿ ಕೇವಲ ಮೂವರು ಮಾತ್ರ ಈ ಹಿಂದೆ ನ್ಯೂಜಿಲೆಂಡ್ನಲ್ಲಿ ಟೆಸ್ಟ್ ಪಂದ್ಯ ಆಡಿದ ಅನುಭವವನ್ನು ಹೊಂದಿದ್ದಾರೆ.
ಜಸ್ಪ್ರೀತ್ ಬುಮ್ರಾ, ಆಕಾಶ್ ದೀಪ್, ಅಂಶುಲ್ ಕಾಂಬೋಜ್, ಸಾಯಿ ಸುದರ್ಶನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ ತಂಡಕ್ಕೆ ಮರಳಿದ್ದಾರೆ. ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ರಿಷಭ್ ಪಂತ್, ಧ್ರುವ ಜುರೆಲ್, ರವೀಂದ್ರ ಜಡೇಜಾ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಗುರ್ನೂರ್ ಬ್ರಾರ್ ತಂಡದಲ್ಲಿದ್ದಾರೆ.
ಕಳೆದ ಶ್ರೀಲಂಕಾ ಸರಣಿಯಲ್ಲಿದ್ದ 10 ಆಟಗಾರರು, ನ್ಯೂಜಿಲೆಂಡ್ ವಿರುದ್ಧದ ಸರಣಿಗಾಗಿ ಭಾರತದ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ 10 ಆಟಗಾರರ ಪೈಕಿ, ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ಮಾತ್ರ ಈ ಹಿಂದೆ ನ್ಯೂಜಿಲೆಂಡ್ನಲ್ಲಿ ಭಾರತದ ಪರ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ.
ಮೊದಲ ಟೆಸ್ಟ್ಗೆ ಭಾರತ ಸಂಭಾವ್ಯ ಆಡುವ ಬಳಗ
ಯಶಸ್ವಿ ಜೈಸ್ವಾಲ್, ಕೆ.ಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಆಕಾಶ್ ದೀಪ್/ಅನ್ಶುಲ್ ಕಾಂಬೋಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ/ಗುರ್ನೂರ್ ಬ್ರಾರ್.