*ಕರ್ನಾಟಕದ ಇಬ್ರಾಹಿಂಗೆ ‘ಅತ್ಯುತ್ತಮ ಅಟ್ಯಾಕರ್’, ಅನಿಕೇತ್‌ಗೆ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಗೌರವ
ಬೆಂಗಳೂರು: ಒಡಿಶಾದಲ್ಲಿ ನಡೆದ **AM/NS ಇಂಡಿಯಾ ಜೂನಿಯರ್ ಖೋ ಖೋ ಚಾಂಪಿಯನ್ ಷಿಪ್ 2026*ರ ಬಾಲಕರ ವಿಭಾಗದಲ್ಲಿ ಕರ್ನಾಟಕ ತಂಡ ಅಮೋಘ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ರೋಮಾಂಚನಕಾರಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರವನ್ನು ಕೇವಲ 2 ಅಂಕಗಳ ಅಂತರದಿಂದ ಮಣಿಸಿತು. ಮಹಾ ರಾಷ್ಟ್ರ 34 ಅಂಕ ಗಳಿಸಿದರೆ, ಕರ್ನಾಟಕ 36 ಅಂಕಗಳನ್ನು ಕಲೆಹಾಕಿ ಪ್ರಶಸ್ತಿಗೆ ಭಾಜನವಾಯಿತು.
ಕರ್ನಾಟಕದ ಆಟಗಾರರು ವೈಯಕ್ತಿಕ ಪ್ರಶಸ್ತಿಗಳಲ್ಲಿಯೂ ಮಿಂಚಿದರು. *ಇಬ್ರಾಹಿಂ* ಅವರಿಗೆ ಪಂದ್ಯಾವಳಿಯ *ಅತ್ಯುತ್ತಮ ಅಟ್ಯಾಕರ್* ಪ್ರಶಸ್ತಿ ಲಭಿಸಿದರೆ, ಪಂದ್ಯಗಳಾದ್ಯಂತ ತೋರಿದ ಅತ್ಯುತ್ತಮ ಪ್ರದರ್ಶನಕ್ಕಾಗಿ *ಅನಿಕೇತ್* ಅವರಿಗೆ *‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’* ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: National Sports Awards 2025: 17 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ, ಖೇಲ್ ರತ್ನ ಈ ಬಾರಿ ಯಾರಿಗೂ ಇಲ್ಲ!
ಬಾಲಕರ ವಿಭಾಗದ ಮೂರನೇ ಸ್ಥಾನವನ್ನು ಒಡಿಶಾ ತಂಡ ಪಡೆದುಕೊಂಡಿತು. ಕಂಚಿನ ಪದಕದ ಪಂದ್ಯದಲ್ಲಿ ಒಡಿಶಾ ತಂಡ ಕೊಲ್ಲಾಪುರವನ್ನು ಸೋಲಿಸಿತು. ಮಹಾರಾಷ್ಟ್ರದ ಪಾರ್ಥ್ ದೇವಕೇತೆ ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿಗೆ ಪಾತ್ರರಾದರು.
ಒಡಿಶಾ AM/NS ಇಂಡಿಯಾ ಖೋ ಖೋ ಹೈ ಪರ್ಫಾರ್ಮೆನ್ಸ್ ಸೆಂಟರ್, ಒಡಿಶಾ ಸರ್ಕಾರದ ಕ್ರೀಡೆ ಮತ್ತು ಯುವ ಸೇವೆಗಳ ಇಲಾಖೆ, ಭಾರತೀಯ ಖೋ ಖೋ ಫೆಡರೇಶನ್ ಹಾಗೂ ಒಡಿಶಾ ಖೋ ಖೋ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಈ ಮೂರು ದಿನಗಳ ಚಾಂಪಿಯನ್ ಷಿಪ್‌ನಲ್ಲಿ ದೇಶದ ವಿವಿಧ ಭಾಗಗಳಿಂದ *12 ತಂಡಗಳ 180 ಕ್ರೀಡಾಪಟುಗಳು* ಭಾಗವಹಿಸಿದ್ದರು.
ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರ ಚಾಂಪಿಯನ್
ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಮಹಾರಾಷ್ಟ್ರ ತಂಡ ಒಡಿಶಾವನ್ನು 24–20 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಪಂಜಾಬ್ ತಂಡ ತಮಿಳುನಾಡನ್ನು ಮಣಿಸಿ ಮೂರನೇ ಸ್ಥಾನ ಪಡೆದುಕೊಂಡಿತು.
ಒಡಿಶಾದ ತುಳಸಿ ನಾಯಕ್ ಅತ್ಯುತ್ತಮ ಅಟ್ಯಾಕರ್, ಮಹಾರಾಷ್ಟ್ರದ ಮೈಥಿಲಿ ಪವಾರ್ ಅತ್ಯುತ್ತಮ ಡಿಫೆಂಡರ್ ಹಾಗೂ ಸ್ನೇಹಾ ಲಮ್ಕಾನೆ ಪಂದ್ಯಾವಳಿಯ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು.
“ಖೋ ಖೋಗೆ ಉತ್ತಮ ಭವಿಷ್ಯ”
ವಿಜೇತ ತಂಡಗಳು ಮತ್ತು ಕ್ರೀಡಾಪಟುಗಳನ್ನು ಅಭಿನಂದಿಸಿದ *AM/NS ಇಂಡಿಯಾದ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ನಿರ್ದೇಶಕ ಹಾಗೂ ಉಪಾಧ್ಯಕ್ಷ ಅಶುತೋಷ್ ತೆಲಾಂಗ್*, ಸರಿಯಾದ ತರಬೇತಿ ಮತ್ತು ಸ್ಪರ್ಧಾತ್ಮಕ ಅವಕಾಶಗಳು ಖೋ ಖೋ ಕ್ರೀಡೆಯನ್ನು ದೇಶದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿ ರೂಪಿಸಬಲ್ಲವು ಎಂದು ಹೇಳಿದರು.
ದೇಶದ ವಿವಿಧ ಭಾಗಗಳ ಪ್ರತಿಭಾವಂತ ತಂಡಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮೂಲಕ ಯುವ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಮುಂದಿನ ಆವೃತ್ತಿಯನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಆಯೋಜಿಸಲು AM/NS ಇಂಡಿಯಾ ಬದ್ಧವಾಗಿದೆ ಎಂದು ತಿಳಿಸಿದರು.
ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಪಂದ್ಯಾವಳಿಗೆ ಚಾಲನೆ ನೀಡಲಾಗಿತ್ತು. ಭಾರತೀಯ ಖೋ ಖೋ ಫೆಡರೇಶನ್ ಅಧ್ಯಕ್ಷ ಸುಧಾಂಶು ಮಿತ್ತಲ್ ಸೇರಿದಂತೆ ಹಲವು ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಆಗಸ್ಟ್ 31ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಜಗನ್ನಾಥ ಸಂಸ್ಕೃತ ವಿಶ್ವವಿದ್ಯಾ ಲಯದ ಕುಲಪತಿ ಪ್ರೊ. ಪ್ರಭಾತ್ ಕುಮಾರ್ ಮಹಾಪಾತ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಒಡಿಶಾ AM/NS ಇಂಡಿಯಾ ಖೋ ಖೋ ಹೈ ಪರ್ಫಾರ್ಮೆನ್ಸ್ ಸೆಂಟರ್‌ನ ಕ್ರೀಡಾಪಟುಗಳು ಖೋ ಖೋ ವಿಶ್ವಕಪ್, ರಾಷ್ಟ್ರೀಯ ಕ್ರೀಡಾಕೂಟ ಮತ್ತು ಖೇಲೋ ಇಂಡಿಯಾ ಯೂತ್ ಗೇಮ್ಸ್ ಸೇರಿದಂತೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ್ದು, ಯುವ ಖೋ ಖೋ ಪ್ರತಿಭೆಗಳನ್ನು ರೂಪಿಸುವ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ.