ಬೆಂಗಳೂರು: ಐಪಿಎಲ್ ಪಾಸ್ ಕೇಳಿ ಭಾರೀ ಟೀಕೆಗೊಳಲಾಗಿದ್ದ ಶಾಸಕರು ಇದೀಗ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ. ಎರೆಡರಡು ವಿಐಪಿ (IPL Pass For MLA's) ಪಾಸ್ ಪಡೆದುಕೊಂಡಿದ್ದರೂ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಹಲವು ಶಾಸಕರು ಗೈರು ಹಾಜರಾಗಿರುವುದು ಕಂಡು ಬಂದಿದೆ. ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ನಡುವಿನ ಪಂದ್ಯಕ್ಕೆ ಒಟ್ಟು 224 ಶಾಸಕರ ಪೈಕಿ ಕೇವಲ 3 ರಿಂದ 4 ಶಾಸಕರು ಮಾತ್ರ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂದ್ಯ ವೀಕ್ಷಿಸಲು ಬೆಂಗಳೂರಿನಲ್ಲಿ ಇರುವುದಿಲ್ಲ ಎಂದು ಮೊದಲೇ ಹೇಳಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಅಸ್ಸಾಂ ವಿಧಾನ ಸಭೆಯಲ್ಲಿ ಚುನಾವಣಾ ಪ್ರಾಚಾರದಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದ್ದರು. ಗೃಹ ಸಚಿವ ಜಿ. ಪರಮೇಶ್ವರ್ ಸಹ ಪಂದ್ಯಾವಳಿ ನೋಡಲು ತೆರಳುವುದರ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಕೆಎಸ್‌ಸಿಎ ನಡೆಸಿದ 'ಗಣಹೋಮದಲ್ಲಿ ಭಾಗವಹಿಸಿದ್ದರು ಮತ್ತು ನಿನ್ನೆ ನಡೆದ ಪಂದ್ಯವನ್ನೂ ವೀಕ್ಷಣೆ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಯಾದ ಬಿ.ಎಸ್ ಯಡಿಯೂರಪ್ಪ ಭಾಗಿಯಾಗಿದ್ದರು.
ಹಲವರಿಂದ ವಿರೋಧ
ಶಾಸಕರಿಗೆ ಐಪಿಎಲ್ ಟಿಕೆಟ್ ಹಂಚಿಕೆ ಕುರಿತು ಹಲವರು ವಿರೋಧ ವ್ಯಕ್ತಪಡಿಸಿದ್ದರು. ಶಾಸಕ ಸುರೇಶ್ ಕುಮಾರ್ ತಮಗೆ ಟಿಕೆಟ್ ಬೇಕಿಲ್ಲ ಎಂದು ಹೇಳಿದ್ದಾರೆ. ಜನಸಾಮಾನ್ಯರ ಅದೆಷ್ಟೋ ಗಂಭೀರ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ವರ್ಷಾನುಗಟ್ಟಲೆ ಪರಿಹಾರ ಸಿಗುವುದಿಲ್ಲ. ಆದರೆ ಶಾಸಕರ ಸೌಲಭ್ಯ, ಟಿಕೆಟ್ ವಿಚಾರ ಬಂದಾಗ ಕೇವಲ 24 ಗಂಟೆಯೊಳಗೆ ಸ್ಪಂದಿಸುವ ಉತ್ಸುಕತೆಯನ್ನು ಸರ್ಕಾರ ತೋರಿರುವುದು ಜನಸಾಮಾನ್ಯರಲ್ಲಿ ಆಶ್ಚರ್ಯ ಹಾಗೂ ಜನಪ್ರತಿನಿಧಿಗಳ ಬಗ್ಗೆ ತಿರಸ್ಕಾರ ಮೂಡುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಐಪಿಎಲ್ ಟಿಕೆಟ್ ಬೇಕು ಎಂದು ಕೇಳುವ ಶಾಸಕರಿಗೆ ನಾಚಿಕೆಯಾಗಬೇಕು ಎಂದು ಹೇಳಿದ್ದಾರೆ. ಟಿಕೆಟ್ ಬೇಕಿದ್ದರೆ ದುಡ್ಡು ಪಾವತಿಸಿ ಹೋಗಲಿ. ಈ ರೀತಿಯ ಚರ್ಚೆಗಳಿಂದ ಶಾಸಕರ ಘನತೆ ಕಡಿಮೆಯಾಗುತ್ತಿದೆ ಎಂದು ಅವರು ಅಸಮಧಾನ ಹೊರಹಾಕಿದ್ದಾರೆ.